ಧೋನಿಯಿಂದ ಕೊಹ್ಲಿ: ಮೊದಲ ಸಂಬಳವೆಷ್ಟು? ಈಗಿನ ಸಂಬಳವೆಷ್ಟು?

By Suvarna NewsFirst Published May 2, 2020, 9:42 AM IST
Highlights

ಐಪಿಎಲ್ ಯಶಸ್ವಿ ನಾಯಕರಾದ ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿಯ ಆರಂಭಿಕ ಸಂಬಳ ಎಷ್ಟಿತ್ತು? ಈಗ ಎಷ್ಟಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

ನವದೆಹಲಿ(ಮೇ.02): ಐಪಿಎಲ್‌ನಲ್ಲಿ ಅತಿ ಹೆಚ್ಚು ಮೊತ್ತ ಗಳಿಸುವವರ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿರುವ ಕೊಹ್ಲಿ 17 ಕೋಟಿ ರುಪಾಯಿ ಪಡೆಯಲಿದ್ದಾರೆ.

ವಿರಾಟ್ ಕೊಹ್ಲಿ:

ಐಪಿಎಲ್ ಆರಂಭವಾದಾಗಿನಿಂದ ಆರ್‌ಸಿಬಿ ತಂಡವನ್ನು ವಿರಾಟ್ ಕೊಹ್ಲಿ ಪ್ರತಿನಿಧಿಸುತ್ತಿದ್ದಾರೆ. ಐಪಿಎಲ್‌ನ ಎಲ್ಲಾ ಆವೃತ್ತಿಗಳಲ್ಲೂ ಒಂದೇ ಫ್ರಾಂಚೈಸಿಯನ್ನು ಪರ ಆಡಿದ ಏಕೈಕ ಆಟಗಾರ ಎನ್ನುವ ದಾಖಲೆಯೂ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ವಿರಾಟ್ ಕೊಹ್ಲಿ 2008ರಲ್ಲಿ ಕೇವಲ 12 ಲಕ್ಷ ರುಪಾಯಿಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿದ್ದರು. 2013ರಿಂದ ಆರ್‌ಸಿಬಿ ನಾಯಕರಾಗಿ ಕೊಹ್ಲಿ ಮುಂದುವರೆದಿದ್ದಾರೆ. ಆದರೆ ಕಪ್‌ ಮಾತ್ರ ಗೆಲ್ಲಲು ಸಾಧ್ಯವಾಗಲಿಲ್ಲ.

13ನೇ ಆವೃತ್ತಿಗೂ ಮುನ್ನ ನಡೆದ ಆಟಗಾರರ ಹರಾಜಿನಲ್ಲಿ ಕೋಲ್ಕತಾ ನೈಟ್‌ ರೈಡ​ರ್ಸ್ ತಂಡ ಸೇರ್ಪಡೆಯಾಗಿರುವ ಆಸೀಸ್‌ ವೇಗಿ ಪ್ಯಾಟ್‌ ಕಮಿನ್ಸ್‌ 15.5 ಕೋಟಿ ರುಪಾಯಿ ಪಡೆಯುವ ಮೂಲಕ 2ನೇ ಸ್ಥಾನ ಪಡೆದಿದ್ದಾರೆ. 

ರೋಹಿತ್  ಶರ್ಮಾ: 

ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರನ್ನು 2008ರಲ್ಲಿ ಡೆಕ್ಕನ್ ಚಾರ್ಜಸ್ ತಂಡವು 3 ಕೋಟಿ ನೀಡಿ ಖರೀದಿಸಿತ್ತು. ಐಪಿಎಲ್‌ನಲ್ಲಿ 13 ಪಂದ್ಯಗಳನ್ನಾಡಿ 404 ರನ್ ಬಾರಿಸಿದ್ದರು. ಇನ್ನು 2009ರಲ್ಲಿ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾದರೂ, ಬೌಲಿಂಗ್‌ನಲ್ಲಿ 11 ವಿಕೆಟ್ ಕಬಳಿಸಿದ್ದರು.
ಇನ್ನು 2011ರ ಆಟಗಾರರ ಹರಾಜಿನಲ್ಲಿ ರೋಹಿತ್ ಅವರನ್ನು 9.2 ಕೋಟಿ ರುಪಾಯಿ ನೀಡಿ ಮುಂಬೈ ಇಂಡಿಯನ್ಸ್ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದರು. 2013ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪೂರ್ಣಕಾಲಿಕ ನಾಯಕರಾದ ರೋಹಿತ್ 4 ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದು ಸದ್ಯ 15 ಕೋಟಿ ರುಪಾಯಿ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ.

ಮಹೇಂದ್ರ ಸಿಂಗ್ ಧೋನಿ:

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ಫ್ರಾಂಚೈಸಿಯು 6 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದಿದ್ದರು. ಧೋನಿ ಸಿಎಸ್‌ಕೆ ತಂಡವನ್ನು ಮೂರು ಬಾರಿ ಚಾಂಪಿಯನ್‌ ಪಟ್ಟಕ್ಕೇರಿಸಿದ್ದಾರೆ. ಇದೀಗ ಧೋನಿ ಕೂಡಾ 15 ಕೋಟಿ ರುಪಾಯಿಗಳನ್ನು  ಪಡೆಯುತ್ತಿದ್ದಾರೆ.
 

click me!