ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ವೈದ್ಯಾಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಪ್ರತಿದಿನ ಕನಿಷ್ಟ 120 ತಪಾಸಣೆ ಮಾಡಬೇಕು. ಔಷಧಿ ಲಭ್ಯತೆ ಮತ್ತು ಯಂತ್ರೋಪಕರಣ ಸುಸ್ಥಿತಿ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ರೀತಿ ಬೇಜವಾಬ್ದಾರಿ ತೋರುವಂತಿಲ್ಲ.
ಬಾಗಲಕೋಟೆ(ಡಿ.21): ಕೋವಿಡ್-19 ರೂಪಾಂತರಿ ಜೆಎನ್ 1 ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಸನ್ನದ್ದವಾಗಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ರೂಪಾಂತರಿ ಕೋವಿಡ್-19 ನಿಯಂತ್ರಣ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ವೈದ್ಯಾಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಪ್ರತಿದಿನ ಕನಿಷ್ಟ 120 ತಪಾಸಣೆ ಮಾಡಬೇಕು. ಔಷಧಿ ಲಭ್ಯತೆ ಮತ್ತು ಯಂತ್ರೋಪಕರಣ ಸುಸ್ಥಿತಿ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ರೀತಿ ಬೇಜವಾಬ್ದಾರಿ ತೋರುವಂತಿಲ್ಲ. ರೋಗಿಗಳು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಸಂದರ್ಭದಲ್ಲಿ ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ಮನ ಪರಿವರ್ತಿಸುವ ಕಾರ್ಯವಾಗಬೇಕು ಎಂದರು.
undefined
ಭಾರತಕ್ಕೆ ಅಪಾಯದ ಸೂಚನೆ ನೀಡಿದ ಕೇರಳ; 24 ಗಂಟೆಯಲ್ಲಿ 300 ಕೋವಿಡ್ ಕೇಸ್, 3 ಸಾವು!
ಕೇರಳದಿಂದ ವಾಪಾಸ್ ಆಗುತ್ತಿರುವ ಅಯ್ಯಪ್ಪ ಸ್ವಾಮಿ ಭಕ್ತರಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಪ್ರತ್ಯೇಕ ವಾಸ ವ್ಯವಸ್ಥೆಯ ಜೊತೆಗೆ ಔಷದೋಪಚಾರ ಹಾಗೂ ಊಟೋಪಚಾರ ಮಾಡಬೇಕು. ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ಶಾಲಾ ಕಾಲೇಜು, ಬೇರೆ ರಾಜ್ಯದಿಂದ ಬರುವ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಹಾಗೂ ವಸತಿ ನಿಲಯಗಳಲ್ಲಿ ಹಾಗೂ ಜಿಲ್ಲೆಯಲ್ಲಿ ನಡೆಯುತ್ತಿರುವ ವಾರದ ಸಂತೆ, ಗ್ರಾಮೀಣ ಪ್ರದೇಶದಲ್ಲಿನ ಜಾತ್ರೆ ಉತ್ಸವ, ನಗರದ ಚಿತ್ರಮಂದಿರ, ಮದುವೆ ಸಮಾರಂಭಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.
ವಿಶೇಷವಾಗಿ 60 ವರ್ಷ ಮೇಲ್ಪಟ್ಟ ವೃದ್ದರಿಗೆ, ಚಿಕ್ಕ ಮಕ್ಕಳಿಗೆ, ಗರ್ಭಣಿಯರ ಮೇಲೆ ಕಾಳಜಿ ವಹಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಬೇಕು. ಪ್ರತಿ ತಾಲೂಕು, ಹೋಬಳಿ ಮಟ್ಟದಲ್ಲಿ ರೋಗಿಗೆ ಚಿಕಿತ್ಸೆ ಸಿಗದಿದ್ದಲ್ಲಿ ಕೂಡಲೇ ಅಂತಹ ರೋಗಿಗಳಿಗೆ ಚಿಕಿತ್ಸೆ ನೀಡುವ ಕೆಲಸವಾಗಬೇಕು. ಈ ರೂಪಾತರಿ ಬಗ್ಗೆ ಈಗಾಗಲೇ ಜನರಿಗೆ ತಿಳಿದಿದೆ. ಆದರೆ, ನಿರ್ಲಕ್ಷ್ಯ ವಹಿಸುವಂತಿಲ್ಲ. ಜನರಲ್ಲಿ ಭಯದ ವಾತವರಣ ಮೂಡದಂತೆ, ತಾಲೂಕು ವೈದ್ಯಾಧಿಕಾರಿ ಹಾಗೂ ತಹಸೀಲ್ದಾರ್ ಎಚ್ಚರಿಕೆ ವಹಿಸಬೇಕು. ಸಕ್ಕರೆ ಕಾರ್ಖಾನೆ ಹೆಚ್ಚಾಗಿರುವ ಮುಧೋಳ, ಜಮಖಂಡಿ, ಬೀಳಗಿ ಪ್ರದೇಶಗಳಲ್ಲಿ ಬೇರೆ ರಾಜ್ಯದ ಕಬ್ಬು ಕಟಾವು ಕೂಲಿ ಕಾರ್ಮಿಕರ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಆರೋಗ್ಯ ಅಧಿಕಾರಿ ಹಾಗೂ ಸಿಬ್ಬಂದಿ ಮೊದಲು ಕಟ್ಟುನಿಟ್ಟಿನ ಜಾಗೃತಿ ವಹಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ಜಿಲ್ಲಾ ಆಯುಷ ಅಧಿಕಾರಿ ಅಕ್ಕಮಹಾದೇವಿ ಗಾಣಿಗೇರ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.