ಕೊರೋನಾ ಉತ್ತುಂಗಕ್ಕೇರಿದ ಬಳಿಕ ಇಷ್ಟು ಕಡಿಮೆ ಸಾವು ಯಾವತ್ತೂ ಆಗಿರಲಿಲ್ಲ, ಬೆಂಗಳೂರಲ್ಲಿ ಒಂದೂವರೆ ತಿಂಗಳಲ್ಲಿ ಕೋವಿಡ್‌ಗೆ ಒಬ್ಬರೂ ಬಲಿಯಾಗಿಲ್ಲ, ಚೀನಾದಲ್ಲಿ ಕೋವಿಡ್ ಸ್ಫೋಟ ಆಗುತ್ತಿದ್ದರೂ ರಾಜ್ಯ ಈವರೆಗೆ ಸುರಕ್ಷಿತ
ರಾಕೇಶ್ ಎನ್.ಎಸ್.
ಬೆಂಗಳೂರು(ಡಿ.02): ಕೊರೋನಾ ಸೋಂಕಿನ ತವರೂರು ಚೀನಾದಲ್ಲಿ ಮತ್ತೆ ಕೋವಿಡ್ ಮಹಾಸ್ಪೋಟ ನಡೆದಿದ್ದರೂ ಸದ್ಯದ ಮಟ್ಟಿಗೆ ರಾಜ್ಯ ಸುರಕ್ಷಿತವಾಗಿದೆ. ನವೆಂಬರ್ ತಿಂಗಳಿನಲ್ಲಿ ಸೋಂಕಿತರ ನಾಲ್ಕೇ ನಾಲ್ಕು ಸಾವು ಸಂಭವಿಸಿದ್ದು ಕೋವಿಡ್ ರಾಜ್ಯ ವ್ಯಾಪಿ ಹಬ್ಬಿದ ಬಳಿಕ ತಿಂಗಳೊಂದರಲ್ಲಿ ವರದಿಯಾದ ಕನಿಷ್ಠ ಸಾವಿನ ಪ್ರಮಾಣ ಇದಾಗಿದೆ. ಹಾಗೆಯೇ ರಾಜ್ಯದ ಕೋವಿಡ್ ರಾಜಧಾನಿಯಾಗಿ ಬದಲಾಗಿದ್ದ ಬೆಂಗಳೂರು ನಗರದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಸೋಂಕಿತರ ಸಾವು ಘಟಿಸಿಲ್ಲ.
undefined
2020ರ ಮಾರ್ಚ್ 8ಕ್ಕೆ ರಾಜ್ಯದಲ್ಲಿ ಮೊದಲ ಕೋವಿಡ್ ಪ್ರಕರಣ ದೃಢಪಟ್ಟಿತ್ತು. ಮಾರ್ಚ್ 12ಕ್ಕೆ ಕಲಬುರಗಿಯ ವೃದ್ಧರೊಬ್ಬರು ಸೋಂಕು ಉಲ್ಬಣಿಸಿ ಮೃತಪಟ್ಟಿದ್ದು ದೇಶದಲ್ಲೇ ಮೊದಲ ಕೋವಿಡ್ ಸಾವಾಗಿತ್ತು. ಆ ತಿಂಗಳಲ್ಲಿ ಮೂವರು ಸಾವನ್ನಪ್ಪಿದ್ದರು. ಸೋಂಕು ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಪ್ರತಿ ತಿಂಗಳು ಸಾವಿರಗಟ್ಟಲೆ ಜನ ಮೃತರಾಗಿದ್ದರು. ಆದರೆ ಇತ್ತಿಚಿನ ದಿನಗಳಲ್ಲಿ ಕೊರೋನಾ ವೈರಾಣು ವಿವಿಧ ರೂಪಾಂತರ ಹೊಂದುತ್ತಿದ್ದರೂ ಸೋಂಕಿತರಿಗೆ ಅಪಾಯಕಾರಿಯಾಗಿ ಪರಿಣಮಿಸಿಲ್ಲ ಎಂಬುದನ್ನು ಅಂಕಿ-ಅಂಶಗಳು ಪುಷ್ಟಿಕರಿಸಿವೆ.
ಕರ್ನಾಟಕದಲ್ಲಿ 38 ಜನರಿಗೆ ಕೋವಿಡ್, ಸಾವು ಇಲ್ಲ
ಸಾವು ಏರಿತ್ತು:
ಕಳೆದ ಏಪ್ರಿಲ್ ತಿಂಗಳಿನಲ್ಲಿ 2,108 ಪ್ರಕರಣಗಳು ಪತ್ತೆಯಾಗಿ ಐವರು ಮೃತಪಟ್ಟಿದ್ದರು. ಆದರೆ ಆ ಬಳಿಕದ ತಿಂಗಳಲ್ಲಿ ಮೃತರು ಮತ್ತು ಸೋಂಕಿತರ ಸಂಖ್ಯೆ ಏರುತ್ತ ಸಾಗಿತ್ತು. ಮೇ ತಿಂಗಳಿನಲ್ಲಿ ಆರು ಮಂದಿ ಅಸುನೀಗಿದ್ದು 4,480 ಪ್ರಕರಣ ಪತ್ತೆಯಾಗಿತ್ತು. ಜೂನ್‌ನಲ್ಲಿ ಹತ್ತು ಸಾವು, 17,309 ಪ್ರಕರಣ, ಜುಲೈಯಲ್ಲಿ 29 ಸಾವು, 37,952 ಪ್ರಕರಣ, ಆಗಸ್ಟ್‌ನಲ್ಲಿ ಬರೋಬ್ಬರಿ 97 ಸಾವು, 44,191 ಪ್ರಕರಣ ದಾಖಲಾಗಿತ್ತು.
ಆಗಸ್ಟ್ ನಂತರ ಇಳಿಕೆ:
ಇದಾದ ಬಳಿಕ ಕಳೆದ ಮೂರು ತಿಂಗಳಿನಿಂದ ಕೋವಿಡ್ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆಯಲ್ಲಿ ನಿರಂತರ ಇಳಿಕೆ ಕಂಡುಬಂದಿದೆ. ಸೆಪ್ಟೆಂಬರ್‌ನಲ್ಲಿ 41 ಸಾವು, 13,271 ಪ್ರಕರಣ, ಅಕ್ಟೋಬರ್‌ನಲ್ಲಿ 14 ಸಾವು ಮತ್ತು 4,085 ಪ್ರಕರಣ ವರದಿಯಾಗಿತ್ತು. ಇದೀಗ ನವೆಂಬರ್‌ನಲ್ಲಿ ಅತ್ಯಂತ ಕಡಿಮೆ ಸಾವು ವರದಿಯಾಗಿದ್ದು 2,542 ಪ್ರಕರಣ ಪತ್ತೆಯಾಗಿದೆ. ಒಟ್ಟಾರೆ ರಾಜ್ಯದ ಮರಣ ದರ ಶೇ. 0.15ಕ್ಕೆ ಕುಸಿದಿದೆ.
ಚೀನಾದ ಪ್ರಮುಖ ಉತ್ಪಾದನಾ ಕೇಂದ್ರದಲ್ಲಿ ಲಾಕ್ ಡೌನ್; ಜಾಗತಿಕ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ
ಬೆಂಗಳೂರಲ್ಲಿ ಶೂನ್ಯ ಸಾವು:
ಈ ಮಧ್ಯೆ ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಕೋವಿಡ್ ಸಾವು ನೋವು ಮತ್ತು ಪ್ರಕರಣ ಕಂಡಿದ್ದ ಬೆಂಗಳೂರಿನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಸೋಂಕಿತರ ಸಾವು ವರದಿಯಾಗಿಲ್ಲ. ಅಕ್ಟೋಬರ್ 13ರ ಕೋವಿಡ್ ದೈನಂದಿನ ವರದಿಯಲ್ಲಿ ಅಕ್ಟೋಬರ್ 9ಕ್ಕೆ ಸೋಂಕಿನಿಂದ ಮೃತಪಟ್ಟಿದ್ದ 65 ವರ್ಷದ ಹಿರಿಯ ನಾಗರಿಕರ ಪ್ರಕರಣವನ್ನು ಉಲ್ಲೇಖಿಸಲಾಗಿತ್ತು. ಇದೇ ವರದಿಯಲ್ಲಿ ಸೆಪ್ಟೆಂಬರ್ 28ಕ್ಕೆ ಮೃತರಾದ ಸಹ ಅಸ್ವಸ್ಥತೆ ಹೊಂದಿದ್ದ 66 ವರ್ಷದ ಮಹಿಳೆಯ ಪ್ರಕರಣವನ್ನು ಪ್ರಸ್ತಾಪಿಸಲಾಗಿತ್ತು. ಅಂದರೆ ಕಳೆದ ಎರಡು ತಿಂಗಳಿನಲ್ಲಿ ನಗರದಲ್ಲಿ ಏಕಮಾತ್ರ ಕೋವಿಡ್ ಸೋಂಕಿತನ ಸಾವು ಸಂಭವಿಸಿದೆ.
ಚೀನಾ ಕೋವಿಡ್ ಮೇಲೆ ಕಣ್ಣಿಡಬೇಕು: ಸುದರ್ಶನ್
ಪ್ರಸಕ್ತ ಕೋವಿಡ್ ಸ್ಥಿತಿಗತಿಯ ಬಗ್ಗೆ ರಾಜ್ಯದ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಎಂ. ಕೆ. ಸುದರ್ಶನ್ ಮಾತನಾಡಿ, ಚೀನಾದಲ್ಲಿ ಮತ್ತೆ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಆಗಿದೆ. ಆದ್ದರಿಂದ ವಿಮಾನ ಪ್ರಯಾಣಿಕರ ಮೇಲೆ ನಿಗಾ ಇಟ್ಟರೆ ಒಳ್ಳೆಯದು. ಆದರೆ ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ನಾಗರಿಕ ವಿಮಾನ ಯಾನ ಸಚಿವಾಲಯವೇ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಅವರು ಮಾರ್ಗದರ್ಶಿ ಬಿಡುಗಡೆ ಮಾಡಿ ರಾಜ್ಯಗಳಿಗೆ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳುವ ಅವಕಾಶ ನೀಡಿದ್ದರು. ಆ ಹಿನ್ನೆಲೆಯಲ್ಲಿ ನಾವು ಅನೇಕ ಕ್ರಮ ಕೈಗೊಂಡಿದ್ದೆವು. ಆದರೆ ಈಗ ಇದಕ್ಕೆ ಅವಕಾಶವಿಲ್ಲ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಈ ಬಗ್ಗೆ ಯಾವುದೇ ಶಿಫಾರಸು ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.