
ಕೋಲ್ಕತಾ: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಹೀನಾಯವಾಗಿ ಸೋತ ಬೆನ್ನಲ್ಲೇ, ಕೋಲ್ಕತಾ ನೈಟ್ ರೈಡರ್ಸ್ (KKR) ಕ್ಯಾಪ್ಟನ್ ಅಜಿಂಕ್ಯ ರಹಾನೆ ತಮ್ಮ ಮೇಲಿನ ಟೀಕೆಗಳಿಗೆ ಖಾರವಾಗಿಯೇ ಉತ್ತರ ಕೊಟ್ಟಿದ್ದಾರೆ. ನನ್ನ ಸ್ಟ್ರೈಕ್ ರೇಟ್ ಬಗ್ಗೆ ಪ್ರಶ್ನೆ ಮಾಡೋರಿಗೆ ಬೇರೇನೋ ಅಜೆಂಡಾ ಇದೆ, ನನ್ನ ಯಶಸ್ಸು ನೋಡಿ ಅವರಿಗೆ ಹೊಟ್ಟೆಕಿಚ್ಚು ಬಂದಿದೆ ಅಂತ ರಹಾನೆ ನೇರವಾಗಿ ಹೇಳಿದ್ದಾರೆ. ಮ್ಯಾಚ್ ಮುಗಿದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ರಹಾನೆ ಹೀಗೆ ಆಕ್ರೋಶ ಹೊರಹಾಕಿದ್ದಾರೆ.
ಕಳೆದ ಎರಡು ಮ್ಯಾಚ್‌ಗಳಲ್ಲಿ ತಂಡ ಸೋತಿದ್ದು, ರಹಾನೆ ಬ್ಯಾಟಿಂಗ್ ಶೈಲಿ ಬಗ್ಗೆ ದೊಡ್ಡ ಚರ್ಚೆಯೇ ನಡೀತಿತ್ತು. ಆದರೆ, ಈ ಎಲ್ಲಾ ಟೀಕೆಗಳನ್ನು 37 ವರ್ಷದ ರಹಾನೆ ತಳ್ಳಿಹಾಕಿದ್ದಾರೆ. "ನನ್ನ ಸ್ಟ್ರೈಕ್ ರೇಟ್ ಬಗ್ಗೆ ಮಾತಾಡೋರು ಒಂದೋ ಆಟ ನೋಡ್ತಿಲ್ಲ, ಇಲ್ಲಾಂದ್ರೆ ನನ್ನ ಮೇಲೆ ಅವರಿಗೆ ವೈಯಕ್ತಿಕವಾಗಿ ಏನೋ ಅಜೆಂಡಾ ಇದೆ. ನಾನು ಆಡೋದು ಅವರಿಗೆ ಇಷ್ಟವಿಲ್ಲ. ನಾನು ಇಲ್ಲಿಯವರೆಗೆ ಗಳಿಸಿದ ಯಶಸ್ಸನ್ನು ನೋಡಿ ಅವರಿಗೆ ಹೊಟ್ಟೆಕಿಚ್ಚು. ಹಾಗಾಗಿ ನನಗೆ ದೊಡ್ಡ ಚಿಂತೆಯಿಲ್ಲ. ನಾನೇನು ಮಾಡ್ತಿದ್ದೀನಿ ಅಂತ ನನಗೆ ಚೆನ್ನಾಗಿ ಗೊತ್ತು," ಎಂದು ರಹಾನೆ ಹೇಳಿದ್ದಾರೆ.
ತಮ್ಮ 200ನೇ ಐಪಿಎಲ್ ಮ್ಯಾಚ್‌ನಲ್ಲಿ 10 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿ ಔಟಾಗಿದ್ದನ್ನು ರಹಾನೆ ಸಮರ್ಥಿಸಿಕೊಂಡಿದ್ದಾರೆ. "ಅದೊಂದು ಕೆಟ್ಟ ಇನ್ನಿಂಗ್ಸ್ ಅಂತ ನನಗನಿಸುವುದಿಲ್ಲ. ರನ್ ಗಳಿಸಲು ನಾನು ಪ್ರಯತ್ನಪಟ್ಟೆ. ಕೆಲವೊಮ್ಮೆ ಬ್ಯಾಟಿಂಗ್‌ನಲ್ಲಿ ಆ ರಿದಮ್ ಸಿಗಲ್ಲ. ಆಟದ ಬಗ್ಗೆ ಗೊತ್ತಿಲ್ಲದವರು ನನ್ನ ಬಗ್ಗೆ ಮಾತಾಡ್ತಾರೆ. ನಾನು ನನ್ನ ಆಟವನ್ನು ಇಷ್ಟೊಂದು ಸುಧಾರಿಸ್ತೀನಿ ಅಂತ ಅವರು ಅಂದುಕೊಂಡಿರಲಿಲ್ಲ," ಅಂತಾನೂ ರಹಾನೆ ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಮ್ಯಾಚ್‌ನಲ್ಲಿ 40 ಎಸೆತಗಳಲ್ಲಿ 67 ರನ್ ಗಳಿಸಿದ್ದನ್ನು ರಹಾನೆ ನೆನಪಿಸಿದ್ದಾರೆ. ಒಂದೇ ಒಂದು ಇನ್ನಿಂಗ್ಸ್‌ನ ವೈಫಲ್ಯ ನೋಡಿ ನನ್ನನ್ನು ಅಳೆಯಬೇಡಿ ಅಂತಾನೂ ಅವರು ಹೇಳಿದ್ದಾರೆ.
ಪವರ್‌ಪ್ಲೇ ಓವರ್‌ಗಳಲ್ಲಿ ಯಾವುದೇ ಭಯವಿಲ್ಲದೆ ಬ್ಯಾಟ್ ಮಾಡುವುದೇ ನಮ್ಮ ತಂಡದ ಪಾಲಿಸಿ ಅಂತ ರಹಾನೆ ಸ್ಪಷ್ಟಪಡಿಸಿದ್ದಾರೆ. ಫಿನ್ ಅಲೆನ್ ಜೊತೆಗಿನ ಓಪನಿಂಗ್ ಪಾರ್ಟ್‌ನರ್‌ಶಿಪ್ ಬಗ್ಗೆ ತಮಗೆ ಸಮಾಧಾನವಿದೆ. ಸೋಲುಗಳಿಂದಾಗಿ ನನ್ನ ಆಟದ ಶೈಲಿಯನ್ನು ಬದಲಾಯಿಸುವ ಉದ್ದೇಶವಿಲ್ಲ, ಟೀಕಾಕಾರರು ಮಾತಾಡ್ತಾನೇ ಇರಲಿ ಎಂದು ರಹಾನೆ ಹೇಳಿದ್ದಾರೆ. ಹೈದರಾಬಾದ್ ನೀಡಿದ್ದ 227 ರನ್‌ಗಳ ಗುರಿ ಬೆನ್ನತ್ತಿದ ಕೋಲ್ಕತ್ತಾ, 161 ರನ್‌ಗಳಿಗೆ ಆಲೌಟ್ ಆಗಿ 65 ರನ್‌ಗಳ ಹೀನಾಯ ಸೋಲು ಕಂಡಿತ್ತು. ಈ ಸೋಲಿನೊಂದಿಗೆ ಕೋಲ್ಕತ್ತಾ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.
200 ಪಂದ್ಯ ಕ್ಲಬ್‌ಗೆ ಅಜಿಂಕ್ಯ ರಹಾನೆ
ಕೋಲ್ಕತಾ: ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ ಐಪಿಎಲ್‌ನಲ್ಲಿ ವಿಶೇಷ ಮೈಲುಗಲ್ಲು ಸಾಧಿಸಿದ್ದಾರೆ. ಲೀಗ್ ಇತಿಹಾಸದಲ್ಲೇ 200 ಪಂದ್ಯ ಆಡಿದ 11ನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಗುರುವಾರ ಅವರು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿದರು. ಇದು ಐಪಿಎಲ್‌ನಲ್ಲಿ ಅವರ 200ನೇ ಪಂದ್ಯ. ಅವರು ಟೂರ್ನಿಯಲ್ಲಿ 30.58ರ ಸರಾಸರಿಯ, 125.32 ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 5107 ರನ್ ಕಲೆಹಾಕಿದ್ದು, 2 ಶತಕ ಹಾಗೂ 34 ಅರ್ಧಶತಕ ಬಾರಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 105 ರನ್.
ರಹಾನೆ 2008ರಿಂದಲೂ ಐಪಿಎಲ್ ಆಡುತ್ತಿದ್ದು, ಈವರೆಗೂ ಒಟ್ಟು 6 ತಂಡಗಳ ಪರ ಕಣಕ್ಕಿಳಿದಿದ್ದಾರೆ. 2008, 2009ರಲ್ಲಿ ಮುಂಬೈ ಇಂಡಿಯನ್ಸ್‌ನಲ್ಲಿದ್ದ ಅವರು, 2011-2015ರ ನಡುವೆ ರಾಜಸ್ಥಾನ ರಾಯಲ್ಸ್ ಭಾಗವಾಗಿದ್ದರು. 2016, 2017ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್‌ನ ಭಾಗವಾಗಿದ್ದರು. 2018, 2019ರಲ್ಲಿ ಮತ್ತೆ ರಾಜಸ್ಥಾನಕ್ಕೆ ಮರಳಿದ ಅವರು, 2020, 2021ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. 2022ರಲ್ಲಿ ಕೋಲ್ಕತಾ ತಂಡದಲ್ಲಿದ್ದ ರಹಾನೆ, 2023, 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಆಡುವ ಅವಕಾಶ ಪಡೆದಿದ್ದರು. ಕಳೆದ 2 ವರ್ಷಗಳಿಂದ ಕೋಲ್ಕತಾ ತಂಡದಲ್ಲಿದ್ದಾರೆ. ಈಗ ನಾಯಕನಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.