
ಕಾಬುಲ್: ಮುಂಬರುವ ಫೆಬ್ರವರಿ 07ರಿಂದ ಆರಂಭವಾಗಲಿರುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಆಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ 15 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದ್ದು, ರಶೀದ್ ಖಾನ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ಹಾಗೂ ಶ್ರೀಲಂಕಾ ಈ ಚುಟುಕು ಮಹಾ ವಿಶ್ವಕಪ್ ಟೂರ್ನಿಗೆ ಜಂಟಿ ಆತಿಥ್ಯ ವಹಿಸಿದ್ದು, 20 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಇನ್ನು ಇಂಟ್ರೆಸ್ಟಿಂಗ್ ವಿಚಾರವೆಂದರೇ, ಅನುಭವಿ ಆಲ್ರೌಂಡರ್ ಗುಲ್ಬದ್ದೀನ್ ನೈಬ್ ಹಾಗೂ ಮಾರಕ ವೇಗಿ ನವೀನ್ ಉಲ್ ಹಕ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ತಂಡವು ಬಲಾಢ್ಯ ತಂಡಗಳನ್ನು ಬಗ್ಗುಬಡಿಯುವ ಮೂಲಕ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿತ್ತು. ಸಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಆಫ್ಘಾನಿಸ್ತಾನ ತಂಡವು ವಿರೋಚಿತ ಸೋಲು ಕಾಣುವ ಮೂಲಕ ತನ್ನ ಅಭಿಯಾನ ಮುಗಿಸಿತ್ತು. ಇದೀಗ ಕಳೆದ ಆವೃತ್ತಿಯಲ್ಲಿ ತೋರಿದ ಪ್ರದರ್ಶನವನ್ನೇ ಮರುಕಳಿಸುವಂತೆ ಮಾಡಲು ರಶೀದ್ ಖಾನ್ ಪಡೆ ಎದುರು ನೋಡುತ್ತಿದೆ.
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಈಗಾಗಗಲೇ ಪ್ರಕಟವಾಗಿರುವ 15 ಆಟಗಾರರನ್ನೊಳಗೊಂಡ ಆಫ್ಘಾನಿಸ್ತಾನ ತಂಡವು ಯುಎಇನಲ್ಲಿ ವೆಸ್ಟ್ ಇಂಡೀಸ್ ಎದುರು ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯು ಯುಎಇನಲ್ಲಿ ಜನವರಿ 19ರಿಂದ 22ರವರೆಗೆ ನಡೆಯಲಿದೆ. ಇನ್ನು ಸರಣಿಯು ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಅಭ್ಯಾಸಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ. ಫೆಬ್ರವರಿ 07ರಿಂದ ಮಾರ್ಚ್ 08ರ ವರೆಗೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಜರುಗಲಿದ್ದು, ಆಫ್ಘಾನ್ ಪಡೆ ಚೊಚ್ಚಲ ವಿಶ್ವಕಪ್ ಗೆಲ್ಲುವ ಕನವರಿಕೆಯಲ್ಲಿದೆ.
ಗುಲ್ಬದ್ದೀನ್ ನೈಬ್ ತಂಡ ಕೂಡಿಕೊಂಡಿದ್ದರಿಂದ ಆಫ್ಘಾನಿಸ್ತಾನದ ಮಧ್ಯಮ ಕ್ರಮಾಂಕಕ್ಕೆ ಮತ್ತಷ್ಟು ಬಲ ಬಂದಂತೆ ಆಗಿದೆ. ಇನ್ನು ಮಾರಕ ವೇಗಿ ನವೀನ್ ಉಲ್ ಹಕ್ ಗಾಯದಿಂದ ಚೇತರಿಸಿಕೊಂಡಿದ್ದು, ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ. ಇನ್ನು ಫಝಲ್ ಹಕ್ ಫಾರೂಕಿ ಕೂಡಾ ಮಾರಕ ದಾಳಿ ನಡೆಸಲು ಎದುರು ನೋಡುತ್ತಿದ್ದಾರೆ.
ಇನ್ನು ಯುವ ಕ್ರಿಕೆಟಿಗರಾದ ಶಾಹಿದುಲ್ಲಾ ಕಮಾಲ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ಇಶಾಕ್ ಅದ್ಭುತ ಪ್ರದರ್ಶನ ತೋರುವ ಮೂಲಕ ಆಫ್ಘಾನಿಸ್ತಾನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯುವ ವೇಗಿ ಅಬ್ದುಲ್ಲಾ ಅಹಮದ್‌ಝಾಯ್ ಅವರಿಗೆ ಆಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ತಂಡದಲ್ಲಿ ಮಣೆ ಹಾಕಿದೆ.
ಮುಂಬರುವ ಟಿ20 ವಿಶ್ವಕಪ್ ಟೂರ್ನಿಯು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವುದರಿಂದ ಬಹುತೇಕ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ದೊರೆಯುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಆಫ್ಘಾನಿಸ್ತಾನ ತಂಡವು ಮಾರಕ ಸ್ಪಿನ್ನರ್‌ಗಳ ಬಲದೊಂದಿಗೆ ಚುಟುಕು ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಅದರಲ್ಲೂ ಮುಜೀಬ್ ಉರ್ ರೆಹಮಾನ್ ಕಮ್‌ಬ್ಯಾಕ್ ಮಾಡಿರುವುದು ಆಫ್ಘಾನ್ ಪಡೆಗೆ ಆನೆ ಬಲ ತಂದುಕೊಟ್ಟಿದೆ. ರಶೀದ್ ಖಾನ್ ಹಾಗೂ ನೂರ್ ಅಹಮದ್ ಕೂಡಾ ಎದುರಾಳಿ ಬ್ಯಾಟರ್‌ಗಳನ್ನು ಕಾಡಲು ರೆಡಿಯಾಗಿದ್ದಾರೆ.
ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ತಂಡವು ಡಿ ಗ್ರೂಪ್‌ನಲ್ಲಿ ಸ್ಥಾನ ಪಡೆದಿದೆ. ಇದೇ ಗ್ರೂಪ್‌ನಲ್ಲಿ ಬಲಿಷ್ಠ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಯುಎಇ ಹಾಗೂ ಕೆನಡಾ ತಂಡಗಳು ಸ್ಥಾನ ಪಡೆದಿವೆ. ಆಫ್ಘಾನಿಸ್ತಾನ ತಂಡವು ಫೆಬ್ರವರಿ 08ರಂದು ಬಲಿಷ್ಠ ನ್ಯೂಜಿಲೆಂಡ್ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಸೇದಿಕುಲ್ ಅಟಲ್, ಇಬ್ರಾಹಿಂ ಜದ್ರಾನ್, ದಾರ್ವಿಸ್ ರಸೋಲಿ, ರೆಹಮನುಲ್ಲಾ ಗುರ್ಬಾಜ್, ಮೊಹಮ್ಮದ್ ಇಶಾಕ್, ರಶೀದ್ ಖಾನ್(ನಾಯಕ), ಶಾಹಿದುಲ್ಲಾ ಕಮಾಲ್, ಮೊಹಮ್ಮದ್ ನಬಿ, ಗುಲ್ಬದ್ದೀನ್ ನೈಬ್, ಅಝ್ಮತುಲ್ಲಾ ಓಮರ್‌ಝೈ, ನೂರ್ ಅಹಮದ್, ಅಬ್ದುಲ್ಲಾ ಅಮದ್‌ಝೈ, ಫಜಲ್‌ಹಕ್ ಫಾರೂಕಿ, ನವೀನ್ ಉಲ್ ಹಕ್, ಮುಜೀಬ್ ಉರ್ ರೆಹಮಾನ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.