
ಬೆಳಗಾವಿ(ಡಿ.21): ಜೆಎನ್1 ರೂಪಾಂತರಿ ಕೋವಿಡ್-19 ಸೋಂಕು ಹರಡುವಿಕೆ ತೀವ್ರಗೊಳ್ಳುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬೆಡ್ ಹಾಗೂ ಆಕ್ಸಿಜನ್, ಐಸಿಯು ಬೆಡ್ ಗಳ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಇಂದು(ಗುರುವಾರ) ನಡೆದ ಕೋವಿಡ್ -19 ರೂಪಾಂತರಿ ವೈರಸ್ ಜೆಎನ್-1 ನಿಯಂತ್ರಣಕ್ಕೆ ಅಗತ್ಯವಿರುವ ಪೂರ್ವ ಸಿದ್ಧತೆ ಕುರಿತು ಅವರು ನಿರ್ದೇಶನ ನೀಡಿದರು.
ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ ಗಡಿ ಭಾಗದಲ್ಲಿ ತಪಾಸಣೆ ಹೆಚ್ಚಸಬೇಕು. ಗಡಿ ಜಿಲ್ಲೆಗಳಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಿ ವರದಿಯನ್ನು ಸಲ್ಲಿಸಬೇಕು. ತೀವ್ರ ಶ್ವಾಸಕೋಶ ಹಾಗೂ ಉಸಿರಾಟದ ಸಮಸ್ಯೆ ಇರುವವರನ್ನು ಕೋವಿಡ್ ತಪಾಸಣೆಗೆ ಒಳಪಡಿಸಬೇಕು ಎಂದು ತಿಳಿಸಿದರು.
ಭಾರತಕ್ಕೆ ಅಪಾಯದ ಸೂಚನೆ ನೀಡಿದ ಕೇರಳ; 24 ಗಂಟೆಯಲ್ಲಿ 300 ಕೋವಿಡ್ ಕೇಸ್, 3 ಸಾವು!
ತೀವ್ರ ಶ್ವಾಸಕೋಶ, ಉಸಿರಾಟದ ಸಮಸ್ಯೆ ಹಾಗೂ ರೋಗ ಲಕ್ಷಣ ಇರುವವರನ್ನು ಕೂಡಲೇ ಕೊವಿಡ್ ಪರಿಶೀಲನೆಗೆ ಒಳಪಡಿಸಬೇಕು. ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊಠಡಿ ಸ್ಥಾಪನೆ ಸೂಚನೆ ನೀಡಬೇಕು.
ಜ್ವರ, ಕೆಮ್ಮು, ನೆಗಡಿ, ಇತ್ಯಾದಿ ಉಸಿರಾಟದ ಸೋಂಕಿನ ಲಕ್ಷಣಗಳನ್ನು ಹೊಂದಿದವರು ತಕ್ಷಣವೇ ಅಗತ್ಯ ವೈದ್ಯಕೀಯ ಸಲಹೆಯನ್ನು ಪಡೆಯಲು ಹಾಗೂ ಕೋವಿಡ್ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲು ಸಾರ್ವಜನಿಕರಿಗೆ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ವೈದಗಯಕೀಯ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಹೇಳಿದರು.
ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚುವ ಸಂಭವವಿದೆ. ಈ ಹಿಂದೆ ಈಗಾಗಲೇ ಗಂಭೀರ ಪರಿಸ್ಥಿತಿ ಎದುರಿಸಿದ್ದೇವೆ. ಅದನ್ನು ಗಮನದಲ್ಲಿಟ್ಟುಕೊಂಡು ಯಾವುದೇ ರೀತಿಯ ಬೆಡ್ ಆಕ್ಸಿಜನ್ ಗಳ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಜೊತೆಗೆ ಇರುವ ಅಟೆಂಡರ್ ಗಳು ರೋಗಿಯೊಂದಿಗೆ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ತಾಲೂಕು ಆಸ್ಪತ್ರೆಗಳಲ್ಲಿ ಸಂಬಂಧಿಸಿದ ವೈದ್ಯಾಧಿಕಾರಿಗಳು, ತಹಶೀಲ್ದಾರ್ ಗಳು ಆಸ್ಪತ್ರೆಗಳಲ್ಲಿ ಭೇಟಿ ನೀಡಿ ಬೆಡ್ ಗಳ ಲಭ್ಯತೆ ಕುರಿತು ನಿರಂತರ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.