ಬಾಕ್ಸಿಂಗ್ ಡೇ ಟೆಸ್ಟ್‌: ಕ್ರಿಕೆಟ್‌ ಪಂಡಿತರ ಮನಗೆದ್ದ ರಹಾನೆ ನಾಯಕತ್ವ

By Suvarna NewsFirst Published Dec 26, 2020, 4:58 PM IST
Highlights

ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನಿಭಾಯಿಸಿದ ಕ್ಯಾಪ್ಟನ್ಸಿ ರೀತಿಗೆ ಕ್ರಿಕೆಟ್‌ ಪಂಡಿತರು ಫಿದಾ ಆಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಮೆಲ್ಬರ್ನ್‌(ಡಿ.26): ಭಾರತ-ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯ ಆರಂಭವಾಗಿದ್ದು, ಮೊದಲ ದಿನವೇ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ನಾಯಕನಾಗಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಕ್ರಿಕೆಟ್‌ ಪಂಡಿತರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು, ಪಿಂಕ್ ಬಾಲ್ ಟೆಸ್ಟ್‌ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ತವರಿಗೆ ಮರಳಿದ್ದು, ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅದರಲ್ಲೂ ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಆಘಾತಕಾರಿ ಸೋಲು ಕಂಡಿತ್ತು. ಹೀಗಾಗಿ ರಹಾನೆ ಮೇಲೆ ಸಾಕಷ್ಟು ಒತ್ತಡವಿತ್ತು. ಇದೆಲ್ಲದರ ಹೊರತಾಗಿಯೂ ಆಯಕಟ್ಟಿನ ಸ್ಥಳಗಳಲ್ಲಿ ಕ್ಷೇತ್ರರಕ್ಷಕರನ್ನು ನಿಲ್ಲಿಸಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಕೇವಲ 195 ರನ್‌ಗಳಿಗೆ ಕಟ್ಟಿಹಾಕುವಲ್ಲಿ ರಹಾನೆ ಪಡೆ ಯಶಸ್ವಿಯಾಗಿದೆ. ರಹಾನೆ ನಾಯಕತ್ವದ ತಂತ್ರಗಾರಿಕೆಗೆ ಕ್ರಿಕೆಟ್ ದಿಗ್ಗಜರು ಫಿದಾ ಆಗಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡಕ್ಕೆ ಭಾರತೀಯ ಬೌಲರ್‌ಗಳು ಕರಾರುವಕ್ಕಾದ ದಾಳಿ ನಡೆಸುವ ಮೂಲಕ ಕಂಗಾಲು ಮಾಡಿದರು. ಅದರಲ್ಲೂ ನಾಯಕ ರಹಾನೆ ಬುಮ್ರಾ ಹಾಗೂ ಅಶ್ವಿನ್‌ ಅವರಿಗೆ ಆಕ್ರಮಣಕಾರಿ ದಾಳಿ ನಡೆಸಲು ಅವಕಾಶ ಮಾಡಿಕೊಟ್ಟಿದ್ದು, ಕಾಂಗರೂ ಪಡೆಯ ಬ್ಯಾಟ್ಸ್‌ಮನ್‌ಗಳು ನೆಲಕಚ್ಚಿ ಆಡಲು ಅವಕಾಶ ಮಾಡಿಕೊಡಲಿಲ್ಲ. ಸೂಕ್ತ ಸಂದರ್ಭದಲ್ಲಿ ಬುಮ್ರಾ ಅವರಿಗೆ ಬೌಲಿಂಗ್‌ ಮಾಡಲು ಇಳಿಸಿದ್ದು ಕೂಡಾ ತಂಡದ ಪಾಲಿಗೆ ವರದಾನವಾಗಿ ಪರಿಣಮಿಸಿತು.  

ಬಾಕ್ಸಿಂಗ್ ಡೇ ಟೆಸ್ಟ್‌: ಟೀಂ ಇಂಡಿಯಾಗೆ ಮೊದಲ ದಿನದ ಗೌರವ

ರಹಾನೆ ನಾಯಕತ್ವದ ತಂತ್ರಗಾರಿಕೆಗೆ ಗ್ಲೆನ್‌ ಮೆಗ್ರಾತ್, ಅಜಯ್ ಜಡೇಜಾ, ಪಾರ್ಥಿವ್ ಪಟೇಲ್ ಸೇರಿದಂತೆ ಹಲವು ಕ್ರಿಕೆಟಿಗರು ಫುಲ್‌ ಮಾರ್ಕ್ಸ್‌ ನೀಡಿದ್ದಾರೆ. 
ರಹಾನೆ ಒಳ್ಳೆಯ ನಾಯಕತ್ವ ನಿಭಾಯಿಸಿದ್ದಾರೆ ಎಂದೆನಿಸುತ್ತಿದೆ, ಸ್ಲಿಪ್‌ನಲ್ಲಿ ನಾಲ್ವರು ಹಾಗೂ ಗಲ್ಲಿ ಪಾಯಿಂಟ್‌ನಲ್ಲಿ ಓರ್ವ ಫೀಲ್ಡರ್ ನಿಲ್ಲಿಸುವ ಮೂಲಕ ಆಕ್ರಮಣಕಾರಿ ಫೀಲ್ಡ್ ಸೆಟ್ ಮಾಡಿದರು. ಸ್ಮಿತ್ ವಿಕೆಟ್‌ ಪತನದ ಬಳಿಕ ಬುಮ್ರಾ ಅವರನ್ನು ದಾಳಿಗಿಳಿಸುವ ಮೂಲಕ ಉತ್ತಮ ನಾಯಕತ್ವ ನಿಭಾಯಿಸಿದರು ಎಂದು ಮೆಗ್ರಾತ್ ಹೇಳಿದ್ದಾರೆ.

ಇದೇ ರೀತಿ ಆರಂಭದಲ್ಲೇ ರವಿಚಂದ್ರನ್ ಅಶ್ವಿನ್‌ ಅವರನ್ನು ಬೌಲಿಂಗ್ ದಾಳಿಗಿಳಿಸಿದ್ದು ಸಹ ಪಾರ್ಥಿವ್ ಪಟೇಲ್, ಅಜೇಯ್ ಜಡೇಜಾ ಮೆಚ್ಚುಗೆಗೆ ಪಾತ್ರವಾಗಿದೆ. 
 

click me!