ರಾಹುಲ್ ದ್ರಾವಿಡ್ ಬಳಿಕ ಮತ್ತೋರ್ವ ಟೀಂ ಇಂಡಿಯಾ ಮಾಜಿ ಕೋಚ್‌ ಕರೆ ತಂದ ರಾಜಸ್ಥಾನ ರಾಯಲ್ಸ್!

By Naveen KodaseFirst Published Sep 20, 2024, 2:18 PM IST
Highlights

ರಾಜಸ್ಥಾನ ರಾಯಲ್ಸ್ ತಂಡದ ನೂತನ ಬ್ಯಾಟಿಂಗ್ ಕೋಚ್ ಆಗಿ ವಿಕ್ರಂ ರಾಥೋಡ್ ಅವರನ್ನು ನೇಮಕ ಮಾಡಿಕೊಂಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ: ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್ ತಂಡವು ಮತ್ತೊಮ್ಮೆ ಶತಾಯಗತಾಯ ಐಪಿಎಲ್ ಟ್ರೋಫಿ ಗೆಲ್ಲುವ ಪಣತೊಟ್ಟಿದ್ದು, ಮುಂಬರುವ ಐಪಿಎಲ್ ಟೂರ್ನಿಗಾಗಿ ಭರ್ಜರಿ ಸಿದ್ದತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ರಾಜಸ್ಥಾನ ರಾಯಲ್ಸ್ ತಂಡದ ಹೆಡ್‌ ಕೋಚ್ ಆಗಿ ಚಾಂಪಿಯನ್ ಕೋಚ್ ರಾಹುಲ್ ದ್ರಾವಿಡ್‌ ಅವರನ್ನು ನೇಮಕ ಮಾಡಿಕೊಂಡಿರುವ ಫ್ರಾಂಚೈಸಿ, ಇದೀಗ ಟೀಂ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಅವರನ್ನು ರಾಜಸ್ಥಾನ ರಾಯಲ್ಸ್‌ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಿಕೊಂಡಿದೆ.

ವಿಕ್ರಂ ರಾಥೋಡ್ ಭಾರತದ ಮಾಜಿ ಆರಂಭಿಕ ಬ್ಯಾಟರ್ ಆಗಿ ಹಾಗೂ ಆಯ್ಕೆಗಾರರಾಗಿ ಗಮನ ಸೆಳೆದಿದ್ದಾರೆ. ಇದೀಗ ರಾಜಸ್ಥಾನ ರಾಯಲ್ಸ್ ತಂಡವನ್ನು ಕೂಡಿಕೊಂಡಿದ್ದಕ್ಕೆ ವಿಕ್ರಂ ರಾಥೋಡ್ ಸಂತಸ ವ್ಯಕ್ತಪಡಿಸಿದ್ದಾರೆ. "ರಾಯಲ್ಸ್ ಕುಟುಂಬ ಕೂಡಿಕೊಂಡಿರುವುದು ನನ್ನ ಸೌಭಾಗ್ಯ. ಮತ್ತೊಮ್ಮೆ ರಾಹುಲ್ ದ್ರಾವಿಡ್ ಜತೆ ಪ್ರತಿಭಾನ್ವಿತ ಯುವ ಆಟಗಾರರ ಜತೆ ಕೆಲಸ ಮಾಡುವುದಕ್ಕೆ ಎದುರು ನೋಡುತ್ತಿದ್ದೇನೆ ಎಂದು ವಿಕ್ರಂ ರಾಥೋಡ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Latest Videos

ವಿಕ್ರಂ ರಾಥೋಡ್ ಭಾರತ ಪರ 6 ಟೆಸ್ಟ್ ಹಾಗೂ 7 ಏಕದಿನ ಪಂದ್ಯಗಳನ್ನಾಡಿದ್ದಾರೆ. ಇದಾದ ಬಳಿಕ ವಿಕ್ರಂ ರಾಥೋಡ್ 2019ರಿಂದ 2024ರ ವರೆಗೆ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್‌ ಆಗಿ ಮಿಂಚಿದ್ದರು. ವಿಕ್ರಂ ರಾಥೋಡ್ ಮಾರ್ಗದರ್ಶನದಲ್ಲಿ ರಿಷಭ್ ಪಂತ್, ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಫಾರ್ಮ್ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. 

ವಿಕ್ರಂ ರಾಥೋಡ್ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗುವ ಮುನ್ನ 4 ವರ್ಷಗಳ ಕಾಲ ಟೀಂ ಇಂಡಿಯಾ ಆಯ್ಕೆ ಸಮಿತಿ ಸದಸ್ಯರಾಗಿದ್ದರು. ಇದಷ್ಟೇ ಅಲ್ಲದೇ ದೇಶಿ ಕ್ರಿಕೆಟ್‌ನಲ್ಲಿ ಪಂಜಾಬ್ ಹಾಗೂ ಹಿಮಾಚಲಪ್ರದೇಶ ತಂಡದ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ ತಂಡದ ಕೋಚ್ ಆಗಿಯೂ ಸೈ ಎನಿಸಿಕೊಂಡಿದ್ದರು.

2008ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶೇನ್ ವಾರ್ನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ಆ ನಂತರದ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನದ ಹೊರತಾಗಿಯೂ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಐಪಿಎಲ್ ಟ್ರೋಫಿ ಜಯಿಸಲು ಸಾಧ್ಯವಾಗಿಲ್ಲ. 

click me!