
ಟೀಮ್ ಇಂಡಿಯಾ ಹಾಗೂ ಐಪಿಎಲ್‌ನ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ಬ್ಯಾಟಿಂಗ್ ಅಬ್ಬರ ಹೇಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಇದೀಗ 'ಶೇರ್-ಎ-ಪಂಜಾಬ್' ಟಿ20 ಲೀಗ್‌ನಲ್ಲಿ ಅಭಿಷೇಕ್ ಶರ್ಮಾ ಕೇವಲ ಬ್ಯಾಟಿಂಗ್ ಮಾಡಿಲ್ಲ, ಬದಲಾಗಿ ಬೌಲರ್‌ಗಳ ಮೇಲೆ ಸುನಾಮಿಯಂತೆ ಎರಗಿದ್ದಾರೆ. ಕೇವಲ 26 ಎಸೆತಗಳಲ್ಲಿ ಅವರು ಸಿಡಿಸಿದ ರನ್ ಮತ್ತು ಆ ಒಂದೇ ಓವರ್‌ನಲ್ಲಿ ಬಾರಿಸಿದ 6 ಸಿಕ್ಸರ್‌ಗಳು ಈಗ ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿವೆ.
ಅಮೃತಸರ ಸೂರ್ಮಾಸ್ ತಂಡದ ನಾಯಕರಾಗಿರುವ ಅಭಿಷೇಕ್ ಶರ್ಮಾ, ಮೊಹಾಲಿ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭದಿಂದಲೇ ಅಬ್ಬರಿಸಿದರು. ಸಹಜ ಧವನ್ (18 ಎಸೆತಗಳಲ್ಲಿ 45 ರನ್) ಜೊತೆಗೂಡಿ ಇನ್ನಿಂಗ್ಸ್ ಆರಂಭಿಸಿದ ಅಭಿಷೇಕ್, ಪವರ್‌ಪ್ಲೇ ಮುಗಿಯುವ ಮೊದಲೇ ಅಂದರೆ ಕೇವಲ 5.1 ಓವರ್‌ಗಳಲ್ಲಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಶತಕದ ಜೊತೆಯಾಟಗಳಲ್ಲಿ ಒಂದಾಗಿದೆ.
ಪಂದ್ಯದ 5ನೇ ಓವರ್ ಬೌಲ್ ಮಾಡಿದ ಆಯುಷ್ ಗೋಯಲ್ ಅವರಿಗೆ ಅಭಿಷೇಕ್ ಶರ್ಮಾ ಅಕ್ಷರಶಃ ನರಕ ದರ್ಶನ ಮಾಡಿಸಿದರು. ಈ ಓವರ್‌ನ ಎಲ್ಲಾ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ ಅಭಿಷೇಕ್, ಯುವರಾಜ್ ಸಿಂಗ್ ಅವರ ದಾಖಲೆಯನ್ನು ನೆನಪಿಸಿದರು. ಕೇವಲ 17 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ ಅವರು, ಒಟ್ಟು 26 ಎಸೆತಗಳಲ್ಲಿ 77 ರನ್ ಚಚ್ಚಿದರು. ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 6 ಫೋರ್ ಮತ್ತು 7 ಸಿಕ್ಸರ್‌ಗಳಿದ್ದವು. ಅವರ ಸ್ಟ್ರೈಕ್ ರೇಟ್ 296ಕ್ಕೂ ಹೆಚ್ಚಿತ್ತು!
ಅಭಿಷೇಕ್ ಶರ್ಮಾ ಔಟಾದ ನಂತರ ಬಂದ ನಮನ್ ಧೀರ್ ಕೂಡ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 22 ಎಸೆತಗಳಲ್ಲಿ 5 ಸಿಕ್ಸರ್ ಸಹಿತ 47 ರನ್ ಗಳಿಸಿದರು. ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಅಮೃತಸರ ಸೂರ್ಮಾಸ್ ತಂಡ ನಿಗದಿತ 20 ಓವರ್‌ಗಳಲ್ಲಿ 258 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಮೊಹಾಲಿ ಕಿಂಗ್ಸ್ ಪರ ಹರ್‌ಪ್ರೀತ್ ಬ್ರಾರ್ ಅವರು ಅಭಿಷೇಕ್ ಶರ್ಮಾ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಅಭಿಷೇಕ್ ಶರ್ಮಾರ ರುದ್ರತಾಂಡವ ಪಂಜಾಬ್ ಟಿ20 ಲೀಗ್‌ಗೆ ಭರ್ಜರಿ ಆರಂಭ ನೀಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.