
ನಿಶಿನ್ (ಜಪಾನ್): ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್‌ನ ಎರಡನೇ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಗೆಲ್ಲಲು ಭಾರತ 170 ರನ್‌ಗಳ ಗುರಿ ನೀಡಿದೆ. ಸ್ಪಿನ್ನರ್‌ಗಳಿಗೆ ನೆರವಾಗುತ್ತಿದ್ದ ಪಿಚ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ, 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿತು. 46 ಎಸೆತಗಳಲ್ಲಿ ಅಜೇಯ 80 ರನ್ ಸಿಡಿಸಿದ ಇಶಾನ್ ಕಿಶನ್ ತಂಡದ ಟಾಪ್ ಸ್ಕೋರರ್ ಎನಿಸಿಕೊಂಡರು. ಯುವ ಆಟಗಾರ ವೈಭವ್ ಸೂರ್ಯವಂಶಿ 21 ಎಸೆತಗಳಲ್ಲಿ 38 ರನ್ ಚಚ್ಚಿ ಸ್ಪೋಟಕ ಆರಂಭ ಒದಗಿಸಿದರು. ಆದರೆ, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಮತ್ತು ತಿಲಕ್ ವರ್ಮಾ ತೀವ್ರ ನಿರಾಸೆ ಮೂಡಿಸಿದರು. ಶ್ರೀಲಂಕಾ ಪರ ನಾಯಕ ಸಹನ್ ಅರಚ್ಚಿಗೆ 28 ರನ್ ನೀಡಿ 2 ವಿಕೆಟ್ ಪಡೆದರೆ, ತರಿಂದು ರತ್ನಾಯಕೆ 32 ರನ್ ಕೊಟ್ಟು 2 ವಿಕೆಟ್ ಕಿತ್ತರು.
ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿರುವ ಶ್ರೀಲಂಕಾ ತಂಡವು ಪವರ್‌ಪ್ಲೇ ನೊಳಗೆ ಅರ್ಧದಷ್ಟು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದಾರೆ. ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಲಂಕಾ ಆರಂಭದಲ್ಲೇ ವಿಕೆಟ್ ಕೈಚೆಲ್ಲಿದೆ. ಶ್ರೀಲಂಕಾದ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ಮೊದಲ ಐದು ಓವರ್ ಅಂತ್ಯದ ವೇಳೆಗೆ ಶ್ರೀಲಂಕಾ ತಂಡವು 31 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿದೆ. ಜಸ್ಪ್ರೀತ್ ಬುಮ್ರಾ ಹಾಗೂ ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರೆ, ಲಸಿತ್ ಕ್ರೊಸ್‌ಪುಲ್ಲೆ ಹಾಗೂ ನುವಾನಿದು ಫರ್ನಾಂಡೊ ರನೌಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು
ಟಾಸ್ ಸೋತ ಬಳಿಕ ಕ್ರೀಸ್‌ಗಿಳಿದ ಭಾರತದ ಪರ ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದರು. ಆದರೆ, ಎರಡನೇ ಓವರ್‌ನ ಎರಡನೇ ಎಸೆತದಲ್ಲೇ ಸಹನ್ ಅರಚ್ಚಿಗೆ ಅವರು ಅಭಿಷೇಕ್ ಶರ್ಮಾ (3 ಎಸೆತಗಳಲ್ಲಿ 7 ರನ್) ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಸಂಜು ಸ್ಯಾಮ್ಸನ್ ಕೂಡ ಹೇಳಿಕೊಳ್ಳುವಂತಹ ಆಟವಾಡಲಿಲ್ಲ. ಒಂದು ಬೌಂಡರಿ ಬಾರಿಸಿದರೂ, 9 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ತರಿಂದು ರತ್ನಾಯಕೆ ಎಸೆತದಲ್ಲಿ ಸಂಜು ಕ್ಲೀನ್ ಬೌಲ್ಡ್ ಆದರು. ನಾಲ್ಕನೇ ಕ್ರಮಾಂಕದಲ್ಲಿ ಬಂದ ನಾಯಕ ಶ್ರೇಯಸ್ ಅಯ್ಯರ್, ವೈಭವ್ ಜೊತೆ ಸೇರಿ ಉತ್ತಮ ಜೊತೆಯಾಟವಾಡಿ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಬಿರುಸಿನ ಬ್ಯಾಟಿಂಗ್ ಮಾಡಿದ ವೈಭವ್ ಪವರ್ ಪ್ಲೇನಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಲು ನೆರವಾದರು.
ಪವರ್ ಪ್ಲೇ ಮುಗಿದ ಬೆನ್ನಲ್ಲೇ ವೈಭವ್ ಔಟಾದರು. ಅವರು 2 ಸಿಕ್ಸರ್ ಹಾಗೂ 6 ಫೋರ್‌ಗಳ ನೆರವಿನಿಂದ 38 ರನ್ ಚಚ್ಚಿದರು. ಇಶಾನ್ ಕಿಶನ್ ಬಿರುಸಿನ ಆಟವಾಡಿದರೂ, ರನ್ ವೇಗ ಹೆಚ್ಚಿಸುವ ಭರದಲ್ಲಿ 10ನೇ ಓವರ್‌ನಲ್ಲಿ ಶ್ರೇಯಸ್ ವಿಕೆಟ್ ಒಪ್ಪಿಸಿದರು. ನಾಯಕನ ಕೊಡುಗೆ ಕೇವಲ 13 ಎಸೆತಗಳಲ್ಲಿ 13 ರನ್. ಅಕ್ಷರ್ ಪಟೇಲ್ ಜೊತೆಗೂಡಿದ ಇಶಾನ್ ಕಿಶನ್ 13ನೇ ಓವರ್‌ನಲ್ಲಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಇದರ ಬೆನ್ನಲ್ಲೇ ಅಕ್ಷರ್ (13 ಎಸೆತಗಳಲ್ಲಿ 8 ರನ್) ಮತ್ತು ಮುಂದಿನ ಓವರ್‌ನಲ್ಲಿ ತಿಲಕ್ ವರ್ಮಾ ಔಟಾಗುವ ಮೂಲಕ ಭಾರತ 114-5 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತು. 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಇಶಾನ್ ಕಿಶನ್ ಒಂದೆಡೆ ಅಬ್ಬರಿಸಿದರೆ, ಇನ್ನೊಂದೆಡೆ ಅವರಿಗೆ ಸಾಥ್ ನೀಡಲು ಯಾರೂ ಇರಲಿಲ್ಲ. ಶಿವಂ ದುಬೆ (9 ಎಸೆತಗಳಲ್ಲಿ 3 ರನ್) 19ನೇ ಓವರ್‌ನಲ್ಲಿ ನಿರ್ಗಮಿಸಿದರು. 4 ಫೋರ್ ಹಾಗೂ 5 ಸಿಕ್ಸರ್ ಸಿಡಿಸಿದ ಇಶಾನ್ ಕಿಶನ್ 46 ಎಸೆತಗಳಲ್ಲಿ 80 ರನ್ ಗಳಿಸಿ ಅಜೇಯರಾಗಿ ಉಳಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.