ಕೋವಿಡ್‌ ಬಳಿಕ ಮಕ್ಕಳಲ್ಲಿ ಜ್ವರ, ನೆಗಡಿ, ಕೆಮ್ಮು ಹೆಚ್ಚಳ

By Kannadaprabha NewsFirst Published Oct 9, 2023, 12:00 AM IST
Highlights

ಶಾಲೆಗೆ ಹೋಗುವ ಮಕ್ಕಳು ಈಗ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನಾನಾ ರೀತಿಯ ಇನ್‌ಫ್ಲುಯೆಂಜಾ ವೈರಸ್‌ಗಳು ದೇಶದಲ್ಲಿ ಹರಡುತ್ತಿರುವುದು ಅದಕ್ಕೆ ಕೋವಿಡ್‌ ಕಾರಣವಿರಬಹುದು. ಮಕ್ಕಳಿಂದ ಅವು ತಂದೆ-ತಾಯಿಗೂ ಹರಡುತ್ತಿವೆ ಎಂದು ಸಮೀಕ್ಷೆ ತಿಳಿಸಿದೆ.

ನವದೆಹಲಿ(ಅ.09): ಕೋವಿಡ್‌ ಬಳಿಕ ದೇಶದ ಮಕ್ಕಳಲ್ಲಿ ಜ್ವರ ಹಾಗೂ ಶ್ವಾಸಕೋಶದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಕೋವಿಡ್‌ಗಿಂತ ಹಿಂದೆ ವರ್ಷಕ್ಕೆ 2-3 ಸಲ ಮಕ್ಕಳಿಗೆ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಳ್ಳುತ್ತಿದ್ದರೆ, ಈಗ ಅದು ನಾಲ್ಕಕ್ಕಿಂತ ಹೆಚ್ಚು ಸಲ ಕಾಣಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲ, ಈಗ ಮಕ್ಕಳಿಗೆ ಜ್ವರ, ನೆಗಡಿ ಹಾಗೂ ಶ್ವಾಸಕೋಶ ಸಂಬಂಧಿ ಅನಾರೋಗ್ಯ ಕಾಣಿಸಿಕೊಂಡರೆ ಅದು ಗುಣವಾಗುವುದೂ ತಡವಾಗುತ್ತಿದೆ ಎಂದು ಅಧ್ಯಯನವೊಂದು ಹೇಳಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಸಮೀಕ್ಷೆ ನಡೆಸುವ ಲೋಕಲ್‌ ಸರ್ಕಲ್‌ ಸಂಸ್ಥೆಯು ದೇಶಾದ್ಯಂತ 317 ಜಿಲ್ಲೆಗಳ 31,000 ಪೋಷಕರಿಂದ ಪಡೆದ ಮಾಹಿತಿಯಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.
ಶಾಲೆಗೆ ಹೋಗುವ ಮಕ್ಕಳು ಈಗ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನಾನಾ ರೀತಿಯ ಇನ್‌ಫ್ಲುಯೆಂಜಾ ವೈರಸ್‌ಗಳು ದೇಶದಲ್ಲಿ ಹರಡುತ್ತಿರುವುದು ಅದಕ್ಕೆ ಕೋವಿಡ್‌ ಕಾರಣವಿರಬಹುದು. ಮಕ್ಕಳಿಂದ ಅವು ತಂದೆ-ತಾಯಿಗೂ ಹರಡುತ್ತಿವೆ ಎಂದು ಸಮೀಕ್ಷೆ ತಿಳಿಸಿದೆ.

ಶೀಘ್ರದಲ್ಲೇ ಅಪ್ಪಳಿಸಲಿದೆ ಕೋವಿಡ್‌ಗಿಂತ ಭೀಕರ ಸಾಂಕ್ರಾಮಿಕ ರೋಗ; 5 ಕೋಟಿ ಜನರನ್ನು ಕೊಲ್ಲಲಿದೆ ‘’‍X’’!

ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ.30ರಷ್ಟು ಪೋಷಕರು ತಮ್ಮ ಮಕ್ಕಳಿಗೆ ಕಳೆದ 12 ತಿಂಗಳಲ್ಲಿ 4-6 ಸಲ ಜ್ವರ, ನೆಗಡಿ, ಕೆಮ್ಮು ಬಂದಿದೆ ಎಂದಿದ್ದಾರೆ. ಶೇ.3ರಷ್ಟು ಪೋಷಕರು 7-12 ಸಲ ಬಂದಿದೆ ಎಂದಿದ್ದಾರೆ. ಶೇ.38ರಷ್ಟು ಪೋಷಕರು 2-3 ಸಲ ಬಂದಿದೆ ಎಂದಿದ್ದಾರೆ.

ವೈದ್ಯರು ಕೂಡ ಇದನ್ನು ಪುಷ್ಟೀಕರಿಸಿದ್ದು, ‘ಕೋವಿಡ್‌ ಬಳಿಕ ಮಕ್ಕಳಲ್ಲಿ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಳ್ಳುವುದು ಖಂಡಿತ ಹೆಚ್ಚಾಗಿದೆ. ಜೊತೆಗೆ, ಅದು ಗುಣವಾಗಲು ಈಗ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಮೊದಲೆಲ್ಲಾ ನಾವು 5 ಅಥವಾ 10 ದಿನಗಳ ಕಾಲ ಆ್ಯಂಟಿಬಯೋಟಿಕ್‌ ನೀಡುತ್ತಿದ್ದೆವು. ಈಗ ಇನ್ನೂ ಹೆಚ್ಚಿನ ಅವಧಿಗೆ ನೀಡಬೇಕಾಗಿ ಬರುತ್ತಿದೆ. ಏಕೆಂದರೆ ಸೋಂಕಿನ ಪ್ರಮಾಣ ಹೆಚ್ಚಿರುತ್ತದೆ’ ಎಂದು ವೈದ್ಯರು ಹೇಳಿದ್ದಾರೆ.

ಕೋವಿಡ್‌ ಅವಧಿಯಲ್ಲಿ ಸುಮಾರು 2 ವರ್ಷ ಮನೆಯಲ್ಲೇ ಇದ್ದ ಮಕ್ಕಳು ಈಗ ಪೂರ್ಣ ಪ್ರಮಾಣದಲ್ಲಿ ಶಾಲೆಗೆ ಹೋಗುತ್ತಿರುವುದು ಕೂಡ ಅವರಲ್ಲಿ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳಲು ಕಾರಣವಿರಬಹುದು ಎಂದೂ ವೈದ್ಯರು ಊಹಿಸಿದ್ದಾರೆ.

click me!