Covid 19 Deaths: ವಿಶ್ವದಲ್ಲೇ ಭಾರತ ನಂ.3: 5 ಲಕ್ಷ ಗಡಿ ದಾಟಿದ ಕೊರೋನಾ ಸಾವು!

Published : Feb 05, 2022, 08:47 AM IST
Covid 19 Deaths: ವಿಶ್ವದಲ್ಲೇ ಭಾರತ ನಂ.3: 5 ಲಕ್ಷ ಗಡಿ ದಾಟಿದ ಕೊರೋನಾ ಸಾವು!

ಸಾರಾಂಶ

*ದೇಶದಲ್ಲಿ 5 ಲಕ್ಷ ಗಡಿ ದಾಟಿದ ಕೋವಿಡ್‌ ಸಾವು *ಮೊದಲ 2 ಸ್ಥಾನದಲ್ಲಿ ಅಮೆರಿಕ, ಬ್ರೆಜಿಲ್‌ *1.49 ಲಕ್ಷ ಹೊಸ ಕೇಸ್‌: 4 ವಾರದ ಕನಿಷ್ಠ *ನೋಡಲ್‌ ಅಧಿಕಾರಿ ನೇಮಕಕ್ಕೆ ಸುಪ್ರೀಂ ಸೂಚನೆ * ದೆಹಲಿ, ರಾಜಸ್ಥಾನದಲ್ಲಿ  ಶಾಲೆ ಆರಂಭ ಘೋಷಣೆ

ನವದೆಹಲಿ (ಫೆ. 05): ಭಾರತದಲ್ಲಿ ಕೊರೋನಾ ಸಾಂಕ್ರಾಮಿಕಕ್ಕೆ ಬಲಿಯಾದವರ ಸಂಖ್ಯೆ ಶುಕ್ರವಾರಕ್ಕೆ 5 ಲಕ್ಷ ಗಡಿ ದಾಟಿದೆ. ಈ ಮೂಲಕ ಅಮೆರಿಕ, ಬ್ರೆಜಿಲ್‌ ಬಳಿಕ ಕೋವಿಡ್‌ ಸೋಂಕಿಗೆ ಅತಿ ಹೆಚ್ಚು ಜನರು ಮೃತಪಟ್ಟಮೂರನೇ ದೇಶವಾಗಿ ಭಾರತ ಮಾರ್ಪಟ್ಟಿದೆ. ಅಮೆರಿಕದಲ್ಲಿ ಈವರೆಗೆ 9.2 ಲಕ್ಷ ಮತ್ತು ಬ್ರೆಜಿಲ್‌ನಲ್ಲಿ 6.3 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಶುಕ್ರವಾರ 1072 ಸಾವು ವರದಿ ಆಗುವ ಮೂಲಕ ಒಟ್ಟು ಸಾವಿನ ಸಂಖ್ಯೆ 5,00,055ಕ್ಕೆ ಏರಿಕೆ ಆಗಿದೆ.

ಭಾರತದಲ್ಲಿ ಮೊದಲ ಕೊರೋನಾ ಸಾವು 2020ರ ಮಾಚ್‌ರ್‍ 10ರಂದು ಕರ್ನಾಟಕದ ಕಲಬುರಗಿಯಲ್ಲಿ ಸಂಭವಿಸಿತ್ತು. ಕಳೆದ ಜು.1ರಂದು ಸಾವಿಗೀಡಾದವರ ಸಂಖ್ಯೆ 4 ಲಕ್ಷ ಗಡಿ ದಾಟಿತ್ತು. ಅನಂತರ 217 ದಿನಗಳ ಬಳಿಕ 4ರಿಂದ 5 ಲಕ್ಷ ಗಡಿ ದಾಟಿದೆ.

ಕಳೆದ ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಕೊರೊನಾ 2ನೇ ಅಲೆಗೆ ಭಾರತ ತತ್ತರಿಸಿತ್ತು. ಸಾವಿನ ಪ್ರಮಾಣ ಕಳೆದ ಮೇ 23ರಂದು 3 ಲಕ್ಷ ಗಡಿದಾಟಿತ್ತು. ಮತ್ತು ಏ.27ರಂದು 2 ಲಕ್ಷ ಗಡಿ ದಾಟಿತ್ತು. ಇದಕ್ಕೆ ಹೋಲಿಸಿದರೆ 4ರಿಂದ 5 ಲಕ್ಷಕ್ಕೆ ತಲುಪಲು ಅತ್ಯಂತ ಸುದೀರ್ಘ ಕಾಲ ಹಿಡಿದಿದೆ.

ಇದನ್ನೂ ಓದಿ: 100% Occupancy in Cinemas: ನಿರ್ಬಂಧ ಮತ್ತಷ್ಟು ಸಡಿಲ: ಸಿನಿಮಾ, ಜಿಮ್‌ 100% ಭರ್ತಿಗೆ ಸಮ್ಮತಿ

ದೇಶ, ಸಾವು: ಅಮೆರಿಕ 9.2 ಲಕ್ಷ, ಬ್ರೆಜಿಲ್‌ 6.3 ಲಕ್ಷ, ಭಾರತ 5 ಲಕ್ಷ

1.49 ಲಕ್ಷ ಹೊಸ ಕೇಸ್‌: 4 ವಾರದ ಕನಿಷ್ಠ: ದೇಶದಲ್ಲಿ ಕೊರೋನಾ ಸೋಂಕು ಮತ್ತಷ್ಟುಇಳಿಮುಖವಾಗಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 1.49 ಲಕ್ಷ ಹೊಸ ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇದು 26 ದಿನಗಳ (4 ವಾರದ) ಕನಿಷ್ಠವಾಗಿದೆ.

ಇದೇ ವೇಳೆ 1072 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಕೇರಳವು ಪರಿಷ್ಕೃತ ಮಾರ್ಗಸೂಚಿ ಅನುಸಾರ 565 ಹಳೆಯ ಸಾವುಗಳನ್ನು ಕೋವಿಡ್‌ ಸಾವಿನ ಲೆಕ್ಕಕ್ಕೆ ಸೇರಿಸಿದ್ದೇ ಸಾವಿನ ಸಂಖ್ಯೆ ಏರಿಕೆಗೆ ಕಾರಣ.ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 14.35 ಲಕ್ಷಕ್ಕೆ ಇಳಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.95.39ಕ್ಕೆ ಸುಧಾರಿಸಿದೆ. ದೈನಂದಿನ ಪಾಸಿಟಿವಿಟಿ ದರ ಶೇ.9.27ಕ್ಕೆ ತಗ್ಗಿದೆ.

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4.19 ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 5 ಲಕ್ಷಕ್ಕೆ ತಲುಪಿದೆ. ಒಟ್ಟು ಸೋಂಕಿತರ ಪೈಕಿ 4 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಈ ನಡುವೆ ದೇಶದಲ್ಲಿ 168.47 ಕೋಟಿ ಡೋಸ್‌ ಲಸಿಕೆ ವಿತರಣೆ ಮಾಡಲಾಗಿದೆ.

ಇದನ್ನೂ ಓದಿ: Covid Crisis: ರಾಜ್ಯದಲ್ಲಿ 15,000ಕ್ಕಿಂತ ಕೆಳಗಿಳಿದ ಕೋವಿಡ್‌ ಕೇಸ್‌..!

ಕೊರೋನಾ ಪರಿಹಾರ: ನೋಡಲ್‌ ಅಧಿಕಾರಿ ನೇಮಕಕ್ಕೆ ಸುಪ್ರೀಂ ಸೂಚನೆ: ಕೊರೋನಾ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಒದಗಿಸಲು ಅನುಕೂಲವಾಗುವಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ‍್ಯದರ್ಶಿಗಳೊಂದಿಗೆ ವ್ಯವಹರಿಸಲು ನೋಡಲ್‌ ಅಧಿಕಾರಿಯನ್ನು ನೇಮಿಸುವಂತೆ ಸುಪ್ರೀಂಕೋರ್ಟ್‌ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶುಕ್ರವಾರ ಆದೇಶಿಸಿದೆ.

ಜ. ಎಂ.ಆರ್‌.ಶಾ ಮತ್ತು ಬಿ.ವಿ ನಾಗರತ್ನ ಅವರ ಪೀಠ, ಇಂದಿನಿಂದ ಒಂದು ವಾರದ ಒಳಗಾಗಿ ರಾಜ್ಯ ಸರ್ಕಾರಗಳು ಸೋಂಕಿನಿಂದ ಮೃತಪಟ್ಟವರ ಹೆಸರು, ವಿಳಾಸ ಮತ್ತು ಮರಣಪ್ರಮಾಣಪತ್ರ ಮತ್ತು ಅನಾಥರ ವಿವರವನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದೆ. ಒಂದು ವೇಳೆ ಮಾಹಿತಿ ಸಲ್ಲಿಸಲು ವಿಫಲವಾದರೆ ಅದನ್ನು ಗಂಭೀರವಾಗಿ ಪರಿಗಣಿಸುವುದಾಗಿ ಎಚ್ಚರಿಸಿದೆ.

ಹಾಗೆಯೇ ತಾಂತ್ರಿಕ ಕಾರಣಗಳಿಂದ ಅರ್ಜಿಗಳನ್ನು ತಿರಸ್ಕಾರ ಮಾಡಬಾರದು. ದೋಷಗಳನ್ನು ಪರಿಹರಿಸಲು ಅವಕಾಶ ನೀಡಬೇಕು. ಅರ್ಜಿ ಸಲ್ಲಿಕೆ ನಂತರ 10 ದಿನದ ಒಳಗಾಗಿ ಪರಿಹಾರ ಹಣವನ್ನು ಪಾವತಿ ಮಾಡುವ ಎಲ್ಲಾ ಪ್ರಯತ್ನ ಮಾಡಬೇಕು ಎಂದು ಸೂಚಿಸಿದೆ. 

ದೆಹಲಿ, ರಾಜಸ್ಥಾನದಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭ ಘೋಷಣೆ: ಕೋವಿಡ್‌ ಇಳಿಕೆ ಹಿನ್ನೆಲೆಯಲ್ಲಿ ದಿಲ್ಲಿ ಹಾಗೂ ರಾಜಸ್ಥಾನದಲ್ಲಿ ನಿರ್ಬಂಧಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ದೆಹಲಿಯಲ್ಲಿ ಕೋವಿಡ್‌ ಕೇಸ್‌ಗಳಲ್ಲಿ ಇಳಿಕೆ ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರವು ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ನಿರ್ಧರಿಸಿದೆ.

 ಫೆ. 7 ರಿಂದ ಎಲ್ಲ ಉನ್ನತ ಶಿಕ್ಷಣ ಕೇಂದ್ರ ಹಾಗೂ 9-12 ನೇ ತರಗತಿಗಳನ್ನು ಆರಂಭಿಸಲಾಗುವುದು. ಫೆ. 14 ರಿಂದ ನರ್ಸರಿಯಿಂದ ಪ್ರಾಥಮಿಕ ಶಾಲೆಯ ಎಲ್ಲ ತರಗತಿಗಳನ್ನು ಆರಂಭಿಸಲಾಗುವುದು. ಜಿಮ್‌ಗಳ ಆರಂಭಕ್ಕೂ ಸಮ್ಮತಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ತಿಳಿಸಿದ್ದಾರೆ.

ಅದೇ ರೀತಿ ರಾಜಸ್ಥಾನ ಸರ್ಕಾರವು ಕೋವಿಡ್‌ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳಲು ಮುಂದಾಗಿದ್ದು, ಫೆ. 10 ರಿಂದ 5 ರಿಂದ 9ನೇ ತರಗತಿಯವರಿಗೆ ಶಾಲೆಗಳನ್ನು ಆರಂಭಿಸಲಿದೆ. ಈಗಾಗಲೇ ಫೆ. 1 ರಿಂದ 10 ರಿಂದ 12 ನೇ ತರಗತಿಗಳ ವಿದ್ಯಾರ್ಥಿಗಳಿಗಾಗಿ ಶಾಲೆಗಳನ್ನು ತೆರೆಯಲಾಗಿದೆ.

PREV
Read more Articles on
click me!

Recommended Stories

ಕೋವಿಡ್ ಭಯ ಬೇಡ ಮುನ್ನೆಚ್ಚರಿಕೆ ಇರಲಿ: ಸಚಿವ ಡಾ.ಎಂ.ಸಿ.ಸುಧಾಕರ್
ಮತ್ತೆ ಹೆಚ್ಚಾದ ವೈರಸ್‌ ಕಾಟ: ಮೈಸೂರಿನಲ್ಲಿ ಮಹಾಮಾರಿ ಕೊರೋನಾಗೆ ಮೊದಲ ಬಲಿ