IPL 2023 ಎಬಿಡಿ-ಗೇಲ್‌ ಆಡಿ ಮುಗಿಸಿದ್ದಾರೆ, ಈಗ ಸೂರ್ಯ ಟಿ20 ಕ್ರಿಕೆಟ್ ಆಳುತ್ತಿದ್ಧಾರೆ: ಭಜ್ಜಿ

By Naveen KodaseFirst Published May 4, 2023, 7:40 PM IST
Highlights

ಪಂಜಾಬ್ ಕಿಂಗ್ಸ್ ಎದುರು ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್
ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದ ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಭಜ್ಜಿ

ಮೊಹಾಲಿ(ಮೇ.04): ಟಿ20 ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಾ ಮಿಂಚುತ್ತಿರುವ ಮುಂಬೈ ಇಂಡಿಯನ್ಸ್ ತಂಡದ ತಾರಾ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್‌ಗೆ ಚುಕ್ಕೆ ಎಸೆತ(ಡಾಟ್ ಬಾಲ್) ಹಾಕುವುದು ಬೌಲರ್‌ಗಳ ಪಾಲಿಗೆ ಸುಲಭದ ಮಾತಲ್ಲ ಎಂದು ಭಜ್ಜಿ ಹೇಳಿದ್ದಾರೆ.

ಮೇ 03ರಂದು ಇಲ್ಲಿನ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯ ಪಂಜಾಬ್ ಕಿಂಗ್ಸ್‌ ತಂಡವು ಮುಂಬೈ ಇಂಡಿಯನ್ಸ್‌ಗೆ 215 ರನ್‌ಗಳ ಸವಾಲಿನ ಗುರಿ ನೀಡಿತ್ತು. ಕಳೆದ ಕೆಲ ಪಂದ್ಯಗಳಲ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದ ಸೂರ್ಯಕುಮಾರ್ ಯಾದವ್, ಪಂಜಾಬ್ ಎದುರಿನ ಹೈವೋಲ್ಟೇಜ್ ಪಂದ್ಯದಲ್ಲಿ ಕೇವಲ 31 ಎಸೆತಗಳಲ್ಲಿ ಸ್ಪೋಟಕ 66 ರನ್ ಚಚ್ಚುವ ಮೂಲಕ ಮುಂಬೈ ಇಂಡಿಯನ್ಸ್‌ ತಂಡವು ಗೆಲುವಿನತ್ತ ಮುಖ ಮಾಡಲು ನೆರವಾದರು. ಮೂರನೇ ವಿಕೆಟ್‌ಗೆ ಇಶಾನ್‌ ಕಿಶನ್(75) ಜತೆಗೂಡಿ 116 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಇನ್ನು ಕೊನೆಯಲ್ಲಿ ಟಿಮ್ ಡೇವಿಡ್ ಹಾಗೂ ತಿಲಕ್‌ ವರ್ಮಾ ಮುರಿಯದ 38 ರನ್‌ಗಳ ಜತೆಯಾಟವಾಡುವ ಮೂಲಕ ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

ಸೂರ್ಯಕುಮಾರ್ ಯಾದವ್‌ ಅವರು ಐಪಿಎಲ್‌ನ ದಿಗ್ಗಜ ಕ್ರಿಕೆಟಿಗರಾದ ಎಬಿ ಡಿವಿಲಿಯರ್ಸ್‌ ಹಾಗೂ ಕ್ರಿಸ್‌ ಗೇಲ್‌ ಅವರನ್ನು ಹಿಂದಿಕ್ಕಿದ್ದಾರೆ ಎಂದು ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಸೂರ್ಯಕುಮಾರ್ ಯಾದವ್‌, ಪಂದ್ಯವನ್ನು ಹೇಗೆ ಕೊಂಡೊಯ್ಯಬೇಕು ಎನ್ನುವುದರ ಅರಿವಿದೆ. ಅವರು ಎಲ್ಲಾ ರೀತಿಯ ಶಾಟ್‌ಗಳನ್ನು ಬಾರಿಸುತ್ತಾರೆ ಎಂದು ಭಜ್ಜಿ ಹೇಳಿದ್ದಾರೆ.

ನಾನು ಈ ರೀತಿಯ ಸನ್ನಿವೇಶವನ್ನು ನೋಡಿಯೇ ಇಲ್ಲ. ಯಾಕೆಂದರೆ ಈ ರೀತಿ ಎದುರಾಳಿ ಬೌಲರ್‌ಗಳನ್ನು ಒತ್ತಡಕ್ಕೀಡಾಗುವಂತೆ ಮಾಡುವುದನ್ನು ನಾನು ನೋಡಿಲ್ಲ. ನಾನು ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಆದರೆ ಈ ರೀತಿ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡಿದಂತ ಮತ್ತೊಬ್ಬ ಬ್ಯಾಟರ್‌ನನ್ನು ನಾನು ನೋಡಿಲ್ಲ. ಎಬಿ ಡಿವಿಲಿಯರ್ಸ್‌ ಹಾಗೂ ಕ್ರಿಸ್ ಗೇಲ್ ಆಡಿ ಹೋಗಿದ್ದಾರೆ. ಆದರೆ ಈಗ ಯಾವುದೇ ಮಾದರಿಯಲ್ಲಿ ಸೂರ್ಯಕುಮಾರ್ ಅವರಂತಹ ಮತ್ತೊಬ್ಬ ಬ್ಯಾಟರ್‌ನನ್ನು ನಾನು ನೋಡಿಲ್ಲ ಎಂದು ಹರ್ಭಜನ್ ಸಿಂಗ್, ಸ್ಟಾರ್ ಸ್ಪೋರ್ಟ್ಸ್‌ನ ಚರ್ಚಾ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

'ಯುವ ಕ್ರಿಕೆಟಿಗರು 200 ಚೇಸ್‌ ಮಾಡುವುದನ್ನು ಸೂರ್ಯಕುಮಾರ್ ಯಾದವ್ ನೋಡಿ ಕಲಿಯಲಿ'

ಅವರು ಒಳ್ಳೆಯ ಲಯದಲ್ಲಿದ್ದಾಗ ಎದುರಾಳಿ ಬೌಲರ್‌ ಯಾರಿದ್ದಾರೆ ಎನ್ನುವುದು ಮುಖ್ಯವಾಗುವುದಿಲ್ಲ. ಅವರು ತಮ್ಮದೇ ಆದ ರೀತಿಯಲ್ಲಿ ಆಡುತ್ತಾರೆ. ಪ್ರತಿಯೊಂದು ಬಾಲನ್ನು ಹೇಗೆ ಬಾರಿಸಬೇಕು ಎನ್ನುವುದು ಅವರಿಗೆ ಗೊತ್ತಿದೆ. ಸಾಮಾನ್ಯವಾಗಿ ಎಲ್ಲಾ ಬ್ಯಾಟರ್‌ಗಳು ಸಿಂಗಲ್‌ ಹಾಗೂ ಬೌಂಡರಿ ಬಾರಿಸುವಾಗ ಜೋರಾಗಿ ಹೊಡೆಯುತ್ತಾರೆ. ಆದರೆ ಸೂರ್ಯಕುಮಾರ್‌ಗೆ ಎಲ್ಲಾ ರೀತಿಯ ಶಾಟ್‌ ಬಾರಿಸುವುದು ಗೊತ್ತು. ಹೀಗಾಗಿಯೇ ಅವರು ಸುಲಭವಾಗಿ ಬೌಂಡರಿ ಬಾರಿಸುತ್ತಾರೆ ಎಂದು ಭಜ್ಜಿ ಹೇಳಿದ್ದಾರೆ.

ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದ ಗೆಲುವಿನ ಬಳಿಕ ಮುಂಬೈ ಇಂಡಿಯನ್ಸ್ ತಂಡವು ಟೂರ್ನಿಯಲ್ಲಿ 9 ಪಂದ್ಯಗಳನ್ನಾಡಿ 4 ಸೋಲು ಹಾಗೂ 5 ಗೆಲುವು ದಾಖಲಿಸುವುದರೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಇದೀಗ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಮೇ 06ರಂದು ಬದ್ದ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಕಾದಾಡಲಿದೆ. ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್‌ ಫಾರ್ಮ್‌ಗೆ ಮರಳಿರುವುದು ಮುಂಬೈ ಇಂಡಿಯನ್ಸ್‌ ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. 

click me!