
ಬೆಂಗಳೂರು (ನ.20): ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಲು ಆರಂಭಿಸಿದರೆ, ಸಾಮಾನ್ಯವಾಗಿ ಭಾರತದ ಕ್ರಿಕೆಟ್ ಫ್ಯಾನ್ಸ್‌ಗಳು ಸುಮ್ಮನೆ ಕೂರಲು ಸಾಧ್ಯವಾಗುವುದಿಲ್ಲ. ಸೂರ್ಯಕುಮಾರ್ ಯಾದವ್ ಆಟದ ಶೈಲಿಯೇ ಹಾಗಿರುತ್ತದೆ. ಭಾನುವಾರ ಮೌಂಟ್ ಮೌಂಗನುಯಿ ಮೈದಾನದಲ್ಲಿ ಕೇವಲ 51 ಎಸೆತಗಳಲ್ಲಿ 7 ಅಬ್ಬರದ ಸಿಕ್ಸರ್‌ಗಳು ಹಾಗೂ 11 ಬೌಂಡರಿಗಳೊಂದಿಗೆ ಅಜೇಯ 111 ರನ್ ಬಾರಿಸಿದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ತಮ್ಮ 2ನೇ ಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್‌ಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆಯ ಸುರಿಮಳೆ ಸುರಿಸಿದ್ದಾರೆ. ಇದು ಅವರ 'ಮತ್ತೊಂದು ವಿಡಿಯೋ ಗೇಮ್ ಇನ್ನಿಂಗ್ಸ್' ಎನ್ನುವ ಮೂಲಕ ಸೂರ್ಯಕುಮಾರ್ ಆಟ ಹೇಗಿತ್ತು ಅನ್ನೋದನ್ನ ಕೊಹ್ಲಿ ವರ್ಣಿಸಿದ್ದಾರೆ. ಇದೇ ವೇಳೆ ಈ ಪಂದ್ಯವನ್ನು ಟಿವಿಯಲ್ಲಿ ನೋಡಲು ಸಾಧ್ಯವಾಗದೇ ಇರೋದಕ್ಕೂ ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಬಾರಿಸಿದ ಸ್ಫೋಟಕ ಶತಕದ ನೆರವಿನಿಂದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 191 ರನ್ ಬಾರಿಸಿತು. ಸೂರ್ಯಕುಮಾರ್ ಬಿಟ್ಟರೆ, ಆರಂಭಿಕ ಆಟಗಾರ ಇಶಾನ್ ಕಿಶನ್ ಬಾರಿಸಿದ 36 ರನ್‌ಗಳೇ ಭಾರತೀಯ ಬ್ಯಾಟ್ಸ್‌ಮನ್‌ನ ಗರಿಷ್ಠ ಮೊತ್ತ ಎನಿಸಿತ್ತು.
ತಮ್ಮ 51 ಎಸೆತಗಳ ಇನ್ನಿಂಗ್ಸ್‌ನಲ್ಲಿ ಸೂರ್ಯಕುಮಾರ್ ಯಾದವ್ ಮಿ.360 ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದರು. ಸಾಮಾನ್ಯ ಬ್ಯಾಟ್ಸ್‌ಮನ್‌ವೊಬ್ಬ ಸಿಕ್ಸರ್ ಬಾರಿಸಲು ಕಷ್ಟವಾಗುವ ಶೈಲಿಯಲ್ಲೆಲ್ಲಾ ಅವರು ಸಿಕ್ಸರ್ ಸಿಡಿಸಿದರು. ಅದರೊಂದಿಗೆ ಕ್ಯಾಲೆಂಡರ್ ವರ್ಷವೊಂದರಲ್ಲಿಯೇ ಎರಡು ಟಿ20 ಶತಕ ಬಾರಿಸಿದ ಭಾರತದ 2ನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮುನ್ನ ರೋಹಿತ್ ಶರ್ಮ ಈ ಸಾಧನೆ ಮಾಡಿದ್ದರು. ಸೂರ್ಯಕುಮಾರ್ ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ನಾಟಿಂಗ್‌ಹ್ಯಾಂಟ್ ಟಿ20 ಪಂದ್ಯದಲ್ಲಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಶತಕ ಬಾರಿಸಿದ್ದರು.
ಸೂರ್ಯಕುಮಾರ್ ಯಾದವ್ ಅವರ ಮಾಸ್ಟರ್ ಕ್ಲಾಸ್ ಇನ್ನಿಂಗ್ಸ್ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ವಿರಾಟ್ ಕೊಹ್ಲಿ, ಅವರ ಆಟವನ್ನು ಟಿವಿಯಲ್ಲಿ ನೋಡಲು ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಂಡರು. ಆದರೆ, ವಿಶ್ವ ನಂ.1 ಬ್ಯಾಟ್ಸಮನ್ ಆಡಿದ ಆಟಕ್ಕೆ ಮೆಚ್ಚುಗೆಯ ಮಹಾಪೂರ ಹರಿಸಿದ್ದಾರೆ. ಸಾಂಪ್ರದಾಯಿಕ ರೀತಿಯಿಂದ ಹೊರತಾಗಿ ಅವರು ಆಡುವ ಆಟಕ್ಕೆ ಕೊಹ್ಲಿ ಮನಸಾರೆ ಹೊಗಳಿದ್ದಾರೆ.
'ನಂ.1 ಆಟಗಾರ ತಾವೇಕೆ ವಿಶ್ವದಲ್ಲಿಯೇ ಶ್ರೇಷ್ಠ ಆಟಗಾರ ಎನ್ನುವುದನ್ನು ತೋರಿಸಿದ್ದಾರೆ. ಈ ಪಂದ್ಯದ ನೇರಪ್ರಸಾರ ವೀಕ್ಷನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಇದೊಂದು ಅವರ ಮತ್ತೊಂದು ವಿಡಿಯೋ ಗೇಮ್ ರೀತಿಯ ಇನ್ನಿಂಗ್ಸ್ ಆಗಿತ್ತು ಎನ್ನುವುದನ್ನು ಖಂಡಿತವಾಗಿ ಹೇಳಬಲ್ಲೆ' ಎಂದು ವಿರಾಟ್ ಕೊಹ್ಲಿ ಬರೆದಿದ್ದಾರೆ.
"ಅವರು ಬೇರೆ ಪ್ಲಾನೆಟ್‌ನಲ್ಲಿದ್ದಾರೋ ಅಥವಾ ನಮಗೇ ಆಡಲು ಬರಲ್ವೋ ಗೊತ್ತಿಲ್ಲ": ಪಂದ್ಯಕ್ಕೂ ಮುನ್ನ ಪಾಂಡ್ಯ
ಇನ್ನು ಸೂರ್ಯಕುಮಾರ್ ಯಾದವ್ ಅವರ ಇನ್ನಿಂಗ್ಸ್ ಬಗ್ಗೆ ಕೊಹ್ಲಿ ಮಾತ್ರವಲ್ಲದೆ ಮಾಜಿ ಆಟಗಾರರಾದ ಇರ್ಫಾನ್ ಪಠಾಣ್ ಹಾಗೂ ವೀರೇಂದ್ರ ಸೆಹ್ವಾಗ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಈ ದಿನಗಳಲ್ಲಿ ಆಕಾಶ (ಸ್ಕೈ.. ಸೂರ್ಯಕುಮಾರ್ ಯಾದವ್ ನಿಕ್ ನೇಮ್) ಎಂದಿಗೂ ಬೆಂಕಿಯ ರೀತಿಯ ಕಾಣಿಸುತ್ತದೆ. ತನ್ನದೇ ಆದ ಲೀಗ್‌ನಲ್ಲಿ ಆಡುತ್ತಿದ್ದಂತೆ ಅನಿಸಿದೆ' ಎಂದು ಸೆಹ್ವಾಗ್ ಬರೆದಿದ್ದಾರೆ. 'ಸೂರ್ಯ ಯಾವುದೇ ಗ್ರಹದಲ್ಲೂ ಕೂಡ ಬ್ಯಾಟ್ ಮಾಡಬಲ್ಲರು' ಎಂದು ಇರ್ಫಾನ್ ಪಠಾಣ್ ಬರೆದುಕೊಂಡಿದ್ದಾರೆ.
Virat Kohli, Suryakumar Yadav ಇಬ್ಬರಿಗೂ ಇಲ್ಲ ರಿಷಬ್ ಪಂತ್ ಡ್ರೀಮ್ ಟಿ20 ತಂಡದಲ್ಲಿ ಸ್ಥಾನ
ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ನ ದೊಡ್ಡ ಅಭಿಮಾನಿಯಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅವರು ತೋರಿರುವ ಸ್ಥಿರ ಆಟದ ಬಗ್ಗೆ ಮಾಜಿ ನಾಯಕ ಪ್ರತಿ ಬಾರಿಯೂ ಮೆಚ್ಚುಗೆಯ ಮಾತನಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಸಾಕಷ್ಟು ಮ್ಯಾಚ್ ವಿನ್ನಿಂಗ್ ಜೊತೆಯಾಟಗಳಲ್ಲಿ ಭಾಗಿಯಾಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.