Asia Cup 2022 ಇಂದಿನಿಂದ ಸೂಪರ್‌-4: ಆಫ್ಘನ್‌-ಲಂಕಾ ಸೆಣಸು

By Naveen KodaseFirst Published Sep 3, 2022, 11:40 AM IST
Highlights

ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತದ ಪಂದ್ಯಗಳಿಗೆ ಕ್ಷಣಗಣನೆ
ಮೊದಲ ಪಂದ್ಯದಲ್ಲಿ ಆಫ್ಘಾನಿಸ್ತಾನ-ಶ್ರೀಲಂಕಾ ಕ್ರಿಕೆಟ್ ತಂಡಗಳ ಸೆಣಸಾಟ
ಉದ್ಘಾಟನಾ ಪಂದ್ಯದಲ್ಲಿ ಲಂಕಾಗೆ ಸೋಲುಣಿಸಿದ್ದ ಆಫ್ಘಾನಿಸ್ತಾನ

ಶಾರ್ಜಾ(ಆ.03): ಸೂಪರ್‌-4 ಹಂತಕ್ಕೆ ಶನಿವಾರ ಚಾಲನೆ ಸಿಗಲಿದ್ದು, ಮೊದಲ ಪಂದ್ಯದಲ್ಲಿ ಆಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸೆಣಸಿದ್ದ ವೇಳೆ ಲಂಕಾವನ್ನು 8 ವಿಕೆಟ್‌ಗಳಿಂದ ಬಗ್ಗುಬಡಿದಿದ್ದ ಆಫ್ಘನ್‌ ಮತ್ತೊಂದು ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದೆ. ಆಫ್ಘನ್‌ 2ನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿತ್ತು. ಮತ್ತೊಂದೆಡೆ ಶ್ರೀಲಂಕಾ, ಗುಂಪು ಹಂತದ 2ನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 2 ವಿಕೆಟ್‌ಗಳಿಂದ ರೋಚಕವಾಗಿ ಸೋಲಿಸಿ ಸೂಪರ್‌-4ಗೆ ಪ್ರವೇಶಿಸಿತ್ತು. ಟೂರ್ನಿ ಯುಎಇನಲ್ಲಿ ನಡೆಯುತ್ತಿದ್ದರೂ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯೇ ಆತಿಥ್ಯ ವಹಿಸುತ್ತಿದೆ. ಹೀಗಾಗಿ ‘ಬಿ’ ಗುಂಪಿನಲ್ಲಿ 2ನೇ ಸ್ಥಾನ ಪಡೆದರೂ ‘ಬಿ 1’ ಎಂದು ಲಂಕಾವನ್ನು ಪರಿಗಣಿಸಲಾಗುತ್ತಿದೆ.

ಸೂಪರ್‌-4 ಹಂತದಲ್ಲಿ ಎಲ್ಲಾ ತಂಡಗಳು ಪರಸ್ಪರ ಎದುರಾಗಲಿದೆಯಾದರೂ, ಆಫ್ಘಾನಿಸ್ತಾನ ಸತತ 2 ದಿನ ಪಂದ್ಯವಾಡಲಿದೆ. ಆದರೆ ಶ್ರೀಲಂಕಾಗೆ 2 ದಿನ ವಿಶ್ರಾಂತಿ ದೊರೆಯಲಿದೆ. ವೇಳಾಪಟ್ಟಿ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳಿಂದ ಆಕ್ಷೇಪ ವ್ಯಕ್ತವಾಗಿದೆ.

ಪಂದ್ಯ: ಸಂಜೆ 7.30ಕ್ಕೆ, 

ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಸೆಪ್ಟೆಂಬರ್ 04ರಂದು ಭಾರತ-ಪಾಕಿಸ್ತಾನ ಸೆಣಸಾಟ

ಶಾರ್ಜಾ: ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ 2ನೇ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಗೆ ಮುಹೂರ್ತ ನಿಗದಿಯಾಗಿದೆ. ಭಾನುವಾರ ಬದ್ಧವೈರಿಗಳು ಮತ್ತೊಮ್ಮೆ ಮುಖಾಮುಖಿಯಾಗಲಿದ್ದಾರೆ. ಹಾಂಕಾಂಗ್‌ ವಿರುದ್ಧ ಶುಕ್ರವಾರ ನಡೆದ ನಾಕೌಟ್‌ ಪಂದ್ಯದಲ್ಲಿ 155 ರನ್‌ಗಳ ಅಮೋಘ ಗೆಲುವು ಸಾಧಿಸಿದ ಪಾಕಿಸ್ತಾನ, ‘ಎ’ ಗುಂಪಿನಲ್ಲಿ 2ನೇ ಸ್ಥಾನಿಯಾಗಿ ಸೂಪರ್‌-4 ಹಂತಕ್ಕೆ ಪ್ರವೇಶ ಪಡೆಯಿತು.

‘ಎ’ ಗುಂಪಿನಿಂದ ಭಾರತ, ಪಾಕಿಸ್ತಾನ ‘ಬಿ’ ಗುಂಪಿನಿಂದ ಶ್ರೀಲಂಕಾ,  ಆಫ್ಘಾನಿಸ್ತಾನನಿಸ್ತಾನ ಸೂಪರ್‌-4ಗೇರಿದ್ದು ನಾಲ್ಕೂ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಶುಕ್ರವಾರದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಪಾಕಿಸ್ತಾನ 20 ಓವರಲ್ಲಿ 2 ವಿಕೆಟ್‌ಗೆ 193 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಕಠಿಣ ಗುರಿ ಬೆನ್ನತ್ತಿದ ಹಾಂಕಾಂಗ್‌ 10.4 ಓವರಲ್ಲಿ ಕೇವಲ 38 ರನ್‌ಗೆ ಆಲೌಟ್‌ ಆಯಿತು.

Asia Cup 2022 ಹಾಂಕಾಂಗ್‌ನ್ನು 38 ರನ್‌ಗೆ ಆಲೌಟ್ ಮಾಡಿದ ಪಾಕ್, ಸೆ.04ಕ್ಕೆ ಮತ್ತೆ ಭಾರತ ಪಾಕಿಸ್ತಾನ ಪಂದ್ಯ!

ಎರಡಂಕಿ ತಲುಪಲಿಲ್ಲ: ಹಾಂಕಾಂಗ್‌ನ ಯಾವ ಬ್ಯಾಟರ್‌ ಕೂಡ ಎರಡಂಕಿ ಮೊತ್ತ ತಲುಪಲಿಲ್ಲ. ಇತರೆ ಮೂಲಕ ದೊರೆತ 10 ರನ್‌, ಹಾಂಕಾಂಗ್‌ನ ಎಲ್ಲಾ ಬ್ಯಾಟರ್‌ಗಳ ವೈಯಕ್ತಿಕ ಮೊತ್ತಕ್ಕಿಂತ ಹೆಚ್ಚೆನಿಸಿಕೊಂಡಿತು. ನಾಯಕ ನಿಜಾಖತ್‌ ಖಾನ್‌ 8 ರನ್‌ ಗಳಿಸಿದ್ದು ಗರಿಷ್ಠ ವೈಯಕ್ತಿಕ ಮೊತ್ತ. ಸ್ಪಿನ್ನರ್‌ ಶದಾಬ್‌ ಖಾನ್‌ 4, ಮೊಹಮದ್‌ ನವಾಜ್‌ 3 ವಿಕೆಟ್‌ ಕಿತ್ತರು. ವೇಗಿ ನಸೀಂ ಶಾಗೆ 2 ವಿಕೆಟ್‌ ಸಿಕ್ಕಿತು.

ಆಕರ್ಷಕ ಬ್ಯಾಟಿಂಗ್‌: ಬಾಬರ್‌ ಆಜಂ(09) ಬೇಗ ಔಟಾದರೂ ಪಾಕಿಸ್ತಾನಕ್ಕೆ ಮೊಹಮದ್‌ ರಿಜ್ವಾನ್‌(78), ಫಖರ್‌ ಜಮಾನ್‌(53) ಆಸರೆಯಾದರು. ಇವರಿಬ್ಬರು 2ನೇ ವಿಕೆಟ್‌ಗೆ 116 ರನ್‌ ಸೇರಿಸಿದರು. 15 ಎಸೆತದಲ್ಲಿ 5 ಸಿಕ್ಸರ್‌ನೊಂದಿಗೆ 35 ರನ್‌ ಚಚ್ಚಿದ ಖುಷ್ದಿಲ್‌ ಶಾ ತಂಡ ಬೃಹತ್‌ ಮೊತ್ತ ಪೇರಿಸಲು ಕಾರಣರಾದರು. 20ನೇ ಓವರಲ್ಲಿ ಪಾಕಿಸ್ತಾನ 29 ರನ್‌ ಚಚ್ಚಿತು.

ಸ್ಕೋರ್‌: 
ಪಾಕಿಸ್ತಾನ 193/2(ರಿಜ್ವಾನ್‌ 78, ಫಖರ್‌ 53, ಎಹ್ಸಾನ್‌ 2-28) 
ಹಾಂಕಾಂಗ್‌ 10.4 ಓವರಲ್ಲಿ 38/10(ನಿಜಾಖತ್‌ 08, ಶದಾಬ್‌ 4-8)

ಸೂಪರ್‌-4 ವೇಳಾಪಟ್ಟಿ

ದಿನಾಂಕ ಪಂದ್ಯ ಸ್ಥಳ

ಸೆಪ್ಟೆಂಬರ್ 3 ಆಫ್ಘನ್‌-ಲಂಕಾ ಶಾರ್ಜಾ

ಸೆಪ್ಟೆಂಬರ್ 4 ಭಾರತ-ಪಾಕಿಸ್ತಾನ ದುಬೈ

ಸೆಪ್ಟೆಂಬರ್ 6 ಭಾರತ-ಲಂಕಾ ದುಬೈ

ಸೆಪ್ಟೆಂಬರ್ 7 ಆಫ್ಘನ್‌-ಪಾಕಿಸ್ತಾನ ಶಾರ್ಜಾ

ಸೆಪ್ಟೆಂಬರ್ 8 ಭಾರತ-ಆಫ್ಘನ್‌ ದುಬೈ

ಸೆಪ್ಟೆಂಬರ್ 9 ಲಂಕಾ-ಪಾಕಿಸ್ತಾನ ದುಬೈ
 

click me!