
ಅಲ್ ಅಮೆರತ್(ನ.10): ಯುಎಇ ವಿರುದ್ಧದ ಅಂಡರ್-19 ಏಷ್ಯಾಕಪ್ ಪಂದ್ಯದಲ್ಲಿ ಭಾರತದ ಯುವ ಬ್ಯಾಟರ್ ಆರ್ಯವೀರ್ ಸೆಹ್ವಾಗ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ನವೆಂಬರ್ 10ರಂದು ಓಮನ್ನ ಅಲ್ ಅಮೆರತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ಮತ್ತು ಯುಎಇ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ಉತ್ತಮ ಮೊತ್ತ ದಾಖಲಿಸುವ ಗುರಿಯೊಂದಿಗೆ ಕಣಕ್ಕಿಳಿಯಿತು. ಈ ವೇಳೆ ಆರಂಭಿಕ ಬ್ಯಾಟರ್ ಆರ್ಯವೀರ್ ಸೆಹ್ವಾಗ್ ಆಕರ್ಷಕ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಒಂದು ರೀತಿ ಮಾಡು ಇಲ್ಲವೇ ಮಡಿ ಎನಿಸಿಕೊಂಡಿರುವ ಪಂದ್ಯದಲ್ಲಿ ವೀರೂ ಪುತ್ರ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಆರ್ಯವೀರ್ ಬ್ಯಾಟಿಂಗ್ ನೋಡಿದ ಫ್ಯಾನ್ಸ್, ಹುಲಿ ಹೊಟ್ಟೆಯಲ್ಲಿ ಹುಲಿ ಮರೀನೆ ಹುಟ್ಟುತ್ತೆ ಎಂದು ಸಂಭ್ರಮಿಸಿದ್ದಾರೆ.
ಇನಿಂಗ್ಸ್ ಆರಂಭಿಸಿದ ಆರ್ಯವೀರ್ 131 ಎಸೆತಗಳನ್ನು ಎದುರಿಸಿ ಶತಕ ಪೂರೈಸಿದರು. ಪಂದ್ಯದ ಆರಂಭದಲ್ಲೇ ನಾಯಕ ಲಕ್ಷಯ್ ರಾಯಚಂದಾನಿ 32 ಎಸೆತಗಳಲ್ಲಿ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಆರಂಭಿಕ ವಿಕೆಟ್ ಪತನದಿಂದ ಒತ್ತಡಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ಆರ್ಯವೀರ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಾಯಿತು. ಅವರ ಶತಕದ ನೆರವಿನಿಂದ ಭಾರತ ಇನಿಂಗ್ಸ್ ಸ್ಥಿರತೆ ಕಂಡುಕೊಂಡು ಉತ್ತಮ ಮೊತ್ತದತ್ತ ಸಾಗುವ ಅವಕಾಶ ಪಡೆದುಕೊಂಡಿತು. ಇತ್ತೀಚಿನ ಪಂದ್ಯಗಳಲ್ಲೂ ಆರ್ಯವೀರ್ ಉತ್ತಮ ಫಾರ್ಮ್ನಲ್ಲಿದ್ದಾರೆ ಎಂಬುದು ಗಮನಾರ್ಹ. ಈ ಟೂರ್ನಿಯಲ್ಲಿ ನವೆಂಬರ್ 6ರಂದು ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ತಂಡ ನೇಪಾಳವನ್ನು ಎದುರಿಸಿತ್ತು. ಆ ಪಂದ್ಯದಲ್ಲೂ ಆರ್ಯವೀರ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯ 70 ರನ್ ಗಳಿಸಿದ್ದರು. ಇದೀಗ ಯುಎಇ ವಿರುದ್ಧ ಶತಕ ಸಿಡಿಸುವ ಮೂಲಕ ಸತತ ಎರಡನೇ ಪಂದ್ಯದಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಟೂರ್ನಿಯ ಮುಂದಿನ ಪಂದ್ಯಗಳಲ್ಲೂ ಆರ್ಯವೀರ್ ಇದೇ ರೀತಿಯ ಪ್ರದರ್ಶನ ಮುಂದುವರಿಸುತ್ತಾರೆಯೇ ಎಂಬ ಕುತೂಹಲ ಮೂಡಿದೆ. ಭಾರತದ ಯುವ ತಂಡದ ಪರ ಅವರ ಬ್ಯಾಟಿಂಗ್ ಪ್ರದರ್ಶನ ಮುಂದಿನ ಹಂತದಲ್ಲಿ ನಿರ್ಣಾಯಕವಾಗುವ ಸಾಧ್ಯತೆಯಿದೆ.
ಯುಎಇ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಆರ್ಯವೀರ್ ಸೆಹ್ವಾಗ್, 168 ಎಸೆತಗಳನ್ನು ಎದುರಿಸಿ 17 ಬೌಂಡರಿ ಹಾಗೂ 7 ಮುಗಿಲೆತ್ತರದ ಸಿಕ್ಸರ್ಗಳ ನೆರವಿನಿಂದ 160 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ವಿ.ಕೆ ವಿನೀತ್ 69 ಎಸೆತಗಳಲ್ಲಿ 67 ರನ್ ಬಾರಿಸುವ ಮೂಲಕ ಉತ್ತಮ ಸಾಥ್ ನೀಡಿದರು. ಸದ್ಯ 47 ಓವರ್ ಅಂತ್ಯದ ವೇಳೆಗೆ ಭಾರತ ಅಂಡರ್ 19 ತಂಡವು 4 ವಿಕೆಟ್ ಕಳೆದುಕೊಂಡು 283 ರನ್ ಸಿಡಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ.
ನೇಪಾಳ ವಿರುದ್ದ ಭರ್ಜರಿ ಜಯ ಸಾಧಿಸಿದ್ದ ಭಾರತ ತಂಡವು, ಕಳೆದ ಪಂದ್ಯದಲ್ಲಿ ಪಾಕಿಸ್ತಾನ ಅಂಡರ್-19 ತಂಡದ ವಿರುದ್ಧ ಸೋಲು ಕಂಡಿದ್ದು, ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಮಹತ್ವದ್ದಾಗಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಮೊದಲ ಇನಿಂಗ್ಸ್ನಲ್ಲಿ 208 ರನ್ ಗಳಿಸಿತ್ತು. ಆದರೆ, ಗುರಿ ಬೆನ್ನಟ್ಟಿದ ಪಾಕಿಸ್ತಾನ ಮೂರು ವಿಕೆಟ್ಗಳ ಅಂತರದಲ್ಲಿ ಗೆಲುವು ದಾಖಲಿಸಿತ್ತು. ಈ ಸೋಲಿನೊಂದಿಗೆ ಟೂರ್ನಿಯಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಭಾರತ ಒಂದು ಗೆಲುವು ಮತ್ತು ಒಂದು ಸೋಲು ಕಂಡಿದೆ.
ಯುಎಇ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಮತ್ತೆ ಗೆಲುವಿನ ಹಾದಿಗೆ ಮರಳುವುದು ಭಾರತದ ಗುರಿಯಾಗಿದೆ. ಸದ್ಯ ಭಾರತ ಅಂಡರ್-19 ತಂಡ ತನ್ನ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಯುಎಇ ವಿರುದ್ಧ ಗೆಲುವು ಸಾಧಿಸಿದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಭಾರತಕ್ಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.