
ಬೆಂಗಳೂರು: ಎರಡನೇ ಆವೃತ್ತಿಯ ಡೆಲ್ಲಿ ಪ್ರೀಮಿಯರ್ ಲೀಗ್ 2025 ಟೂರ್ನಿಯು ಈ ಬಾರಿ ಮತ್ತಷ್ಟು ರೋಚಕ ಕ್ಷಣಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಈ ಬಾರಿಯ ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅಳಿಯ ಆರ್ಯವೀರ್ ಕೊಹ್ಲಿ ಹಾಗೂ ವಿರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಕಣಕ್ಕಿಳಿಯಲಿದ್ದು, ಈ ಇಬ್ಬರು ಯುವ ಆಟಗಾರರ ಕಾದಾಟಕ್ಕೆ ಈ ಟೂರ್ನಿ ಸಾಕ್ಷಿಯಾಗಲಿದೆ.
ಎರಡನೇ ಸೀಸನ್ ಡೆಲ್ಲಿ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿನಲ್ಲಿ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡವು 8 ಲಕ್ಷ ರುಪಾಯಿ ನೀಡಿ ಆರ್ಯವೀರ್ ಸೆಹ್ವಾಗ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಆದರೆ ವಿರೇಂದ್ರ ಸೆಹ್ವಾಗ್ ಎರಡನೇ ಪುತ್ರ ವೇದಾಂತ್ ಸೆಹ್ವಾಗ್ ಅನ್‌ಸೋಲ್ಡ್ ಆಗಿದ್ದಾರೆ. ಇನ್ನು ಮತ್ತೊಂದೆಡೆ ಸೌಥ್ ಡೆಲ್ಲಿ ಸೂಪರ್‌ಸ್ಟಾರ್ಸ್ ತಂಡವು ಆರ್ಯವೀರ್ ಕೊಹ್ಲಿಯವರನ್ನು 1 ಲಕ್ಷ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆರ್ಯವೀರ್ ಕೊಹ್ಲಿ ಓರ್ವ ಲೆಗ್‌ಸ್ಪಿನ್ನರ್ ಆಗಿದ್ದು, ವಿರಾಟ್ ಕೊಹ್ಲಿಯ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಅವರ ಬಳಿ ಅಭ್ಯಾಸ ಮಾಡುತ್ತಿದ್ದಾರೆ.
ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಈ ಇಬ್ಬರು ಆಟಗಾರರು ಬೇರೆ ಬೇರೆ ತಂಡಗಳ ಪಾಲಾಗಿರಿವುದರಿಂದ ಎರಡನೇ ಸೀಸನ್ ಡಿಪಿಎಲ್ ಟೂರ್ನಿಯಲ್ಲಿ ಈ ಇಬ್ಬರು ಆಟಗಾರರು ಮುಖಾಮುಖಿಯಾಗಲಿದ್ದಾರೆ.
ಡಿಪಿಎಲ್ ಬಗ್ಗೆ ಸಂತಸ ವ್ಯಕ್ತಪಡಿಸಿದ ಸೆಹ್ವಾಗ್:
ಎರಡನೇ ಆವೃತ್ತಿಯ ಡೆಲ್ಲಿ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿನ ವೇಳೆಯಲ್ಲಿ ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಕೂಡಾ ಹಾಜರಿದ್ದರು. "ನಾನು ಈ ಬಾರಿಯ ಡಿಪಿಎಲ್ ಸೀಸನ್ ಅನ್ನು ತುಂಬಾ ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ದೊಡ್ಡ ವೇದಿಕೆಯಲ್ಲಿ ಮಿಂಚಲು ಯುವ ಆಟಗಾರರಿಗೆ ಇದು ಉತ್ತಮ ಅವಕಾಶವಾಗಿದೆ. ಆಯ್ಕೆಗಾರರು ಹಾಗೂ ಫ್ಯಾನ್ಸ್ ಯುವ ಆಟಗಾರರ ಪ್ರದರ್ಶನವನ್ನು ತುಂಬ ಹತ್ತಿರದಿಂದ ನೋಡುತ್ತಿರುತ್ತಾರೆ. ಕಳೆದ ವರ್ಷ ಕೂಡಾ ನಾವು ಡಿಪಿಎಲ್ ಟೂರ್ನಿಯಲ್ಲಿ ಉತ್ತಮ ಕ್ರಿಕೆಟ್ ನೋಡಿದ್ದೆವು. ಈ ಬಾರಿ ಟೂರ್ನಿಯು ಇನ್ನಷ್ಟು ರೋಚಕತೆಯಿಂದ ಕೂಡಿರುವ ವಿಶ್ವಾಸವಿದೆ" ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಡೆಲ್ಲಿ ಕ್ರಿಕೆಟ್ ಸಂಸ್ಥೆಯು ಎರಡನೇ ಸೀಸನ್ ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹೊಸದಾಗಿ ಮತ್ತೆರಡು ತಂಡಗಳಿಗೆ ಅವಕಾಶ ನೀಡಿದೆ. ಹೀಗಾಗಿ ಎರಡನೇ ಸೀಸನ್ ಡಿಪಿಎಲ್ ಟ್ರೋಫಿ ಟೂರ್ನಿಯಲ್ಲಿ ಪ್ರಶಸ್ತಿಗಾಗಿ 8 ತಂಡಗಳು ಕಾದಾಡಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.