Asia Cup 2022: ಆಫ್ಘಾನ್ ಎದುರಿನ ಪಂದ್ಯ ಟೀಂ ಇಂಡಿಯಾ ಪಾಲಿಗೆ ಆಟಕ್ಕುಂಟು, ಲೆಕ್ಕಕ್ಕಿಲ್ಲ..!

By Kannadaprabha NewsFirst Published Sep 8, 2022, 9:38 AM IST
Highlights

* ಏಷ್ಯಾಕಪ್ ಟೂರ್ನಿಯಲ್ಲಿಂದು ಭಾರತ ಆಫ್ಘಾನಿಸ್ತಾನ ಮುಖಾಮುಖಿ
* ಉಭಯ ತಂಡಗಳ ಪಾಲಿಗೆ ಇದು ಕೇವಲ ಔಪಚಾರಿಕ ಪಂದ್ಯ
* ಈಗಾಗಲೇ ಫೈನಲ್‌ ರೇಸ್‌ನಿಂದ ಹೊರಬಿದ್ದಿರುವ ಉಭಯ ತಂಡಗಳು

ದುಬೈ: ಟಿ20 ವಿಶ್ವಕಪ್‌ಗೆ ಕೆಲವೇ ದಿನಗಳು ಬಾಕಿ ಇದ್ದು, ಟೀಂ ಇಂಡಿಯಾ ಹಲವು ಸಮಸ್ಯೆಗಳಿಂದ ಒದ್ದಾಡುತ್ತಿದೆ. ಏಷ್ಯಾಕಪ್‌ನ ಗುಂಪು ಹಂತದಲ್ಲಿ ಎರಡೂ ಪಂದ್ಯಗಳನ್ನು ಗೆದ್ದಿದ್ದ ರೋಹಿತ್‌ ಶರ್ಮಾ ಪಡೆ, ಸೂಪರ್‌-4 ಹಂತದಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಸೋತು ನಿರಾಸೆ ಅನುಭವಿಸಿದೆ. ಗುರುವಾರ ಸೂಪರ್‌-4ನ ತನ್ನ ಕೊನೆಯ ಪಂದ್ಯದಲ್ಲಿ ಅಷ್ಘಾನಿಸ್ತಾನ ವಿರುದ್ಧ ಸೆಣಸಲಿದೆ. ಇದು ಟೀಂ ಇಂಡಿಯಾ ಪಾಲಿಗೆ ಕೇವಲ ಔಪಚಾರಿಕ ಪಂದ್ಯವಷ್ಟೇ. 

ಈಗಾಗಲೇ ಏಷ್ಯಾಕಪ್ ಟೂರ್ನಿಯಲ್ಲಿ ತಲಾ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಶ್ರೀಲಂಕಾ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಫೈನಲ್‌ ಪಂದ್ಯಕ್ಕೆ ಅರ್ಹತೆಯನ್ನು ಗಿಟ್ಟಿಸಿಕೊಂಡಿವೆ. ಇನ್ನೊಂದೆಡೆ ಸತತ ಎರಡು ಪಂದ್ಯಗಳನ್ನು ಸೋತಿರುವ ಆಫ್ಘಾನಿಸ್ತಾನ ಹಾಗೂ ಟೀಂ ಇಂಡಿಯಾ, ಈಗಾಗಲೇ ಫೈನಲ್‌ ರೇಸ್‌ನಿಂದ ಹೊರಬಿದ್ದಿದ್ದು, ಪ್ರತಿಷ್ಟೆಗಾಗಿ ಸೆಣಸಾಟ ನಡೆಸಲಿವೆ. ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ವಿಫಲವಾಗಿರುವ ಭಾರತ, ಹೊಸ ಸಮಸ್ಯೆಗಳಿಗೆ ಉತ್ತರ ಹುಡುಕಿಕೊಳ್ಳುವ ಅನಿವಾರ್ಯತೆಗೂ ಸಿಲುಕಿದೆ. ಕೋಚ್‌ ರಾಹುಲ್‌ ದ್ರಾವಿಡ್‌ ಕೆಲ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ.

ಆರಂಭಿಕ ಬ್ಯಾಟರ್‌ ಕೆ.ಎಲ್‌.ರಾಹುಲ್‌ ಲಯದ ಸಮಸ್ಯೆ ಎದುರಿಸುತ್ತಿದ್ದು, ಅವರನ್ನು ತಂಡದಲ್ಲಿ ಮುಂದುವರಿಸುವ ಬಗ್ಗೆ ಗೊಂದಲ ಎದುರಾದರೂ ಅಚ್ಚರಿಯಿಲ್ಲ. ಇನ್ನು ಮಧ್ಯಮ ಕ್ರಮಾಂಕದ ಸಮಸ್ಯೆಗೂ ಪರಿಹಾರ ಸಿಗುತ್ತಿಲ್ಲ. 7ರಿಂದ 15ನೇ ಓವರ್‌ ವರೆಗಿನ ಅವಧಿಯಲ್ಲಿ ತಂಡ ಉತ್ತಮ ಸ್ಟ್ರೈಕ್‌ರೇಟ್‌ನೊಂದಿಗೆ ರನ್‌ ಕಲೆಹಾಕುತ್ತಿಲ್ಲ. ಕೊನೆ 5 ಓವರಲ್ಲಿಯೂ ಸ್ಥಿರ ಪ್ರದರ್ಶನ ಕಂಡು ಬರುತ್ತಿಲ್ಲ. ಅಲ್ಲದೇ ದುಬೈ ಪಿಚ್‌ನಲ್ಲಿ ಮೊದಲು ಬ್ಯಾಟ್‌ ಮಾಡುವ ತಂಡ ಕನಿಷ್ಠ 185 ರನ್‌ ಗಳಿಸಿದರಷ್ಟೇ ರಕ್ಷಿಸಿಕೊಳ್ಳುವ ಸಾಧ್ಯತೆ ಇರಲಿದೆ. ಇಲ್ಲಿ ನಡೆದಿರುವ ಕೊನೆ 19 ಪಂದ್ಯಗಳಲ್ಲಿ 17ರಲ್ಲಿ ಗುರಿ ಬೆನ್ನತ್ತಿದ ತಂಡ ಜಯ ಗಳಿಸಿದೆ.

ಅಗತ್ಯವಿರುವಷ್ಟುರನ್‌ ಕಲೆಹಾಕದಿದ್ದಾಗ ಸಹಜವಾಗಿಯೇ ಬೌಲರ್‌ಗಳು ಒತ್ತಡಕ್ಕೆ ಸಿಲುಕಲಿದ್ದಾರೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಹರ್ಷಲ್‌ ಪಟೇಲ್, ರವೀಂದ್ರ ಜಡೇಜಾರಂತಹ ಅನುಭವಿಗಳ ಅನುಪಸ್ಥಿತಿ ಭಾರತವನ್ನು ಬಲವಾಗಿ ಕಾಡುತ್ತಿದೆ. ಭುವನೇಶ್ವರ್‌ ಡೆತ್‌ ಓವರ್‌ಗಳಲ್ಲಿ ದುಬಾರಿಯಾಗುತ್ತಿದ್ದಾರೆ. ಚಹಲ್‌ ವಿಕೆಟ್‌ ಕೀಳುವಲ್ಲಿ ಯಶಸ್ವಿಯಾದರೂ ರನ್‌ ನಿಯಂತ್ರಿಸುತ್ತಿಲ್ಲ. ಅಶ್‌ರ್‍ದೀಪ್‌ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ. ಹಾರ್ದಿಕ್‌ ಸ್ಥಿರ ಪ್ರದರ್ಶನ ತೋರಬೇಕಿದೆ.

PAK Vs AFG ಪಾಕಿಸ್ತಾನಕ್ಕೆ ರೋಚಕ ಗೆಲುವು, ಆಫ್ಘಾನ್ ಜೊತೆಗೆ ಭಾರತವೂ ಏಷ್ಯಾಕಪ್‌ನಿಂದ ಔಟ್!

ಮತ್ತೊಂದೆಡೆ ಆಫ್ಘಾನಿಸ್ತಾನ ಬಲಿಷ್ಠ ತಂಡ ಹೊಂದಿದೆ. ತಂಡದ ಅಗ್ರ ಕ್ರಮಾಂಕ ಆಕ್ರಮಣಕಾರಿ ಆಟದಿಂದ ಗಮನ ಸೆಳೆಯುತ್ತಿದ್ದು, ಮಧ್ಯಮ ಕ್ರಮಾಂಕ ಸಹ ಟಿ20 ತಜ್ಞರನ್ನು ಹೊಂದಿದೆ. ರಶೀದ್‌ ಖಾನ್‌, ಮುಜೀಬ್‌, ನಬಿ ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿದ್ದು ಆ ಅನುಭವವನ್ನು ಬಳಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಅಷ್ಘಾನಿಸ್ತಾನವನ್ನು ಭಾರತ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಕೆ ಎಲ್ ರಾಹುಲ್‌, ವಿರಾಟ್ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ರಿಷಭ್ ಪಂತ್‌/ದಿನೇಶ್ ಕಾರ್ತಿಕ್‌, ಹಾರ್ದಿಕ್‌ ಪಾಂಡ್ಯ, ದೀಪಕ್ ಚಹರ್‌, ಭುವನೇಶ್ವರ್‌ ಕುಮಾರ್, ರವಿಚಂದ್ರನ್ ಅಶ್ವಿನ್‌, ಅಶ್‌ರ್‍ದೀಪ್‌ ಸಿಂಗ್, ಯುಜುವೇಂದ್ರ ಚಹಲ್‌.

ಅಷ್ಘಾನಿಸ್ತಾನ: ಹಜರತ್ತುಲ್ಲಾ, ರಹಮಾನುಲ್ಲಾ, ಇಬ್ರಾಹಿಂ, ನಜೀಬುಲ್ಲಾ, ನಬಿ(ನಾಯಕ), ಕರೀಂ, ರಶೀದ್‌, ಅಜಮತ್ತುಲ್ಲಾ, ಮುಜೀಬ್‌, ಫರೀದ್‌, ಫಜಲ್‌ಹಕ್‌.

ಪಂದ್ಯ: ಸಂಜೆ 7.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

click me!