ಕರ್ನಾಟಕಕ್ಕೆ ಕೇಂದ್ರ ಕೊಟ್ಟಿದ್ದು 2,141 ಕೋಟಿ ಕೋವಿಡ್‌ ಲಸಿಕೆ: ಡಾ.ಕೆ.ಸುಧಾಕರ್‌

By Kannadaprabha News  |  First Published Apr 9, 2023, 2:00 AM IST

ಕೋವಿಡ್‌ ಲಸಿಕೆಯನ್ನು ಅಪಹಾಸ್ಯ ಮಾಡಿ, ‘ಮೋದಿ ಲಸಿಕೆ’ ಎಂದು ಕರೆಯಲಾಯಿತು. ಲಸಿಕೆ ಪಡೆದರೆ ಸಂತಾನ ಶಕ್ತಿ ಕಳೆದುಕೊಳ್ಳುತ್ತಾರೆ ಎಂಬ ಅಪಪ್ರಚಾರವನ್ನು ಕಾಂಗ್ರೆಸ್‌ ಮಾಡಿತು. ಆದರೆ, ಕೋವಿಡ್‌ ತೀವ್ರವಾದ ಬಳಿಕ ಕಾಂಗ್ರೆಸ್‌ ನಾಯಕರು ಸಾಲಿನಲ್ಲಿ ನಿಂತು ಲಸಿಕೆ ಪಡೆದರು: ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌


ಬೆಂಗಳೂರು(ಏ.09):  ಕೋವಿಡ್‌ ವೇಳೆ ಆರ್ಥಿಕ, ಸಾಮಾಜಿಕ ವ್ಯವಸ್ಥೆಗೆ ಧಕ್ಕೆ ಆದಾಗ ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟನಾಯಕತ್ವ ತೋರಿದ್ದು, ಬಡ ದೇಶಗಳಿಗೆ ಕೋವಿಡ್‌ ಲಸಿಕೆ ಪೂರೈಸಿ ಹೃದಯ ಶ್ರೀಮಂತಿಕೆ ಮೆರೆದಿದ್ದರು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಬಣ್ಣಿಸಿದ್ದಾರೆ.

ಶನಿವಾರ ಮಲ್ಲೇಶ್ವರದಲ್ಲಿನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 220 ಕೋಟಿ ಮತ್ತು ರಾಜ್ಯದಲ್ಲಿ 12 ಕೋಟಿಗೂ ಅಧಿಕ ಲಸಿಕೆಗಳನ್ನು ನೀಡಲಾಗಿದೆ. ರಾಜ್ಯದಲ್ಲಿ 1.15 ಕೋಟಿ ಬೂಸ್ಟರ್‌ ಡೋಸ್‌ ನೀಡಲಾಗಿದೆ. ರಾಜ್ಯಕ್ಕೆ ಉಚಿತವಾಗಿ ನೀಡಿದ ಲಸಿಕೆಗಳ ಬೆಲೆ 2,141 ಕೋಟಿ ರು. ಆಗಿದ್ದು, ಅದನ್ನು ಕೇಂದ್ರವೇ ನೀಡಿದೆ. ಮುಂದುವರಿದ ದೇಶಗಳು ಸಹ ಕೋವಿಡ್‌ ಅನ್ನು ಭಾರತದಂತೆ ನಿರ್ವಹಣೆ ಮಾಡಲು ಸಾಧ್ಯವಾಗಲಿಲ್ಲ. ಅಮೆರಿಕ ಸೇರಿದಂತೆ ಹಲವು ದೇಶಗಳು ಮೊದಲ ಅಲೆಯಲ್ಲಿಯೇ ತತ್ತರಿಸಿಹೋಗಿದ್ದವು. ಮೊದಲ ಅಲೆಯಲ್ಲಿ ಭಾರತ ಉತ್ತಮವಾಗಿ ನಿಯಂತ್ರಣ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗರೀಬ್‌ ಕಲ್ಯಾಣ ಅನ್ನ ಯೋಜನೆಯಡಿ ಉಚಿತ ಅಕ್ಕಿ ನೀಡಿದರು. ರಾಜ್ಯದ್ದು ಸಹ ಸೇರಿ ಮೂರು ವರ್ಷಗಳ ಕಾಲ ತಲಾ 10 ಕೆಜಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

Tap to resize

Latest Videos

undefined

ಇನ್ನು 15-20 ದಿನಕ್ಕೆ ದೇಶದಲ್ಲಿ ಕೋವಿಡ್‌ ತುತ್ತ ತುದಿಗೆ: ತಜ್ಞರು

ಲಸಿಕೆಯಲ್ಲಿ ರಾಜಕೀಯ:

ಲಸಿಕೆ ಬರುವ ಮುನ್ನವೇ ಕಾಂಗ್ರೆಸ್‌ ರಾಜಕೀಯ ಆರಂಭಿಸಿತ್ತು. ದೇಶಕ್ಕೆ ತುರ್ತು ಪರಿಸ್ಥಿತಿ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳು ದೇಶವನ್ನು ಕಾಪಾಡುತ್ತವೆ. ಆದರೆ, ಕಾಂಗ್ರೆಸ್‌ ಎಲ್ಲದರಲ್ಲಿಯೂ ರಾಜಕಾರಣವನ್ನು ಬೆರೆಸಿದೆಯೇ ಹೊರತು, ಸರ್ಕಾರಕ್ಕೆ ಸಹಕಾರ ನೀಡಲಿಲ್ಲ. ಇದು ಜನರಿಗೆ ಮಾಡಿದ ಘೋರ ಅಪರಾಧ. ಆದರೂ ಪ್ರಧಾನಿಯವರ ನಾಯಕತ್ವದಲ್ಲಿ ಸಮರ್ಥವಾಗಿ ಕೋವಿಡ್‌ ಎದುರಿಸಿ ಹಿಂದಿನ ಸ್ಥಿತಿಗೆ ಮರಳಿದ್ದೇವೆ. ಆರ್ಥಿಕ ಪರಿಸ್ಥಿತಿ ಕೂಡ ಚೇತರಿಸಿಕೊಂಡಿದೆ ಎಂದು ತಿಳಿಸಿದರು.

ಲಸಿಕೆಯನ್ನು ಅಪಹಾಸ್ಯ ಮಾಡಿ, ‘ಮೋದಿ ಲಸಿಕೆ’ ಎಂದು ಕರೆಯಲಾಯಿತು. ಲಸಿಕೆ ಪಡೆದರೆ ಸಂತಾನ ಶಕ್ತಿ ಕಳೆದುಕೊಳ್ಳುತ್ತಾರೆ ಎಂಬ ಅಪಪ್ರಚಾರವನ್ನು ಕಾಂಗ್ರೆಸ್‌ ಮಾಡಿತು. ಆದರೆ, ಕೋವಿಡ್‌ ತೀವ್ರವಾದ ಬಳಿಕ ಕಾಂಗ್ರೆಸ್‌ ನಾಯಕರು ಸಾಲಿನಲ್ಲಿ ನಿಂತು ಲಸಿಕೆ ಪಡೆದರು. ಲಸಿಕೆ ಬಂದ ಬಳಿಕ ಅದರ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಸಂಶೋಧನಾ ಸಂಸ್ಥೆಗಳಿಗೆ ಅಪಮಾನ ಮಾಡಿದ್ದರು. ಪೋಲಿಯೋ ಲಸಿಕೆ ಬರಲು 23 ವರ್ಷ, ಹೆಪಟೈಟಿಸ್‌ ಬಿ ಲಸಿಕೆ ಬರಲು 30 ವರ್ಷವಾಯಿತು. ಕೋವಿಡ್‌ ಲಸಿಕೆ ಮಾತ್ರ ನಮ್ಮ ದೇಶದಲ್ಲಿಯೇ ತಯಾರಾಗಿ ಬೇಗ ಜನರಿಗೆ ದೊರೆಯಿತು ಎಂದರು.

ಇಡೀ ರಾಜ್ಯದಲ್ಲಿ 5-6 ಸಾವಿರ ಆಮ್ಲಜನಕ ಹಾಸಿಗೆಗಳಿದ್ದವು. ಕೆಲವೇ ತಿಂಗಳಲ್ಲಿ ಜಿಲ್ಲಾಸ್ಪತ್ರೆಯಿಂದ ಮೆಡಿಕಲ್‌ ಕಾಲೇಜು ತನಕ 30 ಸಾವಿರ ಹಾಸಿಗೆಗಳಿಗೆ ಆಮ್ಲಜನಕ ಅಳವಡಿಸಲಾಯಿತು. 2,025 ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಲಾಗಿದೆ. 1.12 ಕೋಟಿ ಜನರು ಟೆಲಿಕನ್ಸಲ್ಟೇಷನ್‌ ಮೂಲಕ ಆರೋಗ್ಯ ಸೇವೆ ಪಡೆದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಿದ್ದಾರೆ ಎಂದು ಹೇಳಿದರು.

ವರ್ಷದಲ್ಲೇ ಅತ್ಯಧಿಕ ಕೊರೋನಾ ಕೇಸ್‌..!

ಕೋವಿಡ್‌ ನಿಯಂತ್ರಣದಲ್ಲಿದೆ, ಆದರೂ 3ನೇ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಿರಿ

ಕಳೆದ ವಾರವಷ್ಟೇ ಕೋವಿಡ್‌ಗೆ ಸಂಬಂಧಿಸಿದಂತೆ ಮಾರ್ಗಸೂಚಿ ನೀಡಲಾಗಿದೆ. ಪರೀಕ್ಷೆ ಹೆಚ್ಚಳ, ಜೀನೋಮಿಕ್‌ ಸೀಕ್ವೆನ್ಸ್‌, ಆಸ್ಪತ್ರೆ ದಾಖಲು ಮೊದಲಾದವುಗಳ ಬಗ್ಗೆ ಗಮನಹರಿಸಲಾಗಿದೆ. ರಾಜ್ಯದಲ್ಲಿ ಈಗ ಕೋವಿಡ್‌ ನಿಯಂತ್ರಣದಲ್ಲಿದೆ. ಆದರೆ, ಜನರು ಮೂರನೇ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು. ಜತೆಗೆ ಜನಸಂದಣಿಯ ಪ್ರದೇಶಗಳಿಗೆ ಹೋಗಬಾರದು, ಮಾಸ್ಕ್‌ ಧರಿಸಬೇಕು. ಕೇಂದ್ರ ಸರ್ಕಾರ ಕಾನೂನು ಪ್ರಕಾರ ಎಲ್ಲವನ್ನೂ ಮಾಡುತ್ತದೆ. ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸಲಾಗಿದೆ. ಕೈಗಾರಿಕಾ ಕ್ಷೇತ್ರದಲ್ಲಿಯೂ ಉತ್ತಮ ಯೋಜನೆಗಳನ್ನು ನೀಡಿದೆ. ಆದರೆ, ಕಾಂಗ್ರೆಸ್‌ ಪಕ್ಷ ಆಧಾರರಹಿತವಾಗಿ ಎಲ್ಲದಕ್ಕೂ ಆರೋಪ ಮಾಡುತ್ತಿದೆ ಎಂದು ಡಾ.ಸುಧಾಕರ್‌ ಹೇಳಿದರು.

ಅಪಪ್ರಚಾರ ಮಾಡಿದ್ದ ಕಾಂಗ್ರೆಸ್ಸಿಗರಿಗೂ ಲಸಿಕೆ

ಕೋವಿಡ್‌ ಲಸಿಕೆಯನ್ನು ಅಪಹಾಸ್ಯ ಮಾಡಿ, ‘ಮೋದಿ ಲಸಿಕೆ’ ಎಂದು ಕರೆಯಲಾಯಿತು. ಲಸಿಕೆ ಪಡೆದರೆ ಸಂತಾನ ಶಕ್ತಿ ಕಳೆದುಕೊಳ್ಳುತ್ತಾರೆ ಎಂಬ ಅಪಪ್ರಚಾರವನ್ನು ಕಾಂಗ್ರೆಸ್‌ ಮಾಡಿತು. ಆದರೆ, ಕೋವಿಡ್‌ ತೀವ್ರವಾದ ಬಳಿಕ ಕಾಂಗ್ರೆಸ್‌ ನಾಯಕರು ಸಾಲಿನಲ್ಲಿ ನಿಂತು ಲಸಿಕೆ ಪಡೆದರು ಅಂತ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದ್ದಾರೆ. 

click me!