
ಮುಂಬೈ: ಸಾಮಾನ್ಯವಾಗಿ ಹುಟ್ಟುಹಬ್ಬದ ದಿನದಂದು ಹೆಚ್ಚಿನವರಿಗೆ ಶುಭಾಶಯಗಳು ಸಿಗುತ್ತವೆ. ಆದರೆ ಭಾರತೀಯ ಕ್ರಿಕೆಟ್ ತಂಡದ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ವಿಷಯದಲ್ಲಿ ಹಾಗಲ್ಲ. ಅವರಿಗೆ ಶುಭಾಶಯಗಳಿಗಿಂತ ಹೆಚ್ಚು ಟ್ರೋಲ್‌ಗಳು ಎದುರಾಗುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಅಗರ್ಕರ್ ವಿರುದ್ಧ ಟ್ರೋಲ್‌ಗಳು ಕಾಣಸಿಗುತ್ತಿವೆ. ಬಿಸಿಸಿಐ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡ ಹುಟ್ಟುಹಬ್ಬದ ಶುಭಾಶಯ ಪೋಸ್ಟ್‌ನ ಕೆಳಗೆ ಕೂಡ ವ್ಯಂಗ್ಯದ ಕಾಮೆಂಟ್‌ಗಳು ತುಂಬಿ ತುಳುಕುತ್ತಿವೆ.
ಭಾರತ ಪರ 221 ಅಂತರಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಅಜಿತ್ ಅಗರ್ಕರ್, ಒಟ್ಟು 349 ವಿಕೆಟ್ ಕಬಳಿಸಿದ್ದಾರೆ. ಅಜಿತ್ ಅಗರ್ಕರ್ 2007ರ ಐಸಿಸಿ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು. ಇದೀಗ ಅಗರ್ಕರ್ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾ ಬಂದಿದ್ದಾರೆ.
ಅಗರ್ಕರ್ ಇಷ್ಟೊಂದು ಟ್ರೋಲ್ ಆಗಲು ಹಲವು ಕಾರಣಗಳಿವೆ. ಅವರ ಕಾಲದಲ್ಲೇ ಮಾಜಿ ಭಾರತೀಯ ನಾಯಕರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಆರ್. ಅಶ್ವಿನ್ ಅವರಂತಹ ಆಟಗಾರರು ತಮ್ಮ ಟೆಸ್ಟ್ ವೃತ್ತಿಜೀವನವನ್ನು ಕೊನೆಗೊಳಿಸಬೇಕಾಯಿತು. ರೋಹಿತ್ ಬದಲಿಗೆ ಶುಭಮನ್ ಗಿಲ್ ಟೆಸ್ಟ್ ಮತ್ತು ಏಕದಿನ ಮಾದರಿಗಳ ನಾಯಕತ್ವವನ್ನು ವಹಿಸಿಕೊಂಡಿದ್ದು ಕೂಡ ಇದೇ ಸಮಯದಲ್ಲಿ. ಮೊಹಮ್ಮದ್ ಶಮಿಗೆ ಇಂದು ಭಾರತ ತಂಡದಲ್ಲಿ ಸ್ಥಾನವಿಲ್ಲ. ಅಷ್ಟೇ ಅಲ್ಲ, ಆಟಗಾರರನ್ನು ಹೆಚ್ಚು ಪರೀಕ್ಷೆಗೆ ಒಳಪಡಿಸುತ್ತಿರುವುದು ಕೂಡ ಇದೇ ಸಮಯದಲ್ಲಿ. ಈ ಎಲ್ಲ ಕಾರಣಗಳಿಂದ ಅಗರ್ಕರ್ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಾ ಬಂದಿದ್ದಾರೆ.
ಇದೀಗ ನೆಟ್ಟಿಗರು ಬಿಸಿಸಿಐ ಮಾಡಿದ ಶುಭಾಶಯ ಪೋಸ್ಟ್‌ಗೆ ಪ್ರತಿಯಾಗಿ ಆತನನ್ನು ರಿಟೈರ್ ಮಾಡಿ ಎಂದು ಟೀಕಿಸಿದ್ದಾರೆ. 2007ರ ಟಿ20 ವಿಶ್ವಕಪ್‌ನಲ್ಲಿ ಅವರು ಎಷ್ಟು ಮ್ಯಾಚ್ ಆಡಿದ್ದಾರೆ ಎಂದು ವೀಣಾ ಜೈನ್ ಎನ್ನುವವರು ಬಿಸಿಸಿಐ ಅನ್ನು ಪ್ರಶ್ನಿಸಿದ್ದಾರೆ. ಹುಟ್ಟು ಹಬ್ಬದ ಶುಭಾಶಯಗಳು, ದಯವಿಟ್ಟು ಭಾರತ ಕ್ರಿಕೆಟ್ ತಂಡ ಬಿಟ್ಟು ತೊಲಗಿ ಎಂದು ಮತ್ತೋರ್ವ ನೆಟ್ಟಿಗ ಕಮೆಂಟ್ ಮಾಡಿದ್ದಾರೆ.
ರೋಹಿತ್ ಶರ್ಮಾ ಅವರನ್ನು ಬದಲಿಸಿ ಶುಭಮನ್ ಗಿಲ್ ಅವರನ್ನು ಏಕದಿನ ನಾಯಕರನ್ನಾಗಿ ಮಾಡಿದ ಹಿಂದಿನ ಮಾಸ್ಟರ್‌ಮೈಂಡ್ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಎಂದು ಮಾಜಿ ಭಾರತೀಯ ಆಟಗಾರ ಮೊಹಮ್ಮದ್ ಕೈಫ್ ಬಹಿರಂಗಪಡಿಸಿದ್ದಾರೆ. ಆತುರವಾಗಿ ಗಿಲ್‌ಗೆ ನಾಯಕತ್ವ ನೀಡಿ ಸೆಲೆಕ್ಟರ್‌ಗಳು ಅವರ ಮೇಲೆ ಹೆಚ್ಚಿನ ಹೊರೆ ಹಾಕಿದ್ದಾರೆ, ಇದು ಗಿಲ್ ಅವರ ಪ್ರದರ್ಶನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಕೈಫ್ ಹೇಳಿದ್ದರು.
''ಗಿಲ್ ಅವರನ್ನು ಏಕದಿನ ನಾಯಕರನ್ನಾಗಿ ಮಾಡುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಅದು 2027ರ ಏಕದಿನ ವಿಶ್ವಕಪ್ ನಂತರ ಆಗಬಹುದು ಎಂದು ಭಾವಿಸಿದ್ದೆ. ಯಾಕೆಂದರೆ, ನಾಯಕನಾಗಿ ರೋಹಿತ್‌ಗೆ ಇನ್ನೂ ಸಮಯ ನೀಡಬಹುದಿತ್ತು. ಫಿಟ್‌ನೆಸ್ ವಿಷಯದಲ್ಲೂ ರೋಹಿತ್ ಈಗ ಸಾಕಷ್ಟು ಸುಧಾರಿಸಿದ್ದಾರೆ. ಇಷ್ಟು ಆತುರವಾಗಿ ಗಿಲ್‌ಗೆ ನಾಯಕತ್ವ ನೀಡಿ, ಸೆಲೆಕ್ಟರ್‌ಗಳು ಅವರ ತಲೆಯ ಮೇಲೆ ಹೆಚ್ಚುವರಿ ಜವಾಬ್ದಾರಿಯನ್ನು ಹೊರಿಸಿದ್ದಾರೆ. ಇದು ಗಿಲ್ ಅವರ ಪ್ರದರ್ಶನದ ಮೇಲೆ ನಕಾರಾತ್ಮಕ ಪರಿಣಾಮ ಬೀರಿ ಭಾರತಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಟೆಸ್ಟ್ ನಾಯಕತ್ವದ ನಂತರ, ಏಕದಿನ ನಾಯಕತ್ವ ಮತ್ತು ಟಿ20 ತಂಡದ ಉಪನಾಯಕನ ಸ್ಥಾನವನ್ನು ಗಿಲ್‌ಗೆ ಆತುರವಾಗಿ ನೀಡಲಾಗಿದೆ. ಸೂರ್ಯಕುಮಾರ್ ಯಾದವ್ ಕೆಳಗಿಳಿದಾಗ, ಟಿ20 ತಂಡದ ನಾಯಕತ್ವವೂ ಸಹಜವಾಗಿ ಗಿಲ್ ಅವರ ಹೆಗಲಿಗೆ ಬೀಳಲಿದೆ,'' ಎಂದು ಕೈಫ್ ಹೇಳಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.