ಆಫ್ಘಾನ್ ಲೀಗ್ ಪಂದ್ಯದ ನಡುವೆ ಆತ್ಮಾಹುತಿ ಬಾಂಬ್ ದಾಳಿ, ಕ್ರಿಕೆಟಿಗರು ಬಂಕರ್‌ಗೆ ಶಿಫ್ಟ್!

By Suvarna NewsFirst Published Jul 29, 2022, 7:53 PM IST
Highlights

ಆಫ್ಘಾನಿಸ್ತಾನ ಪ್ರೀಮಿಯರ್ ಲೀಗ್ ಟೂರ್ನಿ ಪಂದ್ಯದ ನಡುವೆ ಬಾಂಬ್ ಸ್ಫೋಟಿಸಿದೆ. ಆತ್ಮಾಹುತಿ ಬಾಂಬ್ ದಾಳಿ ಇದಾಗಿದ್ದು, ಕ್ರೀಡಾಂಗಣ ಧ್ವಂಸಗೊಂಡಿದೆ.  ಹೆಚ್ಚಿನ ಮಾಹಿತಿ ಇಲ್ಲಿದೆ.

ಕಾಬೂಲ್(ಜು.29):   ಆಫ್ಘಾನಿಸ್ತಾನದಲ್ಲಿ ಭಯೋತ್ಪಾದಕರ ಅಟ್ಟಹಾಸ ಹೆಚ್ಚಾಗಿದೆ. ಆಫ್ಘಾನಿಸ್ತಾನ ಪ್ರಿಮೀಯರ್ ಲೀಗ್ ಟೂರ್ನಿಯ ಪಂದ್ಯ ನಡೆಯುತ್ತಿದ್ದ ವೇಳೆಯ ಆತ್ಮಾಹುತಿ ಬಾಂಬ್ ದಾಳಿ ನಡೆಸಿದೆ. ಈ ಬಾಂಬ್ ಸ್ಫೋಟದಿಂದ ಕಾಬೂಲ್ ಕ್ರೀಡಾಂಗಣ ಧ್ವಂಸಗೊಂಡಿದೆ. ಬ್ಯಾಂಡ್ ಎ ಅಮಿರ್ ಡ್ರ್ಯಾಗನ್ಸ್, ಹಾಗೂ ಪಮೀರ್ ಝಲ್ಮಿ ನಡುವಿನ ಪಂದ್ಯ ನಡೆಯುತ್ತಿದ್ದ ವೇಳೆ ಆತ್ಮಾಹುತಿ ಬಾಂಬ್ ದಾಳಿಯಾಗಿದೆ. ತಕ್ಷಣವೇ ಭದ್ರತಾ ಅಧಿಕಾರಿಗಳು ಆಟಗಾರರನ್ನು ಬಂಕರ್‌ಗೆ ಸ್ಥಳಾಂತರಿಸಿದ್ದಾರೆ. ಸಂಪೂರ್ಣ ಕ್ರೀಡಾಂಗಣವನ್ನು ಭದ್ರತಾ ಅಧಿಕಾರಿಗಳು ಸುತ್ತುವರಿದಿದ್ದಾರೆ. ಆಫ್ಘಾನಿಸ್ತಾನದಲ್ಲಿನ ಪ್ರೀಮಿಯರ್  ಲೀಗ್ ಬಹುನಿರೀಕ್ಷಿತ ಟೂರ್ನಿಯಾಗಿದೆ. ಕ್ರಿಕೆಟ್ ಶಿಶು ಎಂದೇ ಕರೆಸಿಕೊಳ್ಳುತ್ತಿದ್ದ ಆಫ್ಘಾನಿಸ್ತಾನ ಇದೀಗ ಪ್ರಿಮಿಯರ್ ಲೀಗ್ ಟೂರ್ನಿ ಆಯೋಜಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಹೀಗಾಗಿ ವಿಶ್ವಸಂಸ್ಥೆ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಈ ಪಂದ್ಯ ವೀಕ್ಷಿಸಲು ಕಾಬೂಲ್ ಕ್ರೀಡಾಂಗಣಕ್ಕೆ ಆಗಮಿಸಿದ್ರು. ಅಧಿಕಾರಿಗಳು ಹಾಜರಿರುವಾಗಲೇ ಈ ಸ್ಫೋಟ ಸಂಭವಸಿದೆ.  

ಪ್ರೇಕ್ಷರ ಗ್ಯಾಲರಿಯಲ್ಲಿ ಬಾಂಬ್ ಸ್ಫೋಟಿಸಿದೆ. ಇದ್ದಕ್ಕಿದ್ದಂತೆ ಬಾಂಬ್ ಸ್ಫೋಟದಿಂದ ಪ್ರೇಕ್ಷಕರು ದಿಕ್ಕಾಪಾಲಾಗಿ ಓಡಿದ್ದಾರೆ. 22ನೇ ಲೀಗ್ ಪಂದ್ಯ ನಡೆಯುತ್ತಿದ್ದ ವೇಳೆ ಈ ಆತ್ಮಾಹುತಿ ಬಾಂಬ್ ಸ್ಫೋಟಗೊಂಡಿದೆ. ಆತ್ಮಾಹುತಿ ದಾಳಿಯನ್ನು ಕಾಬೂಲ್ ಪೊಲೀಸ್ ಖಚಿತಪಡಿಸಿದೆ.  ಸದ್ಯಕ್ಕೆ ಯಾವುದೇ ಸಾವು ನೋವು ವರದಿಯಾಗಿಲ್ಲ. 

RSS ಕಚೇರಿ ಮೇಲೆ ಬಾಂಬ್ ಎಸೆದ ದುಷ್ಕರ್ಮಿಗಳು, ಕಟ್ಟಡ ಧ್ವಂಸ!

ಕಾಬೂಲ್ ಸೇರಿದಂತೆ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ದಾಳಿ ಸತತವಾಗಿ ನಡೆಯುತ್ತಿದೆ. ಹಲವು ಅಮಾಯಕರು ಬಲಿಯಾಗಿದ್ದಾರೆ. ಇತ್ತೀಚೆಗೆ ಕಾಬೂಲ್‌ನಲ್ಲಿರುವ ಸಿಖ್ ಗುರುದ್ವಾರದ ಮೇಲೆ ದಾಳಿಯಾಗಿತ್ತು. ಉಗ್ರರು ಬಾಂಬ್ ಹಾಗೂ ಗುಂಡಿನ ದಾಳಿ ನಡೆಸಲಾಗಿತ್ತು. ಇಸ್ಲಾಮಿಕ್‌ ಸ್ಟೇಟ್‌ ಬೆಂಬಲಿತ ಉಗ್ರರು ಕಾರ್ತೆ ಪರ್ವಾನ್‌ ಗುರುದ್ವಾರದಲ್ಲಿ ಇದ್ದಕ್ಕಿದ್ದಂತೆ ನುಗ್ಗಿ ಭಕ್ತಾದಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಸುಮಾರು 30 ಮಂದಿ ಭಕ್ತಾದಿಗಳು ಗುರುದ್ವಾರದಲ್ಲಿದ್ದರು. ಇದಲ್ಲದೇ ಗುರುದ್ವಾರದಲ್ಲಿ ಹಲವೆಡೆ ಬಾಂಬ್‌ ಅಳವಡಿಸಲಾಗಿದ್ದು, ಸ್ಫೋಟದಿಂದಾಗಿ ಇಡೀ ಗುರುದ್ವಾರ ಬೆಂಕಿಗೆ ಆಹುತಿಯಾಗಿದೆ. ‘ಆಗ ತಾಲಿಬಾನ್‌ ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, 3 ಉಗ್ರರ ಹತ್ಯೆ ಮಾಡಲಾಗಿದೆ’ ಎಂದು ತಾಲಿಬಾನ್‌ ಆಂತರಿಕ ಸಚಿವಾಲಯ ವಕ್ತಾರ ಅಬ್ದುಲ್‌ ನಫಿ ತಕೋರ್‌ ತಿಳಿಸಿದ್ದಾರೆ. ‘ಈ ದಾಳಿಯಲ್ಲಿ ಒಬ್ಬ ಇಸ್ಮಾಮಿಕ್‌ ಎಮಿರೇಟ್ಸ್‌ನ ಸದಸ್ಯ ಹಾಗೂ ಆಪ್ಘನ್‌ ಹಿಂದೂ ನಾಗರಿಕನೊಬ್ಬ ಮೃತಪಟ್ಟಿದ್ದಾನೆ. 7 ಜನರು ಗಂಭೀರವಾಗಿ ಗಾಯಗೊಂಡಿದ್ದು, ಇವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದಿದ್ದಾರೆ.

click me!