ಸೋಂಕು ತಗುಲಿ, ರೋಗ ಪ್ರತಿಕಾಯ ಉತ್ಪತ್ತಿ, ಲಸಿಕೆ ಪಡೆಯದ 6-14 ವರ್ಷದ ಮಕ್ಕಳಲ್ಲಿ ಸಮೀಕ್ಷೆ
ಬೆಂಗಳೂರು(ಸೆ.10): ರಾಜ್ಯ ಆರೋಗ್ಯ ಇಲಾಖೆ ನಡೆಸಿದ 6-14 ವರ್ಷದ ಮಕ್ಕಳ ಕೊರೋನಾ ಸಿರೋ ಸಮೀಕ್ಷೆಯಲ್ಲಿ ಶೇ.75 ರಷ್ಟು ಮಕ್ಕಳಿಗೆ ಸೋಂಕು ತಗುಲಿದ್ದು ಪತ್ತೆಯಾಗಿದೆ. ವಿಶೇಷವೆಂದರೆ, ಈ ಮಕ್ಕಳಿಗೆ ಲಸಿಕೆ ಪಡೆಯದೇ ರೋಗ ಪ್ರತಿಕಾಯಗಳು ಕೂಡಾ ಉತ್ಪತ್ತಿಯಾಗಿವೆ.
ರಾಜ್ಯದ ಜನರ ರೋಗ ನಿರೋಧಕ ಶಕ್ತಿ ಮತ್ತು ಲಸಿಕೆ ಪರಿಣಾಮ ತಿಳಿದುಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಿರೋ ಸಮೀಕ್ಷೆಯನ್ನು ನಡೆಸುತ್ತಿತ್ತು. ಆದರೆ, ಲಸಿಕೆ ಪಡೆಯದ ಮಕ್ಕಳಲ್ಲಿ ಸಿರೋ ಸಮೀಕ್ಷೆ ನಡೆಸಲು ರಾಜ್ಯ ಕೊರೋನಾ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿತ್ತು. ಅದರಂತೆ ಆರೋಗ್ಯ ಇಲಾಖೆಯು ರಾಜ್ಯಾದ್ಯಂತ 6 ರಿಂದ 14 ವರ್ಷದೊಳಗಿನ 5358 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಿತ್ತು. ಆಗ ಶೇ.75.38 ಮಕ್ಕಳಲ್ಲಿ ಕೊರೋನಾ ವಿರುದ್ಧ ಹೋರಾಡುವ ರೋಗ ಪ್ರತಿಕಾಯ ಪತ್ತೆಯಾಗಿದೆ. ಅಂದರೆ, ಇವರೆಲ್ಲರಿಗೂ ಸೋಂಕು ತಗುಲಿ ಅದರಿಂದಲೇ ರೋಗಪ್ರತಿಕಾಯಗಳು ಉತ್ಪತ್ತಿಯಾಗಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ.
NASAL VACCINE: ಕೋವಿಡ್‌ಗೆ ಇನ್ನು ಮೂಗಿನ ಮೂಲಕವೂ ಲಸಿಕೆ ವಿತರಣೆ!
ಚಿಕ್ಕಮಗಳೂರು ನಂ.1:
ಜಿಲ್ಲಾವಾರು ಸಮೀಕ್ಷೆ ನಡೆಸಿದ್ದು, ಅತಿ ಹೆಚ್ಚು ಚಿಕ್ಕಮಗಳೂರು ಶೇ. 100, ಬಾಗಲಕೋಟೆ ಶೇ. 91.12, ಉತ್ತರ ಕನ್ನಡ ಶೇ. 89.61, ಗದಗ ಶೇ. 88.62 ಮಕ್ಕಳಲ್ಲಿ ಪ್ರತಿಕಾಯ ಪತ್ತೆಯಾಗಿದೆ. ಸೋಂಕಿನ ತೀವ್ರತೆ ಹೆಚ್ಚಿದ್ದ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ. 86.88 ಮಕ್ಕಳಲ್ಲಿ ಪ್ರತಿಕಾಯ ಇರುವುದು ಪತ್ತೆಯಾಗಿದೆ. ಅತೀ ಕಡಿಮೆ ಪ್ರತಿಕಾಯ ಹೊಂದಿರುವ ಜಿಲ್ಲೆಗಳ ಪೈಕಿ ಕೊನೆಯಿಂದ ಐದು ಸ್ಥಾನಗಳಲ್ಲಿ ಕಲಬುರಗಿ ಶೇ. 43.24, ಯಾದಗಿರಿ ಶೇ. 48.20, ಉಡುಪಿ ಶೇ. 52.31, ಹಾವೇರಿ ಶೇ. 59.47 ಹಾಗೂ ರಾಮನಗರ ಶೇ. 62.72 ಮಕ್ಕಳಲ್ಲಿ ಪ್ರತಿಕಾಯಗಳು ಕಂಡುಬಂದಿವೆ.