ಬೆಂಗ್ಳೂರಲ್ಲಿ ಕೋವಿಡ್‌ ಶವ ಸಂಸ್ಕಾರಕ್ಕೆ ಬಿಬಿಎಂಪಿ 4 ಚಿತಾಗಾರ ಮೀಸಲು..!

By Kannadaprabha News  |  First Published Dec 22, 2023, 4:36 AM IST

ಕೇರಳದಲ್ಲಿ ಕೊರೋನಾ ಉಪತಳಿ ಪತ್ತೆಯಿಂದಾಗಿ ರಾಜ್ಯದಲ್ಲಿ ಆತಂಕ ಸೃಷ್ಟಿಯಾಗಿದೆ. ಅದರ ಜತೆಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ತಗ್ಗಿಸುವ ಸಲುವಾಗಿ ಬಿಬಿಎಂಪಿ ವಿವಿಧ ಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. 


ಗಿರೀಶ್‌ ಗರಗ

ಬೆಂಗಳೂರು(ಡಿ.22):  ರಾಜ್ಯದಲ್ಲಿ ಕೊರೋನಾ ಸೋಂಕಿನ ತೀವ್ರತೆ ಹೆಚ್ಚುತ್ತಿದ್ದು, ಅದರ ಪರಿಣಾಮ ಪ್ರತಿದಿನ ಸೋಂಕಿನಿಂದ ಸಾವನ್ನಪ್ಪುತ್ತಿರುವ ಪ್ರಕರಣವು ದಾಖಲಾಗುತ್ತಿದೆ. ಹೀಗೆ ಸೋಂಕಿನಿಂದ ಸಾವನ್ನಪ್ಪಿದವರನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲು ಬಿಬಿಎಂಪಿ ಮುಂದಾಗಿದ್ದು, ಅದಕ್ಕಾಗಿ ಪ್ರತ್ಯೇಕ ಚಿತಾಗಾರಗಳನ್ನು ಮೀಸಲಿಡುತ್ತಿದೆ.

Tap to resize

Latest Videos

undefined

ಕೇರಳದಲ್ಲಿ ಕೊರೋನಾ ಉಪತಳಿ ಪತ್ತೆಯಿಂದಾಗಿ ರಾಜ್ಯದಲ್ಲಿ ಆತಂಕ ಸೃಷ್ಟಿಯಾಗಿದೆ. ಅದರ ಜತೆಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ತಗ್ಗಿಸುವ ಸಲುವಾಗಿ ಬಿಬಿಎಂಪಿ ವಿವಿಧ ಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಅಲ್ಲದೆ ಈ ಹಿಂದೆ ಕೊರೋನಾ ಸೋಂಕು ತೀವ್ರಗೊಂಡಾಗ ಉಂಟಾಗಿದ್ದ ಅವ್ಯವಸ್ಥೆ ಮರುಕಳಿಸದಂತೆ ಮಾಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ ಸೋಂಕಿನಿಂದ ಸಾವನ್ನಪ್ಪುವವರ ಅಂತ್ಯಸಂಸ್ಕಾರಕ್ಕಾಗಿ ನಾಲ್ಕು ಚಿತಾಗಾರಗಳನ್ನು ಮೀಸಲಿಡಲಾಗುತ್ತಿದ್ದು, ಅಲ್ಲಿ ಬೇರೆ ಯಾವುದೇ ರೀತಿಯ ಅಂತ್ಯಸಂಸ್ಕಾರ ನಡೆಸದಂತೆ ಆದೇಶಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಬಾಗಲಕೋಟೆ: ಕೋವಿಡ್-19 ರೂಪಾಂತರಿ ಬಗ್ಗೆ ಆತಂಕ ಬೇಡ, ಡಿಸಿ ಜಾನಕಿ

12 ಚಿತಾಗಾರಗಳಲ್ಲಿ 4 ಮೀಸಲು:

ಬಿಬಿಎಂಪಿ ನಿರ್ವಹಣೆಯಲ್ಲಿ ಒಟ್ಟು 12 ವಿದ್ಯುತ್‌ ಚಿತಾಗಾರಗಳು, 50ಕ್ಕೂ ಹೆಚ್ಚಿನ ರುದ್ರಭೂಮಿಗಳಿವೆ. ಕಳೆದ ಮೂರು ಕೊರೋನಾ ಅಲೆ ಸಂದರ್ಭದಲ್ಲಿ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕಾಗಿ ಬೆಂಗಳೂರಿನ ಹೊರವಲಯದ ಕಲ್ಪಳ್ಳಿ ರುದ್ರಭೂಮಿ ಮತ್ತು ಚಿತಾಗಾರವನ್ನು ಮೀಸಲಿಡಲಾಗಿತ್ತು. ಆದರೆ, ಆ ರುದ್ರಭೂಮಿಯು ಭರ್ತಿಯಾಗಿದ್ದು, ಅಂತ್ಯಸಂಸ್ಕಾರ ಮಾಡಲು ಜಾಗವೇ ಇಲ್ಲದಂತಾಗಿದೆ. ಅಲ್ಲದೆ, ಕಳೆದ ಮೂರು ಅಲೆಯಲ್ಲೂ ಅಂತ್ಯಸಂಸ್ಕಾರಕ್ಕೆ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡದ ಕಾರಣ, ಸಾಕಷ್ಟು ಸಮಸ್ಯೆಯಾಗಿತ್ತು.

ಹೀಗಾಗಿ ಈ ಬಾರಿ ಮುಂಜಾಗ್ರತಾ ಕ್ರಮವಾಗಿ ಕೊರೋನಾ ಸೋಂಕಿನ ತೀವ್ರತೆ ಹೆಚ್ಚುವುದಕ್ಕೆ ಮುನ್ನವೇ ಚಿತಾಗಾರಗಳನ್ನು ಮೀಸಲಿಡಲಾಗುತ್ತಿದೆ. ಬನಶಂಕರಿ, ಮೇಡಿಅಗ್ರಹಾರ, ಹೆಬ್ಬಾಳ ಮತ್ತು ಸುಮನಹಳ್ಳಿಯ ಚಿತಾಗಾರಗಳನ್ನು ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಮೀಸಲಿಟ್ಟು, ಅಲ್ಲಿ ಬೇರೆ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ. 

ವಲಯಕ್ಕೊಂದು ಆ್ಯಂಬುಲೆನ್ಸ್‌

ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರನ್ನು ಸಾಗಿಸಲೂ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ಈ ಹಿಂದೆ ಮೃತದೇಹ ಸಾಗಿಸಲು ಕೂಡ ಆ್ಯಂಬುಲೆನ್ಸ್‌ ಅಥವಾ ಬೇರೆ ವಾಹನ ಸಿಗದೆ ಪರದಾಡುವಂತಾಗಿತ್ತು. ಈ ಬಾರಿ ಅದನ್ನು ತಪ್ಪಿಸಲು ಮೃತದೇಹವನ್ನು ಚಿತಾಗಾರಗಳಿಗೆ ತೆಗೆದುಕೊಂಡು ಹೋಗಲು 8 ವಲಯಕ್ಕೂ ತಲಾ ಒಂದು ಆ್ಯಂಬುಲೆನ್ಸ್‌ ಮೀಸಲಿಡಲಾಗುತ್ತಿದೆ. ಸದ್ಯ ಕೊರೋನಾ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆಯಿರುವ ಕಾರಣ ವಲಯಕ್ಕೊಂದು ಆ್ಯಂಬುಲೆನ್ಸ್‌ ಮೀಸಲಿಡಲಾಗಿದೆ. ಮುಂದೆ ಪ್ರಮಾಣ ಹೆಚ್ಚಾದರೆ ಆ್ಯಂಬುಲೆನ್ಸ್‌ ಸಂಖ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಭಾರತಕ್ಕೆ ಅಪಾಯದ ಸೂಚನೆ ನೀಡಿದ ಕೇರಳ; 24 ಗಂಟೆಯಲ್ಲಿ 300 ಕೋವಿಡ್ ಕೇಸ್, 3 ಸಾವು!

ರುದ್ರಭೂಮಿ ಸಿಬ್ಬಂದಿಗೆ ಪಿಪಿಇ ಕಿಟ್‌ ಪೂರೈಕೆ

ಕೊರೋನಾ ಸಂದರ್ಭದಲ್ಲಿ ರುದ್ರಭೂಮಿ ಹಾಗೂ ಚಿತಾಗಾರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಸುರಕ್ಷತೆ ಬಗ್ಗೆಯೂ ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿದೆ. ಬಿಬಿಎಂಪಿಯ ಎಲ್ಲ ಚಿತಾಗಾರ ಹಾಗೂ ರುದ್ರಭೂಮಿಗಳಲ್ಲಿ ಒಟ್ಟು 148 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರೆಲ್ಲರಿಗೂ ಪಿಪಿಇ ಕಿಟ್‌ಗಳನ್ನು ನೀಡುವುದಕ್ಕೆ ಅನುಮತಿ ಕೋರಿ ಬಿಬಿಎಂಪಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮತಿ ದೊರೆತ ಕೂಡಲೇ ಪಿಪಿಇ ಕಿಟ್‌ಗಳನ್ನು ವಿತರಿಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನಾ ಸೋಂಕಿನಿಂದ ಮೃತಪಟ್ಟವರನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ನಡೆಸಲು ಹಾಗೂ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು 4 ಚಿತಾಗಾರಗಳನ್ನು ಮೀಸಲಿಡಲಾಗುತ್ತಿದೆ. ಅದರ ಜತೆಗೆ ಮೃತದೇಹಗಳನ್ನು ಸಾಗಿಸಲು 8 ವಲಯಗಳಲ್ಲೂ ತಲಾ ಒಂದು ಆ್ಯಂಬುಲೆನ್ಸ್‌ ಮೀಸಲಿಡಲಾಗುವುದು. ರುದ್ರಭೂಮಿ ಮತ್ತು ಚಿತಾಗಾರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಸುರಕ್ಷತೆ ದೃಷ್ಟಿಯಿಂದ ಪಿಪಿಇ ಕಿಟ್‌ಗಳನ್ನು ವಿತರಿಸಲು ಸರ್ಕಾರದಿಂದ ಅನುಮತಿ ಕೋರಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರೆಡ್ಡಿ ಶಂಕರಬಾಬು ತಿಳಿಸಿದ್ದಾರೆ.  

click me!