ಇಲ್ಲಿನ ನ್ಯೂ ವಾಂಡರರ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಏಯ್ಡನ್ ಮಾರ್ಕ್‌ರಮ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಎರಡನೇ ಓವರ್‌ನಲ್ಲೇ ಹರಿಣಗಳ ಪಡೆಗೆ ಶಾಕ್ ನೀಡುವಲ್ಲಿ ಆರ್ಶದೀಪ್ ಸಿಂಗ್ ಯಶಸ್ವಿಯಾದರು.
ಜೋಹಾನ್ಸ್‌ಬರ್ಗ್(ಡಿ.12): ಎಡಗೈ ವೇಗಿ ಆರ್ಶದೀಪ್ ಸಿಂಗ್ ಹಾಗೂ ಆವೇಶ್ ಖಾನ್ ಮಾರಕ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡವು ಮೊದಲ ಏಕದಿನ ಪಂದ್ಯದಲ್ಲಿ ಕೇವಲ 116 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಕೆ ಎಲ್ ರಾಹುಲ್ ನೇತೃತ್ವದ ಟೀಂ ಇಂಡಿಯಾ ಗೆಲ್ಲಲು ಸಾಧಾರಣ ಗುರಿ ಪಡೆದಿದೆ. ಆರ್ಶದೀಪ್ ಸಿಂಗ್ ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಬಾರಿಗೆ 5 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
ಇಲ್ಲಿನ ನ್ಯೂ ವಾಂಡರರ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಏಯ್ಡನ್ ಮಾರ್ಕ್‌ರಮ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಎರಡನೇ ಓವರ್‌ನಲ್ಲೇ ಹರಿಣಗಳ ಪಡೆಗೆ ಶಾಕ್ ನೀಡುವಲ್ಲಿ ಆರ್ಶದೀಪ್ ಸಿಂಗ್ ಯಶಸ್ವಿಯಾದರು. ರೀಜಾ ಹೆಂಡ್ರಿಕ್ಸ್ ಖಾತೆ ತೆರೆಯುವ ಮುನ್ನವೇ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಇದರ ಬೆನ್ನಲ್ಲೇ ಮರು ಎಸೆತದಲ್ಲೇ ವಾನ್ ಡರ್ ಡುಸೇನ್ ಅವರನ್ನು ಎಲ್‌ಬಿ ಬಲೆಗೆ ಕೆಡಹುವಲ್ಲಿ ಆರ್ಶದೀಪ್ ಸಿಂಗ್ ಯಶಸ್ವಿಯಾದರು. ದಕ್ಷಿಣ ಆಫ್ರಿಕಾ 3 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿ ಹೋಯಿತು.
undefined
ಇದಾದ ಬಳಿಕ ಮೂರನೇ ವಿಕೆಟ್‌ಗೆ ಟೋನಿ ಡೆ ಜೋರ್ಜಿ ಹಾಗೂ ಏಯ್ಡನ್ ಮಾರ್ಕ್‌ರಮ್ ತಂಡಕ್ಕೆ ಕೊಂಚ ಆಸರೆಯಾಗುವ ಯತ್ನ ನಡೆಸಿದರು. ಕೇವಲ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 28 ರನ್ ಬಾರಿಸಿದ್ದ ಟೋನಿಯನ್ನು ಬಲಿ ಪಡೆಯುವಲ್ಲಿ ಆರ್ಶದೀಪ್ ಯಶಸ್ವಿಯಾದರು. ಇದಾದ ಬಳಿಕ ಹರಿಣಗಳ ಪಡೆ ಮತ್ತೊಮ್ಮೆ ನಾಟಕೀಯ ಕುಸಿತ ಕಂಡಿತು. ಮಾರ್ಕ್‌ರಮ್ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ವಿಕೆಟ್ ಕೀಪರ್ ಬ್ಯಾಟರ್ ಕ್ಲಾಸೇನ್ ಬ್ಯಾಟಿಂಗ್ 6 ರನ್‌ಗೆ ಸೀಮಿತವಾಯಿತು. ಡೇವಿಡ್ ಮಿಲ್ಲರ್ 2 ರನ್ ಗಳಿಸಿದರೆ, ಮುಲ್ಡರ್ ಶೂನ್ಯ ಸುತ್ತಿ ಪೆಲಿಯನ್ ಹಾದಿ ಹಿಡಿದರು.
ಒಂದು ಹಂತದಲ್ಲಿ 58 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾಗೆ ಆಂಡಿಲೆ ಫೆಲುಕ್ವಾಯೋ ಸಮಯೋಚಿತ 33 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಇನ್ನು ತಬ್ರೀಜ್ ಶಮ್ಸಿ 11 ರನ್ ಗಳಿಸಿ ಅಜೇಯರಾಗುಳಿದರು.
ಆರ್ಶದೀಪ್‌ಗೆ 5 ವಿಕೆಟ್ ಗೊಂಚಲು: ಆರಂಭದಿಂದಲೇ ಮಾರಕ ದಾಳಿ ನಡೆಸಿದ ಆರ್ಶದೀಪ್ ಸಿಂಗ್, ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಬಾರಿಗೆ 5 ವಿಕೆಟ್ ಗೊಂಚಲು ಪಡೆಯಲು ಯಶಸ್ವಿಯಾದರು. ಆರ್ಶದೀಪ್ ಸಿಂಗ್ 37 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ತಮ್ಮ ಚೊಚ್ಚಲ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಇನ್ನು ಮತ್ತೊಂದು ತುದಿಯಲ್ಲಿ ಚುರುಕಿನ ದಾಳಿ ನಡೆಸಿದ ಆವೇಶ್ ಖಾನ್ 27 ರನ್ ನೀಡಿ 4 ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ ಒಂದು ವಿಕೆಟ್ ಕಬಳಿಸಿ ಹರಿಣಗಳ ಇನಿಂಗ್ಸ್‌ಗೆ ಮಂಗಳ ಹಾಡಿದರು.