
ದುಬೈ(ಸೆ.09): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಗುರುವಾರ ರಾತ್ರಿ ಒಂದು ರೀತಿಯ ಸಂಭ್ರಮದ ಕ್ಷಣ. ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ, ಬರೋಬ್ಬರಿ 1020 ದಿನಗಳ ಬಳಿಕ ಕೊನೆಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಲು ಯಶಸ್ವಿಯಾಗಿದ್ದಾರೆ. ಇದರ ಬೆನ್ನಲ್ಲೇ ಈ ವಿಶೇಷವಾದ ಶತಕವನ್ನು ತಮ್ಮ ಪತ್ನಿ ಅನುಷ್ಕಾ ಶರ್ಮಾ ಹಾಗೂ ಪುತ್ರಿ ವಾಮಿಕಾ ಅವರಿಗೆ ಅರ್ಪಿಸಿದ್ದರು. ಇದೀಗ ಈ ಮಾತಿಗೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡಾ ಪ್ರತಿಕ್ರಿಯೆ ನೀಡಿದ್ದು, ಮುದ್ದಾದ ಸಂದೇಶ ರವಾನಿಸಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಆಫ್ಘಾನಿಸ್ತಾನ ವಿರುದ್ದದ ಪಂದ್ಯದಲ್ಲಿ ಶತಕ ಸಿಡಿಸಿದ ಬಳಿಕ ಮಾತನಾಡಿದ್ದ ವಿರಾಟ್ ಕೊಹ್ಲಿ, 'ಕಳೆದ ಎರಡೂವರೆ ವರ್ಷ ನನಗೆ ಹಲವು ಪಾಠಗಳನ್ನು ಕಲಿಸಿದೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ನನ್ನ ಶತಕದ ಬರ ನೀಗಲಿದೆ ಎಂದು ಭಾವಿಸಿರಲಿಲ್ಲ. ಕಠಿಣ ಸಮಯದಲ್ಲಿ ನನ್ನೊಂದಿಗೆ ನನ್ನ ತಂಡ ನಿಂತಿದೆ. ಶತಕ ಬಾರಿಸುತ್ತಿಲ್ಲ ಎನ್ನುವ ಬಗ್ಗೆ ಹೊರಗೆ ಸಾಕಷ್ಟು ಚರ್ಚೆಯಾಗುತ್ತಿತ್ತು ಎಂದು ನನಗೆ ಗೊತ್ತು. ನಾನಿಲ್ಲಿ ಇಂದು ನಿಂತಿದ್ದೇನೆ ಎಂದರೆ ಅದಕ್ಕೆ ಒಬ್ಬ ವ್ಯಕ್ತಿ ಪ್ರಮುಖ ಕಾರಣ. ಅದು ನನ್ನ ಪತ್ನಿ ಅನುಷ್ಕಾ. ಈ ಶತಕ ಆಕೆ ಹಾಗೂ ನಮ್ಮ ಪುತ್ರಿ ವಾಮಿಕಾಗೆ ಅರ್ಪಿಸುವೆ. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಅನುಷ್ಕಾ ನನ್ನ ಜೊತೆಗಿದ್ದಾರೆ. ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ ಎಂದು ಹೇಳಿದ್ದರು.
ಇದೀಗ ವಿರಾಟ್ ಕೊಹ್ಲಿಯ ಮಾತಿಗೆ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಪ್ರತಿಕ್ರಿಯೆ ನೀಡಿರುವ ಅನುಷ್ಕಾ ಶರ್ಮಾ, ವಿರಾಟ್ ಶತಕ ಸಿಡಿಸಿ ಸಂಭ್ರಮಿಸುತ್ತಿರುವ ಫೋಟೋದೊಂದಿಗೆ, ಯಾವುದೇ ಹಾಗೂ ಎಂತಹದ್ದೇ ಸಂದರ್ಭದಲ್ಲೂ ನಾನು ನಿಮ್ಮ ಜತೆಗಿರುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಸ್ವತಃ ವಿರಾಟ್ ಕೊಹ್ಲಿ ಕೂಡಾ ಕಾಮೆಂಟ್‌ನಲ್ಲಿ ಹಾರ್ಟ್ ಎಮೋಜಿ ಹಾಕಿ ಪ್ರತಿಕ್ರಿಯೆ ನೀಡಿದ್ದಾರೆ.
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಹಲವು ವರ್ಷಗಳ ಡೇಟಿಂಗ್ ಬಳಿಕ ಈ ಜೋಡಿ ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇನ್ನು ಕಳೆದ ವರ್ಷದ ಜನವರಿಯಲ್ಲಿ ಈ ಜೋಡಿಗೆ ವಾಮಿಕಾ ಎನ್ನುವ ಮುದ್ದಾದ ಮಗುವಿನ ಆಗಮನವಾಗಿದೆ.
Asia Cup 2022: ಅಪರೂಪದ ಶತಕವನ್ನು ಪತ್ನಿ ಅನುಷ್ಕಾ ಶರ್ಮಾಗೆ ಅರ್ಪಿಸಿದ ಕಿಂಗ್ ಕೊಹ್ಲಿ..!
ನವೆಂಬರ್ 23, 2019ರಂದು ಕೋಲ್ಕತಾದಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರು. ಆ ಬಳಿಕ ಮತ್ತೊಂದು ಶತಕಕ್ಕೆ 1020 ದಿನ ಕಾಯಬೇಕಾಯಿತು. 70 ಹಾಗೂ 71ನೇ ಶತಕದ ನಡುವೆ ವಿರಾಟ್ 72 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು 2,708 ರನ್ ಗಳಿಸಿದ್ದರು. 26 ಅರ್ಧಶತಕ ಬಾರಿಸಿದ್ದ ಅವರ ವೈಯಕ್ತಿಕ ಗರಿಷ್ಠ ಮೊತ್ತ ಔಟಾಗದೆ 94 ರನ್ ಆಗಿತ್ತು. ಆದರೆ ಬರೋಬ್ಬರಿ 1020 ದಿನಗಳ ಬಳಿಕ ಕೊನೆಗೂ ವಿರಾಟ್ ಕೊಹ್ಲಿ, ಮೂರಂಕಿ ಮೊತ್ತ ದಾಖಲಿಸುವ ಮೂಲಕ ಎಲ್ಲಾ ಟೀಕಾಕಾರರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ.
ಇನ್ನು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಅನುಭವಿ ಕ್ರಿಕೆಟಿಗರಾದ ರಾಬಿನ್ ಉತ್ತಪ್ಪ, ಕೆ ಎಲ್ ರಾಹುಲ್, ಸಾಮಾಜಿಕ ಜಾಲತಾಣವಾದ ಕೂ ಮೂಲಕ ಆಫ್ಘಾನಿಸ್ತಾನ ಎದುರಿನ ಗೆಲುವನ್ನು ಸಂಭ್ರಮಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.