ಕೋವಿಡ್‌ ಸಿದ್ಧತೆ: ರಾಜ್ಯ ವ್ಯಾಪಿ ತಾಲೀಮು, ಸಚಿವ ಸುಧಾಕರ್‌

By Kannadaprabha News  |  First Published Dec 28, 2022, 11:00 AM IST

ಕೊರೋನಾ ಬಗ್ಗೆ ಸರ್ಕಾರ ಕಟ್ಟೆಚ್ಚರ ವಹಿಸಿದೆ, ಆರ್ಥಿಕ ಚಟುವಟಿಕೆಗೆ ನಿರ್ಬಂಧವಿಲ್ಲ, ಹುಬ್ಬಳ್ಳಿ ಕಿಮ್ಸ್‌ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಆರೋಗ್ಯ ಸಚಿವ ಕೆ. ಸುಧಾಕರ್‌ 


ಹುಬ್ಬಳ್ಳಿ/ಬೆಳಗಾವಿ(ಡಿ.28): ರೂಪಾಂತರಿ ಕೊರೋನಾ ತಳಿಯ ಬಗ್ಗೆ ರಾಜ್ಯ ಸರ್ಕಾರ ಕಟ್ಟೆಚ್ಚರ ವಹಿಸಿದ್ದು, ರಾಜ್ಯಾದ್ಯಂತ ಜಿಲ್ಲೆ, ತಾಲೂಕು ಆಸ್ಪತ್ರೆ, ಆರೋಗ್ಯ ಇಲಾಖೆಗೆ ಒಳಪಡುವ ಎಲ್ಲ ಆಸ್ಪತ್ರೆಗಳಲ್ಲಿ ಪೂರ್ವ ತಯಾರಿ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಈ ನಿಟ್ಟಿನಲ್ಲಿ  ರಾಜ್ಯವ್ಯಾಪಿ ‘ಮಾಕ್‌ ಡ್ರಿಲ್‌’ ನಡೆಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಜನರಿಗೆ ಸರ್ಕಾರದ ಮೇಲೆ ನÜಂಬಿಕೆ ಬರಬೇಕು. ಹೀಗಾಗಿ, ರಾಜ್ಯವ್ಯಾಪಿ ‘ಮಾಕ್‌ ಡ್ರಿಲ್‌’ ನಡೆಸಲಾಗುತ್ತಿದೆ. ಮಂಗಳವಾರ ರಾಜ್ಯಾದ್ಯಂತ ಆರೋಗ್ಯ ವ್ಯವಸ್ಥೆ ತಿಳಿದುಕೊಳ್ಳುವ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆ, ತಾಲೂಕು ಆಸ್ಪತ್ರೆಗಳಲ್ಲಿ ‘ಮಾಕ್‌ ಡ್ರಿಲ್‌’ ನಡೆಸಲಾಗಿದೆ. ಅದರಂತೆ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವೈದ್ಯರೊಂದಿಗೆ ಸಭೆ ನಡೆಸಿದ್ದೇನೆ. ಈಗಾಗಲೇ ಹುಬ್ಬಳ್ಳಿಯ ಕಿಮ್ಸ್‌, ಕೋವಿಡ್‌ ವೇಳೆ ಆರೋಗ್ಯ ಸಂಜೀವಿನಿ ಆಗಿ ಕೆಲಸ ಮಾಡಿದೆ. ಹೊಸ ಸೋಂಕು ಎದುರಿಸಲು ಕಿಮ್ಸ್‌ ಸರ್ವ ಸನ್ನದ್ಧವಾಗಿದೆ. ಕೋವಿಡ್‌ಗಾಗಿ ಪ್ರತ್ಯೇಕ 50-60 ಹಾಸಿಗೆ, 200 ವೆಂಟಿಲೇಟರ್‌ ವ್ಯವಸ್ಥೆ ಮಾಡಲಾಗಿದೆ. ಔಷಧಿ ದಾಸ್ತಾನು ಇದೆ. 40 ಕೆಎಲ್‌ ಸಾಮರ್ಥ್ಯದ ಆಕ್ಸಿಜನ್‌ ಪ್ಲಾಂಟ್‌ ಅಳವಡಿಕೆ ಮಾಡಲಾಗಿದೆ ಎಂದರು.

Tap to resize

Latest Videos

ವಿದೇಶದಿಂದ ಕರ್ನಾಟಕಕ್ಕೆ ಬಂದ 19 ಪ್ರಯಾಣಿಕರಿಗೆ ಕೋವಿಡ್‌..!

ಯಾವುದೇ ಕಠಿಣ ಸಂದರ್ಭ ಎದುರಾದರೂ ಅದನ್ನು ಎದುರಿಸಲು ಆರೋಗ್ಯ ಇಲಾಖೆ ಸಿದ್ಧವಾಗಿದೆ. ಆಯಾ ವಿಭಾಗದ ಆರೋಗ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಆಸ್ಪತ್ರೆಗಳಲ್ಲಿನ ಸಿದ್ಧತೆ ಕುರಿತು ಪರಿಶೀಲನೆ ನಡೆಸುತ್ತಾರೆ. ಎಲ್ಲ ಸಿದ್ಧತೆಗಳ ಬಗ್ಗೆ ಹಿರಿಯ ಅಧಿಕಾರಿಗಳು ನನಗೆ ವರದಿ ನೀಡುತ್ತಾರೆ. ಯಾರಾದರೂ ಸೋಂಕಿತರು ಬಂದರೆ ಅವರನ್ನು ಗುಣಪಡಿಸಲು ನಮ್ಮ ಸರ್ಕಾರ ಸರ್ವಸನ್ನದ್ಧವಾಗಿದೆ’ ಎಂದರು.

ಎರಡು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸುಮಾರು 10 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದ್ದೇವೆ. ಬರುವ ದಿನಗಳಲ್ಲಿ ಕೋವಿಡ್‌ ಸೋಂಕಿತರು ಹೆಚ್ಚಾದರೆ ತಾತ್ಕಾಲಿಕವಾಗಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು. ಆದರೆ, ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದರೆ ಅವರನ್ನು ಕಾಯಂ ಮಾಡಿಕೊಳ್ಳಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

Coronavirus: ಪ್ರಮುಖ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆ ಡ್ರಿಲ್‌

ಆರ್ಥಿಕ ನಿರ್ಬಂಧವಿಲ್ಲ:

ಕೋವಿಡ್‌ ಸೋಂಕು ನಿಯಂತ್ರಣದ ಹೆಸರಿನಲ್ಲಿ ರಾಜ್ಯದಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಹಾಗೂ ಯಾವುದೇ ಆರ್ಥಿಕ ಚಟುವಟಿಕೆಗೆ ನಿರ್ಬಂಧ ಹೇರುವ ವಿಚಾರ ಸರ್ಕಾರದ ಮುಂದಿಲ್ಲ. ಜೀವದ ಜತೆಗೆ, ಜೀವನವೂ ಮುಖ್ಯ. ಜೀವ ಉಳಿಸಿ, ನಿರ್ಬಂಧವಿಲ್ಲದೆ ಸುಗಮವಾಗಿ ಜೀವನ ನಡೆಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಈಗತಾನೆ ರಾಜ್ಯದಲ್ಲಿ ಆರ್ಥಿಕ ಪುನಶ್ಚೇತನವಾಗುತ್ತಿದೆ. ಈಗಾಗಲೇ ಎರಡು ವರ್ಷಗಳ ಕಾಲ ಕೋವಿಡ್‌ ಹಿನ್ನೆಲೆಯಲ್ಲಿ ಎಲ್ಲ ವೃತ್ತಿಗಳ ಜನರು ಆರ್ಥಿಕ ಸಂಕಷ್ಟಅನುಭವಿಸುತ್ತಿದ್ದಾರೆ. ಈಗ ಮತ್ತೆ ಅವರನ್ನು ಕಷ್ಟಕ್ಕೆ ದೂಡುವ ಆಲೋಚನೆ ಸರ್ಕಾರದ ಮುಂದಿಲ್ಲ. ಹಾವೇರಿಯಲ್ಲಾಗುವ ಸಾಹಿತ್ಯ ಸಮ್ಮೇಳನವಾಗಲಿ ಅಥವಾ ಧಾರವಾಡದಲ್ಲಾಗುವ ಯುವ ಸಮ್ಮೇಳನವಾಗಲಿ ರದ್ದಾಗುವುದಿಲ್ಲ. ಈ ವಿಷಯದಲ್ಲಿ ರಾಜ್ಯದ ಜನತೆಗೆ ಗೊಂದಲ ಬೇಡ ಎಂದರು.

ಹೊಸ ವರ್ಷದ ನೂತನ ಮಾರ್ಗಸೂಚಿಯನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ. ಕೇಂದ್ರ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಶೇ.2ರಷ್ಟುಪರೀಕ್ಷೆ ಮಾಡಲಾಗುತ್ತಿದೆ. ಏನಾದರೂ ಹೆಚ್ಚು ಪ್ರಕರಣಗಳು ಕಂಡು ಬಂದಲ್ಲಿ ಟೆಸ್ಟಿಂಗ್‌ ಹೆಚ್ಚಳ ಮಾಡಲಾಗುವುದು. ಟಫ್‌ ರೂಲ್ಸ್‌ಗಿಂತ ಜನರು ಟಫ್‌ ಮೈಂಡ್‌ ಸೆಟ್‌ ಮಾಡಿಕೊಳ್ಳಬೇಕು. ಜನಜಂಗುಳಿ ಪ್ರದೇಶದಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಗರ್ಭಿಣಿಯರು ಹಾಗೂ ಚಿಕ್ಕಮಕ್ಕಳು ಎಚ್ಚರದಿಂದ ಇರಬೇಕು. 3ನೇ ಡೋಸ್‌ ಲಸಿಕೆ ಪಡೆಯಬೇಕು. ಒಳಾಂಗಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.

click me!