ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ: ಹೊಸ ಅಲೆಯ ಮುನ್ಸೂಚನೆಯಾ?

By Kannadaprabha NewsFirst Published Apr 1, 2023, 5:25 AM IST
Highlights

ಕೊರೋನಾ ಏರುತ್ತಿದ್ದರೂ ಹೊಸ ಅಲೆಯ ಸಾಧ್ಯತೆ ಇಲ್ಲ: ತಜ್ಞರು, ಎಕ್ಸ್‌ಬಿಬಿ1.6 ರೂಪಾಂತರಿ ವೈರಸ್‌ಗೆ ಹೆಚ್ಚು ಶಕ್ತಿ ಇಲ್ಲ, ಸತತ 2ನೇ ದಿನವೂ, ದೇಶದಲ್ಲಿ 3000+ ಕೋವಿಡ್‌ ಕೇಸ್‌ 9 ಇಂದಿನಿಂದ ತ.ನಾಡು ಆಸ್ಪತ್ರೆಗಳಲ್ಲಿ ಮಾಸ್ಕ್‌ ಧಾರಣೆ ಕಡ್ಡಾಯ. 

ಬೆಂಗಳೂರು(ಏ.01): ರಾಜ್ಯದಲ್ಲಿ ಇತ್ತೀಚೆಗೆ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಗುರುವಾರ ಹಾಗೂ ಶುಕ್ರವಾರ ಕ್ರಮವಾಗಿ 288 ಹಾಗೂ 286 ಪ್ರಕರಣಗಳು ವರದಿಯಾಗಿ ಆತಂಕ ಸೃಷ್ಟಿಸಿದೆ. ಆದರೂ, ಇದು ಕೊರೋನಾ ಅಲೆಯಾಗಿ ಮಾರ್ಪಾಡುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ರಾಜ್ಯದಲ್ಲಿ 286 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಅಲ್ಲದೆ, ಶಿವಮೊಗ್ಗದಲ್ಲಿ 71 ವರ್ಷದ ಮಹಿಳೆ, ದಾವಣಗೆರೆಯಲ್ಲಿ 51 ವರ್ಷದ ವ್ಯಕ್ತಿ ಸೇರಿದಂತೆ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಕಳೆದ ಆರು ತಿಂಗಳಿಂದ 100ಕ್ಕೂ ಕಡಿಮೆ ಪ್ರಕರಣ ವರದಿಯಾಗುತ್ತಿದ್ದ ರಾಜ್ಯದಲ್ಲಿ ಕಳೆದ 15 ದಿನಗಳಿಂದ ಈಚೆಗೆ ಪ್ರಕರಣಗಳ ಸಂಖ್ಯೆ ಏರುಗತಿಯತ್ತ ಸಾಗಿದೆ. ಇದು ಜನರಲ್ಲಿ ಮತ್ತೊಂದು ಅಲೆ ಸೃಷ್ಟಿಯಾಗುವ ಆತಂಕ ಸೃಷ್ಟಿಸಿತ್ತು.

ಕೋವಿಡ್ ಏರಿಕೆ: ತಮಿಳುನಾಡಿನ ಆಸ್ಪತ್ರೆಗಳಲ್ಲಿ ಮಾಸ್ಕ್‌ ಕಡ್ಡಾಯ

ಆದರೆ, ಈ ಬಗ್ಗೆ ಪ್ರಕ್ರಿಯಿಸಿರುವ ವೈರಾಣು ತಜ್ಞ ಡಾ.ರವಿ, ಇದು ಕೊರೋನಾ ಅಲೆ ಉಂಟಾಗುವುದರ ಮುನ್ಸೂಚನೆಯಲ್ಲ. ಈಗ ಕೊರೋನಾ ಸೋಂಕನ್ನು ಹರಡುತ್ತಿರುವುದು ಎಕ್ಸ್‌ಬಿಬಿ1.6 ಮಾದರಿ ವೈರಾಣುವಾಗಿದ್ದು, ಇದು ಸಾಂಕ್ರಾಮಿಕವಾಗಿರುವ ಕಾರಣ ಪ್ರಕರಣಗಳು ಹೆಚ್ಚಾಗುತ್ತವೆ. ಆದರೆ, ಇದು ಗಂಭೀರ ಪ್ರಕರಣಗಳನ್ನು ಸೃಷ್ಟಿಸಲು ಸಾಧ್ಯವಿಲ್ಲವಾದ್ದರಿಂದ ಮತ್ತೊಂದು ಅಲೆಗೆ ಕಾರಣವಾಗಲಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಈ ಕೊರೋನಾ ಅಥವಾ ಯಾವುದೇ ವೈರಾಣು ಸೋಂಕಿಗೆ ಅಂತ್ಯ ಎಂಬುದೇ ಇರುವುದಿಲ್ಲ. ಪ್ರತಿ ವರ್ಷ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಆಯಾ ಕಾಲಕ್ಕೆ (ಸೀಸನ್‌) ತಕ್ಕಂತೆ ಕೆಲ ಪ್ರಕರಣ ವರದಿಯಾಗುತ್ತವೆ. ಆದರೆ ಇದನ್ನು ಮತ್ತೊಂದು ಅಲೆ ಎಂದು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ದೇಶದಲ್ಲೇ 4ನೇ ಅತಿ ಹೆಚ್ಚು ಸಕ್ರಿಯ ಸೋಂಕು ಹೊಂದಿರುವ ರಾಜ್ಯ ಕರ್ನಾಟಕ. ಗುರುವಾರ 288 ಪ್ರಕರಣ ಹಾಗೂ ಶುಕ್ರವಾರ 286 ಪ್ರಕರಣ ವರದಿಯಾಗಿದ್ದವು. ಹೀಗಾಗಿ ಸಕ್ರಿಯ ಸೋಂಕುಗಳ ಸಂಖ್ಯೆ ಮಾ.31ರ ವೇಳೆಗೆ 1,108ಕ್ಕೆ ತಲುಪಿತ್ತು. ಪಾಸಿಟಿವಿಟಿ ದರ ಕಳೆದ ಒಂದು ವಾರದಲ್ಲಿ ಶೇ.2.47ರಷ್ಟುವರದಿಯಾಗಿದೆ. ಶುಕ್ರವಾರ ಇದರ ಪ್ರಮಾಣ ಶೇ.2.87ರಷ್ಟಿತ್ತು. ಕೊರೋನಾ ಸೋಂಕಿನ ಪರೀಕ್ಷೆಗಳ ಹೆಚ್ಚಳದಿಂದ ಸೋಂಕು ಹೆಚ್ಚಾಗುತ್ತಿರುವುದು ಆತಂಕ ಸೃಷ್ಟಿಸಿತ್ತು.

ಒಂದೇ ದಿನ 3016 ಕೋವಿಡ್‌ ಕೇಸ್‌: 6 ತಿಂಗಳಲ್ಲೇ ಗರಿಷ್ಠ

ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಕೊರೋನಾ ಪರೀಕ್ಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲ ಮಾಡುತ್ತಿರುವುದರಿಂದ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಲ್ಲಿ ಬಹುತೇಕರು ಆಸ್ಪತ್ರೆಗೆ ದಾಖಲಾಗುತ್ತಿಲ್ಲ. ಮನೆಯಲ್ಲೇ ಚಿಕಿತ್ಸೆ ಪಡೆಯುವ ಮೂಲಕ ಗುಣಮುಖರಾಗುತ್ತಿದ್ದಾರೆ. ಕೊರೋನಾ ಮಾರ್ಗಸೂಚಿ ಪಾಲಿಸಿದರೆ ಈ ಪ್ರಕರಣಗಳೂ ಕಡಿಮೆಯಾಗುತ್ತವೆ ಎಂದು ಹೇಳಿದ್ದಾರೆ.

ಶುಕ್ರವಾರ 286 ಮಂದಿಗೆ ಸೋಂಕು, 2 ಸಾವು:

ರಾಜ್ಯದಲ್ಲಿ ಶುಕ್ರವಾರ 286 ಮಂದಿಗೆ ಸೋಂಕು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಈ ಪೈಕಿ ಬೆಂಗಳೂರು ನಗರದಲ್ಲಿ 170, ಶಿವಮೊಗ್ಗ 34, ಕಲಬುರಗಿ 13, ಧಾರವಾಡ 8, ಬಳ್ಳಾರಿ, ಉತ್ತರ ಕನ್ನಡ, ಕೋಲಾರದಲ್ಲಿ ತಲಾ 7, ರಾಯಚೂರು 5, ಹಾಸನ, ಬಾಗಲಕೋಟೆ ತಲಾ 3, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಮೈಸೂರು, ಉಡುಪಿ ತಲಾ 2, ವಿಜಯಪುರ, ಕೊಡಗು, ಹಾವೇರಿ, ದಾವಣಗೆರೆ, ಬೆಳಗಾವಿಯಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿದೆ.

click me!