
ವಡೋದರ(ಅ.09): ಭಾರತ ತಂಡದ ಮಹಿಳಾ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡ ಕೇವಲ 164 ರನ್ ಗಳಿಸಿ ಆಲೌಟ್ ಆಗಿದೆ. ಅನುಭವಿ ವೇಗಿ ಜೂಲನ್ ಗೋಸ್ವಾಮಿ ಮೂರು ವಿಕೆಟ್ ಪಡೆದು ಗಮನ ಸೆಳೆದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ಜೂಲನ್ ಗೋಸ್ವಾಮಿ ಮೊದಲ ಓವರ್’ನ ಮೊದಲ ಎಸೆತದಲ್ಲೇ ಆಘಾತ ನೀಡಿದರು. ಆರಂಭಿಕ ಆಟಗಾರ್ತಿ ಲಿಜೆಲ್ಲೇ ಲೀ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಲೌರಾ ವೋಲ್ವರ್ತ್ 39 ರನ್ ಬಾರಿಸಿದರು. ಇನ್ನು ತ್ರಿಶಾ ಚೆಟ್ಟಿ ಹಾಗೂ ಮಿಗಾನ್ ಡು ಪ್ರೇಜ್ ಏಕ್ತಾ ಬಿಶ್ತ್ ಬೌಲಿಂಗ್’ನಲ್ಲಿ ಸ್ಟಂಪ್ ಔಟ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಮ್ಯಾರಿಜ್ಯಾನ್ ಕೆಪ್ 54 ರನ್ ಬಾರಿಸಿ ಜೂಲನ್ ಗೋಸ್ವಾಮಿಗೆ ಮೂರನೇ ಬಲಿಯಾದರು.
ಭಾರತದ ಪರ ಜೂಲನ್ ಗೋಸ್ವಾಮಿ 3 ವಿಕೆಟ್ ಪಡೆದರೆ, ಶಿಖಾ ಪಾಂಡೆ, ಏಕ್ತಾ ಬಿಶ್ತ್ ಹಾಗೂ ಪೂನಂ ಯಾಧವ್ ತಲಾ 2 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ ಒಂದು ವಿಕೆಟ್ ಪಡೆದರು.
ಪ್ರಿಯಾ ಪೂನಿಯಾ ಪದಾರ್ಪಣೆ: ರಾಜಸ್ಥಾನ ಮೂಲದ 23 ವರ್ಷದ ಪ್ರಿಯಾ ಪೂನಿಯಾ ಭಾರತ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಭಾರತೀಯ ಆಟಗಾರ್ತಿಯರು ಕ್ಯಾಪ್ ನೀಡುವ ಮೂಲಕ ತಂಡಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.
ಏಕದಿನ ಸರಣಿಯಿಂದ ಹೊರಬಿದ್ದ ಮಂಧನಾ!
ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ, ಸ್ಮೃತಿ ಮಂಧನಾ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ. ಪೂರ್ವಭಾವಿ ಅಭ್ಯಾಸ ನಡೆಸುವ ವೇಳೆಯಲ್ಲಿ ಮಂಧನಾ, ಮೊಣಕಾಲಿನ ಗಾಯಕ್ಕೆ ತುತ್ತಾದರು. ಈ ವೇಳೆ ಸ್ಮೃತಿ ಅವರನ್ನು ಪರೀಕ್ಷಿಸಿದ ಬಿಸಿಸಿಐ ವೈದ್ಯರ ತಂಡ ಗಂಭೀರ ಗಾಯವೆಂದು ಪರಿಗಣಿಸಿ ಸ್ಮೃತಿ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಸಲಹೆ ನೀಡಿದೆ.
ಸ್ಮೃತಿ ಬದಲಿಗೆ ಆಲ್ರೌಂಡರ್ ಪೂಜಾ ವಸ್ತ್ರಾಕರ್ ತಂಡ ಕೂಡಿಕೊಂಡಿದ್ದಾರೆ. ಸ್ಮೃತಿ ವಿಂಡೀಸ್ ವಿರುದ್ಧದ ಮುಂದಿನ ಸರಣಿಗೆ ಭಾರತ ತಂಡಕ್ಕೆ ಮರಳುವುದು ಅನುಮಾನ ಮೂಡಿಸಿದೆ. ಅ.11 ಹಾಗೂ 14ರಂದು ಇನ್ನುಳಿದ 2 ಪಂದ್ಯಗಳು ನಡೆಯಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.