Perth Test: ಬ್ರಾಥ್‌ವೇಟ್‌ ಶತಕ, ರೋಚಕಘಟ್ಟದತ್ತ ಆಸ್ಟ್ರೇಲಿಯಾ-ವಿಂಡೀಸ್ ಟೆಸ್ಟ್..!

Published : Dec 03, 2022, 04:10 PM IST
Perth Test: ಬ್ರಾಥ್‌ವೇಟ್‌ ಶತಕ, ರೋಚಕಘಟ್ಟದತ್ತ ಆಸ್ಟ್ರೇಲಿಯಾ-ವಿಂಡೀಸ್ ಟೆಸ್ಟ್..!

ಸಾರಾಂಶ

ಕುತೂಹಲ ಘಟ್ಟದತ್ತ ಆಸ್ಟ್ರೇಲಿಯಾ-ವೆಸ್ಟ್‌ ಇಂಡೀಸ್ ನಡುವಿನ ಮೊದಲ ಟೆಸ್ಟ್ ಮೊದಲ ಟೆಸ್ಟ್ ಪಂದ್ಯಕ್ಕೆ ಪರ್ತ್ ಕ್ರಿಕೆಟ್ ಮೈದಾನ ಆತಿಥ್ಯ ಅಜೇಯ ಶತಕ ಸಿಡಿಸಿ ಆಸರೆಯಾಗಿರುವ ವಿಂಡೀಸ್ ನಾಯಕ ಕ್ರೆಗ್ ಬ್ರಾಥ್‌ವೇಟ್

ಪರ್ತ್‌(ಡಿ.03): ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೊದಲ ಟೆಸ್ಟ್‌ ಪಂದ್ಯದ 4ನೇ ಇನಿಂಗ್ಸ್‌ನಲ್ಲಿ ಪ್ರವಾಸಿ ವೆಸ್ಟ್‌ ಇಂಡೀಸ್ ತಂಡವು ಹೋರಾಟ ನೀಡುತ್ತಿದೆ. ವಿಂಡೀಸ್ ತಂಡದ ಪರ ನಾಯಕನ ಆಟ ಪ್ರದರ್ಶಿಸುತ್ತಿರುವ ಕ್ರೆಗ್ ಬ್ರಾಥ್‌ವೇಟ್(101*) ಅಜೇಯ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಆಸ್ಟ್ರೇಲಿಯಾ ನೀಡಿದ್ದ 498 ರನ್‌ಗಳ ಸವಾಲಿನ ಗುರಿ ಬೆನ್ನತ್ತಿರುವ ವೆಸ್ಟ್ ಇಂಡೀಸ್ ತಂಡವು ನಾಲ್ಕನೇ ದಿನದಾಟದಂತ್ಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 192 ರನ್ ಬಾರಿಸಿದೆ. ಕೊನೆಯ ದಿನ ವಿಂಡೀಸ್ ಈ ಪಂದ್ಯ ಗೆಲ್ಲಲು 306 ರನ್‌ ಗಳಿಸಬೇಕಿದೆ. ಇನ್ನು ಆಸ್ಟ್ರೇಲಿಯಾ 7 ವಿಕೆಟ್ ಕಬಳಿಸಿದರೇ ಮೊದಲ ಟೆಸ್ಟ್‌ ಆಸೀಸ್ ಪಾಲಾಗಲಿದೆ.

ಆಸ್ಟ್ರೇಲಿಯಾ ನೀಡಿದ್ದ ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ ಮತ್ತೊಮ್ಮೆ ತೇಜನಾರಣ್ ಚಂದ್ರಪಾಲ್ ಹಾಗೂ ಕ್ರೆಗ್ ಬ್ರಾಥ್‌ವೇಟ್ ಶತಕದ ಜತೆಯಾಟವಾಡುವ ಮೂಲಕ ಭರ್ಜರಿ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 116 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಪಾದಾರ್ಪಣೆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಅರ್ಧಶತಕ(51) ಸಿಡಿಸಿದ್ದ ತೇಜನಾರಣ್ ಚಂದ್ರಪಾಲ್, ಎರಡನೇ ಇನಿಂಗ್ಸ್‌ನಲ್ಲಿ 45 ರನ್ ಬಾರಿಸಿ ಮಿಚೆಲ್ ಸ್ಟಾರ್ಕ್‌ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಸಮರ್ಥ್‌ ಬ್ರೂಕ್ಸ್‌ 11 ರನ್ ಬಾರಿಸಿ ನೇಥನ್ ಲಯನ್‌ಗೆ ವಿಕೆಟ್ ಒಪ್ಪಿಸಿದರು. 

ಕಾಂಗರೂಗಳೆದುರು ಬ್ರಾಥ್‌ವೇಟ್‌ ದಿಟ್ಟ ಹೋರಾಟ: ಆಸ್ಟ್ರೇಲಿಯಾ ನೀಡಿದ್ದ ಕಠಿಣ ಗುರಿ ಬೆನ್ನತ್ತಿರುವ ಕೆರಿಬಿಯನ್ ಪಡೆಗೆ ನಾಯಕ ಕ್ರೆಗ್ ಬ್ರಾಥ್‌ವೇಟ್ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ತೇಜನಾರಣ್ ಚಂದ್ರಪಾಲ್ ಜತೆ ಶತಕದ ಜತೆಯಾಟ ನಿಭಾಯಿಸಿದ ಕ್ರೆಗ್ ಬ್ರಾಥ್‌ವೇಟ್, ಆ ಬಳಿಕವೂ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ಆಸ್ಟ್ರೇಲಿಯಾ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಕ್ರೆಗ್ ಬ್ರಾಥ್‌ವೇಟ್‌ 166 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಹಿತ 101 ರನ್ ಬಾರಿಸಿದ್ದು, ವೆಸ್ಟ್ ಇಂಡೀಸ್ ತಂಡವನ್ನು ಸೋಲಿನಿಂದ ಪಾರು ಮಾಡಿ ಗೆಲುವಿನ ದಡ ಸೇರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Aus vs WI: ಮಾರ್ನಸ್ ಲಬುಶೇನ್ ಶತಕ, ಮೊದಲ ಟೆಸ್ಟ್ ಗೆಲ್ಲಲು ವಿಂಡೀಸ್‌ಗೆ ಕಠಿಣ ಗುರಿ

ಇನ್ನು ಇದಕ್ಕೂ ಮೊದಲು ಪ್ರತಿಭಾನ್ವಿತ ಕ್ರಿಕೆಟಿಗ ಮಾರ್ನಸ್ ಲಬುಶೇನ್ ಬಾರಿಸಿದ ಅಜೇಯ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ಎದುರು ಆಸ್ಟ್ರೇಲಿಯಾ ತಂಡವು ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ಕಳೆದುಕೊಂಡು 182 ರನ್ ಬಾರಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ್ದ ಮಾರ್ನಸ್ ಲಬುಶೇನ್, ಎರಡನೇ ಇನಿಂಗ್ಸ್‌ನಲ್ಲಿ 110 ಎಸೆತಗಳಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 104 ರನ್ ಸಿಡಿಸಿ ಮಿಂಚಿದರು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ ಜಗತ್ತಿನ 8ನೇ ಬ್ಯಾಟರ್ ಎನ್ನುವ ಹಿರಿಮೆಗೆ ಲಬುಶೇನ್ ಪಾತ್ರರಾದರು.  ಇನ್ನು ಮತ್ತೊಂದು ತುದಿಯಲ್ಲಿ ಸ್ಟೀವ್ ಸ್ಮಿತ್ 20 ರನ್ ಬಾರಿಸಿ ಅಜೇಯರಾಗುಳಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜಡ್ಡು ಬಿಟ್ಟುಕೊಟ್ಟು ಮರಿ ಜಡೇಜಾಗೆ 14.2 ಕೋಟಿ ಖರ್ಚು ಮಾಡಿದ ಸಿಎಸ್‌ಕೆ! ಯಾರು ಈ ಪ್ರಶಾಂತ್ ವೀರ್?
ದೇಶೀ ಕ್ರಿಕೆಟ್‌ನ Uncapped ಜೋಡೆತ್ತು ಖರೀದಿಸಲು ದಾಖಲೆ ಮೊತ್ತ ಖರ್ಚು ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌!