1000th ODI: ಟೀಂ ಇಂಡಿಯಾಗೆ ಸಾಧಾರಣ ಗುರಿ ನೀಡಿದ ವೆಸ್ಟ್ ಇಂಡೀಸ್‌

By Suvarna News  |  First Published Feb 6, 2022, 4:53 PM IST

* ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು 176 ರನ್‌ಗಳಿಗೆ ಆಲೌಟ್

* 1000ನೆಯ ಏಕದಿನ ಪಂದ್ಯ ಗೆಲ್ಲಲು ಟೀಂ ಇಂಡಿಯಾಗೆ ಸಾಧಾರಣ ಗುರಿ

* 4 ವಿಕೆಟ್ ಕಬಳಿಸ ಮಿಂಚಿದ ಯುಜುವೇಂದ್ರ ಚಹಲ್


ಅಹಮದಾಬಾದ್‌(ಫೆ.06): ಟೀಂ ಇಂಡಿಯಾ ಸ್ಪಿನ್ ಅಸ್ತ್ರಗಳಾದ ಯುಜುವೇಂದ್ರ ಚಹಲ್‌, ವಾಷಿಂಗ್ಟನ್ ಸುಂದರ್‌ ಮಾರಕ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ತಂಡವು ಮೊದಲ ಏಕದಿನ ಪಂದ್ಯಗಳಲ್ಲಿ ಕೇವಲ 176 ರನ್‌ಗಳಿಗೆ ಸರ್ವಪತನ ಕಂಡಿದೆ. ಇದರೊಂದಿಗೆ ಭಾರತದ 1000ನೆಯ ಏಕದಿನ ಪಂದ್ಯವನ್ನು ಗೆಲ್ಲಲು ಸಾಧಾರಣ ಗುರಿ ಸಿಕ್ಕಿದೆ. ಭಾರತ ಪರ ಯುಜುವೇಂದ್ರ ಚಹಲ್ 4‌, ವಾಷಿಂಗ್ಟನ್ ಸುಂದರ್ 3, ಪ್ರಸಿದ್ದ್ ಕೃಷ್ಣ 2 ಹಾಗೂ ಮೊಹಮ್ಮದ್ ಸಿರಾಜ್ ಒಂದು ವಿಕೆಟ್‌ ಪಡೆದರು

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡುವಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಯಶಸ್ವಿಯಾದರು. ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭದಲ್ಲೇ ವೇಗಿ ಮೊಹಮ್ಮದ್ ಸಿರಾಜ್‌ ಶಾಕ್ ನೀಡಿದರು. ಶಾಯ್ ಹೋಪ್ 2 ಬೌಂಡರಿ ಬಾರಿಸಿ ಸಿರಾಜ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಬ್ರೆಂಡನ್ ಕಿಂಗ್ ಹಾಗೂ ಡ್ಯಾರನ್ ಬ್ರಾವೊ 31 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಇಬ್ಬರು ಬ್ಯಾಟರ್‌ಗಳನ್ನು ಪೆವಿಲಿಯನ್ನಿಗಟ್ಟುವಲ್ಲಿ ಆಫ್‌ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಯಶಸ್ವಿಯಾದರು. ಒಂದೇ ಓವರ್‌ನಲ್ಲಿ ಬ್ರೆಂಡನ್‌ ಕಿಂಗ್(13) ಹಾಗೂ ಡ್ಯಾರನ್ ಬ್ರಾವೋ(18) ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ವಾಷಿಂಗ್ಟನ್ ಸುಂದರ್ ಯಶಸ್ವಿಯಾದರು.

Tap to resize

Latest Videos

ಕೈಕೊಟ್ಟ ಮಧ್ಯಮ ಕ್ರಮಾಂಕ: ಒಂದು ಹಂತದಲ್ಲಿ 45 ರನ್‌ಗಳಿಗೆ 3  ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪೂರನ್(18) ಕೆಲಕಾಲ ಪ್ರತಿರೋಧ ತೋರುವ ಯತ್ನ ನಡೆಸಿದರಾದರೂ, ದೊಡ್ಡ ಮೊತ್ತ ಕಲೆಹಾಕಲು ಯಶಸ್ವಿಯಾದರು. ಸಮರ್ಥ್‌ ಬ್ರೂಕ್ಸ್, ನಿಕೋಲಸ್ ಪೂರನ್ ಹಾಗೂ ಅಕೆಲ್ ಹುಸೈನ್ ಜವಾಬ್ದಾರಿಯುತ ಪ್ರದರ್ಶನ ತೋರದೇ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ವೆಸ್ಟ್ ಇಂಡೀಸ್ ತಂಡವು ಕೇವಲ 8 ರನ್‌ಗಳ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಿತು. ಲೆಗ್‌ ಸ್ಪಿನ್ನರ್ ಯುಜುವೇಂದ್ರ ಚಹಲ್ ಒಂದೇ ಓವರ್‌ನಲ್ಲಿ ನಿಕೋಲಸ್ ಪೂರನ್ ಹಾಗೂ ವಿಂಡೀಸ್ ನಾಯಕ ಕೀರನ್ ಪೊಲ್ಲಾರ್ಡ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು.

West Indies are all out for 176 ☝️

Yuzvendra Chahal stars with the ball in hand, picking up four wickets 🕸️

Will India chase this target down? 🤔 | https://t.co/Bf4Z5gloXl pic.twitter.com/jwa5xfxBr4

— ICC (@ICC)

ತಂಡವನ್ನು ಶತಕದ ಗಡಿ ದಾಟಿಸಿದ ಹೋಲ್ಡರ್‌-ಅಲೆನ್: ಒಂದು ಹಂತದಲ್ಲಿ ಕೇವಲ 79 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಮೂರಂಕಿ ಮೊತ್ತಕ್ಕೂ ಮೊದಲೇ ಕುಸಿಯುವ ಭೀತಿಗೆ ಸಿಲುಕಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ 8ನೇ ವಿಕೆಟ್‌ಗೆ ಆಲ್ರೌಂಡರ್‌ಗಳಾದ ಜೇಸನ್ ಹೋಲ್ಡರ್ ಹಾಗೂ ಫ್ಯಾಬಿನ್ ಅಲೆನ್ ಉಪಯುಕ್ತ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. 8ನೇ ವಿಕೆಟ್‌ಗೆ ಈ ಜೋಡಿ 91 ಎಸೆತಗಳನ್ನು ಎದುರಿಸಿ 78 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಕೊನೆಗೂ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ವಾಷಿಂಗ್ಟನ್ ಸುಂದರ್ ಯಶಸ್ವಿಯಾದರು. ಫ್ಯಾಬಿನ್ ಅಲೆನ್ 29 ರನ್‌ ಬಾರಿಸಿ ಸುಂದರ್‌ಗೆ ವಿಕೆಟ್‌ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಜೇಸನ್ ಹೋಲ್ಡರ್ 58 ಎಸೆತಗಳನ್ನು ಎದುರಿಸಿದ ವೃತ್ತಿಜೀವನದ 11ನೇ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಜೇಸನ್ ಹೋಲ್ಡರ್ 57 ರನ್‌ ಬಾರಿಸಿ ಪ್ರಸಿದ್ದ್ ಕೃಷ್ಣಗೆ ಎರಡನೇ ಬಲಿಯಾದರು


ಸಂಕ್ಷಿಪ್ತ ಸ್ಕೋರ್

ವೆಸ್ಟ್ ಇಂಡೀಸ್‌:176/10(43.5 ಓವರ್)
ಜೇಸನ್ ಹೋಲ್ಡರ್: 57
ಯುಜುವೇಂದ್ರ ಚಹಲ್: 49/4

(* ವೆಸ್ಟ್ ಇಂಡೀಸ್ ಇನಿಂಗ್ಸ್ ಮುಕ್ತಾಯದ ವೇಳೆಗೆ)
 

click me!