
ಮೆಲ್ಬೊರ್ನ್(ಫೆ.22): ಬರೋಬ್ಬರಿ ಎರಡು ದಶಕಗಳ ಬಳಿಕ ಪಾಕಿಸ್ತಾನ ಪ್ರವಾಸ ಮಾಡುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು (Australia Cricket Team) ಮೊದಲಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿ ಮುಕ್ತಾಯದ ಬಳಿಕ ಸೀಮಿತ ಓವರ್‌ಗಳ ಸರಣಿಯನ್ನಾಡಲಿದೆ. ಇದೀಗ ಸೀಮಿತ ಓವರ್‌ಗಳ ಸರಣಿಗೆ 16 ಆಟಗಾರರನ್ನೊಳಗೊಂಡ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ತಾರಾ ಆಟಗಾರರಾದ ಡೇವಿಡ್ ವಾರ್ನರ್ (David Warner), ಪ್ಯಾಟ್ ಕಮಿನ್ಸ್ (Pat Cummins) ಸೇರಿದಂತೆ ಹಲವು ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಬರೋಬ್ಬರಿ 24 ವರ್ಷಗಳ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ಪ್ರವಾಸವನ್ನು ಕೈಗೊಂಡಿದೆ. 3 ಪಂದ್ಯಗಳ ಟೆಸ್ಟ್ ಸರಣಿ ಮುಕ್ತಾಯದ ಬಳಿಕ ಆಸ್ಟ್ರೇಲಿಯಾ ತಂಡವು 3 ಪಂದ್ಯಗಳ ಏಕದಿನ ಸರಣಿ ಹಾಗೂ ಒಂದು ಟಿ20 ಪಂದ್ಯವನ್ನಾಡಲಿದೆ. ಸೀಮಿತ ಓವರ್‌ಗಳ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್‌ವುಡ್ (Josh Hazlewood) ಹಾಗೂ ಮಿಚೆಲ್ ಸ್ಟಾರ್ಕ್ (Mitchell Starc) ಅವರಿಲ್ಲದೇ ಕಣಕ್ಕಿಳಿಯಲಿದೆ. ಇನ್ನುಳಿದಂತೆ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಅವರಿಗೂ ಸಹ ವಿಶ್ರಾಂತಿ ನೀಡಲಾಗಿದೆ. ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದರಿಂದ ಪಾಕ್ ಎದುರಿನ ಸೀಮಿತ ಓವರ್‌ಗಳಿಂದ ಹೊರಗುಳಿದಿದ್ದಾರೆ.
ನಾವು ಪ್ರತಿಭಾನ್ವಿತ ಆಟಗಾರರನ್ನು ಪಾಕ್ ಎದುರಿನ ಸರಣಿಗೆ ಆಯ್ಕೆ ಮಾಡಿಕೊಂಡಿದ್ದೇವೆ. ನಾವು ಸಾಕಷ್ಟು ಯುವ ಹಾಗೂ ಅನುಭವಿ ಆಟಗಾರರನ್ನು ತಂಡದಲ್ಲಿ ಅವಕಾಶ ಕಲ್ಪಿಸಿದ್ದು, ಮುಂಬರುವ ಟಿ20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಕಟ್ಟಲಾಗುತ್ತಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಜಾರ್ಜ್ ಬೈಲಿ ಹೇಳಿದ್ದಾರೆ.
ಮಾರ್ಚ್ 04ರಂದು ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ರಾವುಲ್ಪಿಂಡಿ ಆತಿಥ್ಯವನ್ನು ವಹಿಸಲಿದೆ. ಇನ್ನು ಮಾರ್ಚ್ 12ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಕರಾಚಿ ಕ್ರಿಕೆಟ್ ಮೈದಾನ ಸಾಕ್ಷಿಯಾಗಲಿದೆ. ಇನ್ನು ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯಕ್ಕೆ ಲಾಹೋರ್‌ನಲ್ಲಿರುವ ಗಡಾಫಿ ಸ್ಟೇಡಿಯಂ ಆತಿಥ್ಯವನ್ನು ವಹಿಸಲಿದೆ. ಮೊದಲಿಗೆ ಟೆಸ್ಟ್ ಸರಣಿ ಆರಂಭವಾಗುವುದರಿಂದಾಗಿ, ಸೀಮಿತ ಓವರ್‌ಗಳ ಸರಣಿಗೆ ಆಯ್ಕೆಯಾದ ಆಸ್ಟ್ರೇಲಿಯಾದ ಆಟಗಾರರು ಮಧ್ಯಭಾಗದಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಪಾಕಿಸ್ತಾನ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ಮಾರ್ಚ್ 29ರಿಂದ ರಾವುಲ್ಪಿಂಡಿಯಲ್ಲಿ ಆರಂಭವಾಗಲಿದೆ.
Aus vs Pak: 24 ವರ್ಷಗಳ ಬಳಿಕ ಪಾಕ್ ಪ್ರವಾಸಕ್ಕೆ ಆಸ್ಟ್ರೇಲಿಯಾ ಒಪ್ಪಿಗೆ..!
ಆಸ್ಟ್ರೇಲಿಯಾ ಕ್ರಿಕೆಟ್ ತಂಡವು 1998ರಲ್ಲಿ ಕೊನೆಯ ಬಾರಿಯ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಿತ್ತು. ಇದಾದ ಬಳಿಕ ಕಾಂಗರೂ ಪಡೆ ಪಾಕ್ ಪ್ರವಾಸ ಮಾಡಲು ಕಾಲ ಕೂಡಿ ಬಂದಿರಲಿಲ್ಲ. ಇದೆಲ್ಲದರ ನಡುವೆ 2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವು ಟೆಸ್ಟ್ ಸರಣಿಯನ್ನಾಡಲು ಪಾಕ್ ಪ್ರವಾಸದಲ್ಲಿದ್ದಾಗ ಉಗ್ರರು ಆಟಗಾರರಿದ್ದ ಬಸ್ ಮೇಲೆ ಗುಂಡಿನ ದಾಳಿ ನಡೆಸಿ ಭಯೋತ್ಪಾದಕ ಕೃತ್ಯ ಎಸಗಿದ್ದರು. ಹೀಗಾಗಿ ಹಲವು ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಗಳು ಪಾಕ್ ಪ್ರವಾಸ ಮಾಡಲು ಹಿಂದೇಟು ಹಾಕಿದ್ದವು.
ಪಾಕಿಸ್ತಾನ ಎದುರಿನ ಏಕದಿನ ಹಾಗೂ ಟಿ20ಗೆ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:
ಆ್ಯರೋನ್ ಪಿಂಚ್(ನಾಯಕ), ಶಾನ್ ಅಬ್ಬೋಟ್, ಆಸ್ಟನ್ ಅಗರ್, ಜೇಸನ್ ಬೆಹ್ರನ್‌ಡ್ರಫ್, ಅಲೆಕ್ಸ್ ಕ್ಯಾರಿ, ನೇಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಶ್, ಮಾರ್ನಸ್ ಲಬುಶೇನ್, ಮಿಚೆಲ್ ಮಾರ್ಶ್, ಬೆನ್ ಮೆಕ್‌ಡರ್ಮೊಟ್, ಕೇನ್ ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಮಾರ್ನಸ್ ಸ್ಟೋನಿಸ್, ಆಡಂ ಜಂಪಾ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.