Ashes 2021-22: ಟ್ರಾವಿಸ್ ಹೆಡ್‌ಗೆ ಕೋವಿಡ್ ಪಾಸಿಟಿವ್, ಆಸೀಸ್ ತಂಡದಲ್ಲಿ ಮಹತ್ವದ ಬದಲಾವಣೆ..!

By Suvarna News  |  First Published Dec 31, 2021, 2:21 PM IST

* ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಬಿಗ್‌ ಶಾಕ್‌

* ಆಸ್ಟ್ರೇಲಿಯಾದ ಬ್ಯಾಟರ್‌ ಟ್ರಾವಿಸ್ ಹೆಡ್‌ಗೆ ಕೋವಿಡ್ ಪಾಸಿಟಿವ್

* ಈಗಾಗಲೇ 3-0 ಅಂತರದಲ್ಲಿ ಆ್ಯಷಸ್ ಟೆಸ್ಟ್ ಸರಣಿ ಜಯಿಸಿರುವ ಆಸ್ಟ್ರೇಲಿಯಾ


ಮೆಲ್ಬೊರ್ನ್‌(ಡಿ.31): ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ತಂಡಗಳ ನಡುವಿನ ಆ್ಯಷಸ್ ಟೆಸ್ಟ್ ಸರಣಿಯ (Ashes Test Series) 4ನೇ ಪಂದ್ಯ ಆರಂಭಕ್ಕೆ ಇನ್ನು ಕೇವಲ ಐದು ದಿನಗಳು ಉಳಿದಿರುವಾಲೇ, ಆತಿಥೇಯ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ (Australia Cricket Team) ಬಿಗ್ ಶಾಕ್ ಎದುರಾಗಿದ್ದು, ಸ್ಟಾರ್ ಬ್ಯಾಟರ್‌ ಟ್ರಾವಿಸ್ ಹೆಡ್‌ಗೆ (Travis Head) ಕೋವಿಡ್ 19 (COVID 19) ಸೋಂಕು ತಗುಲಿರುವುದು ದೃಢಪಟ್ಟಿದೆ. ಜೋ ರೂಟ್‌ (Joe Root) ಬಳಿಕ 2021-22ನೇ ಸಾಲಿನ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದ ಟ್ರಾವಿಸ್ ಹೆಡ್‌, ಇದೀಗ ಜನವರಿ 5ರಿಂದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.

ಟ್ರಾವಿಸ್ ಹೆಡ್‌ ಮೊದಲ ಟೆಸ್ಟ್‌ ಪಂದ್ಯದಲ್ಲಿ ಸ್ಪೋಟಕ ಶತಕ ಬಾರಿಸುವ ಮೂಲಕ ಆಸೀಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಮೂರು ಪಂದ್ಯಗಳಿಂದ ಟ್ರಾವಿಸ್ ಹೆಡ್ 62ರ ಬ್ಯಾಟಿಂಗ್ ಸರಾಸರಿಯಲ್ಲಿ 248 ರನ್‌ ಬಾರಿಸಿದ್ದರು. ಇದೀಗ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡ ಆಟಗಾರರ ಪೈಕಿ ಕೋವಿಡ್ 19 ಸೋಂಕಿಗೆ ಒಳಗಾದ ಮೊದಲ ಆಟಗಾರ ಎನ್ನುವ ಕುಖ್ಯಾತಿಗೆ ಟ್ರಾವಿಸ್ ಹೆಡ್ ಪಾತ್ರರಾಗಿದ್ದಾರೆ. ಹೀಗಿದ್ದೂ ಎಡಗೈ ಬ್ಯಾಟರ್‌ಗೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಸದ್ಯ ಟ್ರಾವಿಸ್ ಹೆಡ್‌ ಐಸೋಲೇಷನ್‌ಗೆ ಒಳಗಾಗಿದ್ದಾರೆ.

Latest Videos

undefined

5ನೇ ಟೆಸ್ಟ್‌ಗೆ ಟ್ರಾವಿಸ್ ಹೆಡ್‌ ತಂಡ ಕೂಡಿಕೊಳ್ಳುವ ಸಾಧ್ಯತೆ: 

ಆ್ಯಷಸ್ ಟೆಸ್ಟ್ ಸರಣಿಯ ಕೊನೆಯ ಕೊನೆಯ ಟೆಸ್ಟ್‌ ಪಂದ್ಯವು ಜನವರಿ 14ರಿಂದ ಹೋಬರ್ಟ್‌ನಲ್ಲಿ ಆರಂಭವಾಗಲಿದ್ದು, 5ನೇ ಟೆಸ್ಟ್ ಪಂದ್ಯದ ವೇಳೆಗೆ ಆಸ್ಟ್ರೇಲಿಯಾ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ. ನಮ್ಮ ಎಂದಿನ ದಿನಚರಿಯಂತೆ ಆಟಗಾರರು ಹಾಗೂ ಅವರ ಕುಟುಂಬಸ್ಥರ RT-PCR ಟೆಸ್ಟ್ ಮಾಡಲಾಯಿತು. ದುರಾದೃಷ್ಟವಶಾತ್ ಇಂದು ಮುಂಜಾನೆ ಟ್ರಾವಿಸ್ ಹೆಡ್ ಅವರ ಕೋವಿಡ್ ರಿಪೋರ್ಟ್‌ ನೆಗೆಟಿವ್ ಬಂದಿತು. ಅವರಿಗೆ ಯಾವುದೇ ಸೋಂಕಿನ ಲಕ್ಷಣಗಳಿಲ್ಲ. ಟ್ರಾವಿಸ್ ಹೆಡ್‌ ಐದನೇ ಟೆಸ್ಟ್ ಪಂದ್ಯದ ವೇಳೆಗೆ ತಂಡ ಕೂಡಿಕೊಳ್ಳುವ ವಿಶ್ವಾಸವಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಧ್ಯಮ ವಕ್ತಾರರೊಬ್ಬರು ತಿಳಿಸಿದ್ದಾರೆ.

ನಮ್ಮ ವೈದ್ಯಕೀಯ ಸಿಬ್ಬಂದಿ ಈ ಸರಣಿಯುದ್ದಕ್ಕೂ ನಿರಂತರವಾಗಿ ಆಟಗಾರರು ಹಾಗೂ ಅವರ ಕುಟುಂಬ ಸುರಕ್ಷಿತವಾಗಿರಲು ಶ್ರಮಿಸುತ್ತಿದ್ದಾರೆ. ಎರಡು ತಂಡಗಳ ಆಟಗಾರರ ಬಗೆಗಿನ ವೈದ್ಯಕೀಯ ಕಾಳಜಿಗೆ ನಾವು ಅವರಿಗೆ ಕೃತಜ್ಞರಾಗಿದ್ದೇವೆ ಎಂದು ವಕ್ತಾರರು ತಿಳಿಸಿದ್ದಾರೆ. 

Ashes 2021-22: ಸಿಡ್ನಿ ಟೆಸ್ಟ್‌ನಲ್ಲಿ ಕೋಚ್ ಇಲ್ಲದೇ ಕಣಕ್ಕಿಳಿಯಲಿದೆ ಇಂಗ್ಲೆಂಡ್ ಕ್ರಿಕೆಟ್ ತಂಡ..!

ಟ್ರಾವಿಸ್ ಹೆಡ್ ಅವರಿಗೆ ಕೋವಿಡ್ 19 ಸೋಂಕು ದೃಢಪಡುತ್ತಿದ್ದಂತೆಯೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಜೋಶ್ ಇಂಗ್ಲಿಶ್, ನಿಕ್ ಮ್ಯಾಡಿಸನ್ ಹಾಗೂ ಮಿಚೆಲ್ ಮಾರ್ಷ್‌ (Mitchell Marsh) ಅವರಿಗೆ ಬುಲಾವ್ ನೀಡಿದೆ. ಬಿಗ್‌ಬ್ಯಾಶ್ ಲೀಗ್‌ನಲ್ಲಿ ಮಿಚೆಲ್ ಮಾರ್ಷ್ ಹಾಗೂ ಜೋಶ್ ಇಂಗ್ಲಿಶ್‌ ಪರ್ತ್ ಸ್ಕಾಚರ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇನ್ನು ನಿಕ್ ಮ್ಯಾಡಿಸನ್‌ ನಾಯಕನಾಗಿ ಮೆಲ್ಬೊರ್ನ್‌ ರೆನೆಗೇಡ್ಸ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಬದಲಿಗೆ ಉಸ್ಮಾನ್ ಖವಾಜಾ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. 

ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಐಸಿಸಿ ಮ್ಯಾಚ್ ರೆಫ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಡೇವಿಡ್ ಬೂನ್ ಅವರಿಗೂ ಸಹ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರ ಬದಲಿಗೆ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಐಸಿಸಿ ಮ್ಯಾಚ್ ರೆಫ್ರಿಯಾಗಿ ಸ್ಟೀವ್ ಬೆರ್ನಾರ್ಡ್‌ ಕಾರ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ಇಂಗ್ಲೆಂಡ್ ತಂಡದ ಹೆಡ್‌ ಕೋಚ್ ಕ್ರಿಸ್ ಸಿಲ್ವರ್‌ವುಡ್‌ ಕೊರೋನಾ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ಹಿನ್ನೆಲೆಯಲ್ಲಿ ಐಸೋಲೇಷನ್‌ಗೆ ಒಳಗಾಗಿದ್ದು, ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಜೋ ರೂಟ್ ಪಡೆಯು ಹೆಡ್‌ ಕೋಚ್ ಇಲ್ಲದೆಯೇ ಕಣಕ್ಕಿಳಿಯಲಿದೆ.

click me!