'ಗರ್ಲ್‌ಫ್ರೆಂಡ್‌ ಜತೆ ಒಟ್ಟಿಗೆ ಸಮಯ ಕಳೆಯುವಾಗ ಇಂತಹ ಡ್ಯಾನ್ಸ್‌ ಮಾಡ್ತೇವೆ': ವಿಭಿನ್ನ ಸೆಲೆಬ್ರೇಷನ್ ಗುಟ್ಟು ಬಿಚ್ಚಿಟ್ಟ ಅರ್ಶದೀಪ್ ಸಿಂಗ್

Published : Nov 04, 2026, 04:00 PM IST
Arshdeep Singh

ಸಾರಾಂಶ

ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ವಿಕೆಟ್‌ ಪಡೆದ ಬಳಿಕ ಅರ್ಶದೀಪ್‌ ಸಿಂಗ್‌ ಮಾಡಿದ ವಿಶೇಷ ಡ್ಯಾನ್ಸ್‌ ಎಲ್ಲರ ಗಮನ ಸೆಳೆದಿದೆ. ಈ ಸಂಭ್ರಮವನ್ನು ಅವರು ತಮ್ಮ ಗೆಳತಿ ಹಾಗೂ ನಟಿ ಸಮ್ರೀನ್‌ ಕೌರ್‌ಗಾಗಿ ಮಾಡಿದ್ದಾಗಿ ಬಹಿರಂಗಪಡಿಸಿದ್ದಾರೆ. ಇದು ಅವರಿಬ್ಬರ ನಡುವಿನ ಆತ್ಮೀಯ ಕ್ಷಣದ ಪ್ರತೀಕವಾಗಿದೆ.

ಆಕ್ಲೆಂಡ್‌(ನ.04): ಕ್ರಿಕೆಟ್‌ ಮೈದಾನದಲ್ಲಿ ವಿಕೆಟ್‌ ಪಡೆದ ಬಳಿಕ ಬೌಲರ್‌ಗಳು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವುದು ಸಾಮಾನ್ಯ. ಆದರೆ, ನ್ಯೂಜಿಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ವೇಗಿ ಅರ್ಶದೀಪ್‌ ಸಿಂಗ್‌ ಮಾಡಿದ ವಿಶೇಷ ಡ್ಯಾನ್ಸ್‌ ಸಂಭ್ರಮ ಅಭಿಮಾನಿಗಳ ಗಮನ ಸೆಳೆದಿದೆ. ಈ ಸಂಭ್ರಮದ ಹಿಂದಿನ ಕಾರಣವನ್ನು ಸ್ವತಃ ಅರ್ಶದೀಪ್‌ ಬಹಿರಂಗಪಡಿಸಿದ್ದು, ಅದು ತಮ್ಮ ಗೆಳತಿ ಸಮ್ರೀನ್‌ ಕೌರ್‌ಗಾಗಿ ಮಾಡಿದ ವಿಶೇಷ ಡ್ಯಾನ್ಸ್‌ ಎಂದು ತಿಳಿಸಿದ್ದಾರೆ.

ಆಕ್ಲೆಂಡ್‌ನ ಈಡನ್‌ ಪಾರ್ಕ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ಬ್ಯಾಟರ್‌ ಕೈಲ್‌ ಜೇಮಿಸನ್‌ ಅವರನ್ನು ಔಟ್‌ ಮಾಡಿದ ಬಳಿಕ ಅರ್ಶದೀಪ್‌ ಸಿಂಗ್‌ ವಿಭಿನ್ನವಾಗಿ ಸಂಭ್ರಮಿಸಿದರು. ವಿಕೆಟ್‌ ಪಡೆದ ಖುಷಿಯಲ್ಲಿ ಅವರು ಮಾಡಿದ ಡ್ಯಾನ್ಸ್‌ ಕಂಡು ಅಭಿಮಾನಿಗಳಿಗೆ ಅದರ ಹಿಂದಿನ ಅರ್ಥವೇನು ಎಂಬ ಕುತೂಹಲ ಮೂಡಿತ್ತು. ಪಂದ್ಯದ ಮೊದಲ ಇನ್ನಿಂಗ್ಸ್‌ ಮುಗಿದ ಬಳಿಕ ನಡೆದ ಮಧ್ಯಂತರ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಅರ್ಶದೀಪ್‌, ತಮ್ಮ ಡ್ಯಾನ್ಸ್‌ ಸಂಭ್ರಮದ ಹಿಂದಿನ ವಿಶೇಷ ಕಾರಣವನ್ನು ಬಿಚ್ಚಿಟ್ಟರು.

'ಇದು ನನ್ನ ಗೆಳತಿಗಾಗಿ ಮಾಡಿದ ಡ್ಯಾನ್ಸ್‌'

ತಮ್ಮ ಸಂಭ್ರಮದ ಬಗ್ಗೆ ಕೇಳಿದಾಗ ಅರ್ಶದೀಪ್‌ ಸಿಂಗ್‌, ಇದು ತಮ್ಮ ಗೆಳತಿ ಸಮ್ರೀನ್‌ ಕೌರ್‌ ಜೊತೆ ಆಗಾಗ ಮಾಡುವ ಡ್ಯಾನ್ಸ್‌ ಸ್ಟೆಪ್‌ ಎಂದು ತಿಳಿಸಿದರು. 'ಇದು ನನ್ನ ಗೆಳತಿಗಾಗಿ. ನಾವು ಹೊರಗೆ ವಾಕಿಂಗ್‌ಗೆ ಹೋದಾಗ ಅಥವಾ ಒಟ್ಟಿಗೆ ಸಮಯ ಕಳೆಯುವಾಗ ಇಂತಹ ಡ್ಯಾನ್ಸ್‌ ಸ್ಟೆಪ್‌ಗಳನ್ನು ಮಾಡುತ್ತೇವೆ. ನಮ್ಮಲ್ಲಿ ಯಾರದ್ದಾದರೂ ಮೂಡ್‌ ಸ್ವಲ್ಪ ಸರಿಯಿಲ್ಲದಿದ್ದರೆ, ಈ ರೀತಿ ಸಂಭ್ರಮಿಸುವ ಮೂಲಕ ಒಬ್ಬರನ್ನೊಬ್ಬರು ಖುಷಿಪಡಿಸುತ್ತೇವೆ. ಹೀಗಾಗಿ ಈ ಬಾರಿ ನಾನು ಮಾಡಿದ ಡ್ಯಾನ್ಸ್‌ ಆಕೆಗೆ ಅರ್ಪಿಸಿದ್ದು' ಎಂದು ಅರ್ಶದೀಪ್‌ ಹೇಳಿದರು.

ಈ ಮೂಲಕ ಮೈದಾನದಲ್ಲಿ ಸಾಮಾನ್ಯ ವಿಕೆಟ್‌ ಸಂಭ್ರಮದಂತೆ ಕಂಡಿದ್ದ ಡ್ಯಾನ್ಸ್‌ನ ಹಿಂದೆ ತಮ್ಮಿಬ್ಬರ ನಡುವಿನ ಆತ್ಮೀಯ ಕ್ಷಣಗಳಿವೆ ಎಂಬುದನ್ನು ಅವರು ಬಹಿರಂಗಪಡಿಸಿದರು.

ಸಮ್ರೀನ್‌ ಕೌರ್‌ ಯಾರು?

ಅರ್ಶದೀಪ್‌ ಸಿಂಗ್‌ ತಮ್ಮ ಗೆಳತಿ ಎಂದು ಉಲ್ಲೇಖಿಸಿರುವ ಸಮ್ರೀನ್‌ ಕೌರ್‌ ನಟಿ ಹಾಗೂ ಮಾಡೆಲ್‌ ಆಗಿದ್ದಾರೆ. ಅರ್ಶದೀಪ್‌ ಅವರ ಈ ಹೇಳಿಕೆಯ ಬಳಿಕ ವಿಕೆಟ್‌ ಸಂಭ್ರಮದೊಂದಿಗೆ ಸಮ್ರೀನ್‌ ಕೌರ್‌ ಹೆಸರು ಕೂಡ ಚರ್ಚೆಗೆ ಬಂದಿದೆ. ಆದರೆ, ತಮ್ಮ ಸಂಬಂಧದ ಕುರಿತು ಹೆಚ್ಚಿನ ವಿವರಗಳನ್ನು ನೀಡದ ಅರ್ಶದೀಪ್‌, ಇಬ್ಬರೂ ಒಬ್ಬರನ್ನೊಬ್ಬರು ಖುಷಿಪಡಿಸಲು ಬಳಸುವ ಸಣ್ಣ ಡ್ಯಾನ್ಸ್‌ ಸಂಭ್ರಮದ ಬಗ್ಗೆಯಷ್ಟೇ ಮಾತನಾಡಿದ್ದಾರೆ.

ಕ್ರಿಕೆಟ್‌ ಮೈದಾನದಲ್ಲೂ ಪ್ರೀತಿಯ ವಿಶೇಷ ಸಂಭ್ರಮ!

ಕೈಲ್‌ ಜೇಮಿಸನ್‌ ಅವರ ವಿಕೆಟ್‌ ಪಡೆಯುವುದು ಪಂದ್ಯದ ದೃಷ್ಟಿಯಿಂದ ಅರ್ಶದೀಪ್‌ ಪಾಲಿಗೆ ಮಹತ್ವದ ಕ್ಷಣವಾಗಿತ್ತು. ಆದರೆ, ಆ ಬಳಿಕ ಅವರು ಮಾಡಿದ ಡ್ಯಾನ್ಸ್‌ ಕ್ರಿಕೆಟ್‌ ಅಭಿಮಾನಿಗಳಿಗೆ ಮತ್ತೊಂದು ವಿಶೇಷ ಕ್ಷಣವನ್ನು ನೀಡಿತು. ವಿಕೆಟ್‌ ಸಂಭ್ರಮದ ಮೂಲಕ ತಮ್ಮ ವೈಯಕ್ತಿಕ ಬದುಕಿನ ಮಧುರ ಕ್ಷಣವೊಂದನ್ನು ಹಂಚಿಕೊಂಡ ಅರ್ಶದೀಪ್‌ ಸಿಂಗ್‌, ಕ್ರಿಕೆಟ್‌ ಮೈದಾನದ ಆಚೆಗೂ ಅಭಿಮಾನಿಗಳ ಮನಗೆದ್ದಿದ್ದಾರೆ.

ಮೊದಲ ಏಕದಿನ ಪಂದ್ಯ ಗೆದ್ದ ಟೀಂ ಇಂಡಿಯಾ:

ಅರ್ಶದೀಪ್ ಸಿಂಗ್ ಮಾರಕ ಬೌಲಿಂಗ್ ಹಾಗೂ ವಿರಾಟ್ ಕೊಹ್ಲಿ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಮಳೆಬಾಧಿತ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಭಾರತ 5 ವಿಕೆಟ್ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು ಕೇವಲ 185 ರನ್‌ಗಳಿಗೆ ಸರ್ವಪತನ ಕಂಡಿತು. ಅರ್ಶದೀಪ್ ಸಿಂಗ್ 4 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಗುರಿ ಬೆನ್ನತ್ತಿದ ಭಾರತಕ್ಕೆ ಮಳೆ ಅಡ್ಡಿ ಪಡಿಸಿತು. ಹೀಗಾಗಿ ಪರಿಷ್ಕೃತ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ ಭಾರತ 143 ರನ್‌ಗಳ ಗುರಿ ಬೆನ್ನತ್ತುವಲ್ಲಿ ಯಶಸ್ವಿಯಾಯಿತು. ವಿರಾಟ್ ಕೊಹ್ಲಿ 74 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊಹ್ಲಿ 74 ರನ್, ಅರ್ಷದೀಪ್ 4 ವಿಕೆಟ್ ಕಿತ್ತರೂ ಸಿಗಲಿಲ್ಲ ಮ್ಯಾನ್‌ ಆಫ್‌ ದಿ ಮ್ಯಾಚ್! 2 ವಿಕೆಟ್ ಪಡೆದ ಯುವ ಬೌಲರ್‍‌ಗೆ ಕೊಟ್ಟಿದ್ಯಾಕೆ?
SENA ದೇಶಗಳೆದರು ವಿರಾಟ್ ಕೊಹ್ಲಿ ಸಿಂಹಘರ್ಜನೆ; ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ನುಚ್ಚುನೂರು..!