ಲಾಕ್‌ಡೌನ್‌ ತೆರವು ಬೆನ್ನಲ್ಲೇ, ಚೀನಾದಲ್ಲಿ ಜನರ ದೊಂಬಿ, ಗಲಾಟೆ!

By Kannadaprabha NewsFirst Published Mar 29, 2020, 8:03 AM IST
Highlights

ಲಾಕ್‌ಡೌನ್‌ ತೆರವು ಬೆನ್ನಲ್ಲೇ, ಚೀನಾದಲ್ಲಿ ಜನರ ದೊಂಬಿ, ಗಲಾಟೆ!| ಕಳೆದೊಂದು ವಾರದಲ್ಲಿ ಹುಬೇಯಲ್ಲಿ ಕೇವಲ 1 ಕೊರೋನಾ ಕೇಸ್‌| ಈ ಹಿನ್ನೆಲೆ, ಈ ಭಾಗದ ಜನ ಇತರೆ ಭಾಗಗಳಿಗೆ ತೆರಳಲು ಅನುಮತಿ| ಈ ಜನರ ಬಿಟ್ಟುಕೊಂಡರೆ ತಮಗೂ ಕೊರೋನಾ ಬಿಸಿ ತಟ್ಟುವ ಭೀತಿ| ಈ ಹಿನ್ನೆಲೆ, ಹುಬೇ ಪ್ರಾಂತ್ಯದ ಗಡಿ ಭಾಗಗಳು ಸಂಪೂರ್ಣ ಬಂದ್‌

ಬೀಜಿಂಗ್‌(ಮಾ.29): ಭಾರತ ಸೇರಿದಂತೆ ಇಡೀ ವಿಶ್ವದ ನಿದ್ದೆಗೆಡಿಸಿರುವ ಕೊರೋನಾ ವೈರಸ್‌ ಹೊಡೆತದಿಂದ ಸುಧಾರಿಸಿಕೊಳ್ಳುತ್ತಿರುವ ಚೀನಾ ಸರ್ಕಾರಕ್ಕೆ ಇದೀಗ ಜನ ಸಾಮಾನ್ಯರ ದೊಂಬಿ ಹಾಗೂ ಮಾರಾಮಾರಿ ಹೊಸ ತಲೆನೋವಾಗಿ ಪರಿಣಮಿಸಿದೆ. ಕೊರೋನಾ ತಡೆಗಾಗಿ ಹುಬೇ ಪ್ರಾಂತ್ಯದ ಮೇಲೆ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಇದೀಗ ಸಡಿಲಗೊಳಿಸಲಾಗುತ್ತಿದೆ. ಹುಬೇ ಪ್ರಾಂತ್ಯ ಹಾಗೂ ಅದರ ರಾಜಧಾನಿ ವುಹಾನ್‌ನಿಂದ ರೈಲು ಮತ್ತು ಬಸ್ಸು ಸೇವೆಗಳು ಈಗಾಗಲೇ ಆರಂಭವಾಗಿವೆ. ಅಲ್ಲದೆ, ಭಾನುವಾರದಿಂದ ವುಹಾನ್‌ ಹೊರತುಪಡಿಸಿ ಹುಬೇ ಪ್ರಾಂತ್ಯದಲ್ಲಿ ಆಂತರಿಕ ವಿಮಾನ ಸೇವೆ ಆರಂಭವಾಗಲಿದೆ.

ಇದರ ಬೆನ್ನಲ್ಲೇ, 3 ತಿಂಗಳಿಗಿಂತ ಹೆಚ್ಚು ದಿನಗಳ ಕಾಲ ಜನ ಸಂಪರ್ಕದಿಂದ ಪ್ರತ್ಯೇಕವಾಗಿಯೇ ಇದ್ದ ಈ ಭಾಗದ ಜನರು ಹಿಂಡು-ಹಿಂಡಾಗಿ ಇತರ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಇದರ ಪರಿಣಾಮ ತುಂಬಿ ತುಳುಕುತ್ತಿರುವ ಬಸ್ಸುಗಳು, ರೈಲು ಸೇರಿದಂತೆ ಇನ್ನಿತರ ಸಾರಿಗೆಗಳಲ್ಲಿ ಜನರ ನಡುವೆ ಭಾರೀ ಗಲಾಟೆಗಳು ಹಾಗೂ ದೊಂಬಿ ನಡೆಯುತ್ತಿದೆ ಎಂದು ವರದಿಯಾಗಿದೆ.

ಮತ್ತೊಂದೆಡೆ, ಕೊರೋನಾ ಕೇಂದ್ರಿತ ಹುಬೇ ಪ್ರಾಂತ್ಯದ ಜನರನ್ನು ಬಿಟ್ಟುಕೊಳ್ಳಲು ನಿರಾಕರಿಸಿರುವ ಜಿಯಾಂಗ್‌ಕ್ಸಿ ಪ್ರಾಂತ್ಯ, ಉಭಯ ಪ್ರಾಂತ್ಯದ ಗಡಿ ಭಾಗವನ್ನು ಬಂದ್‌ ಮಾಡಿದೆ. ಆದರೆ, ಈ ನಿರ್ಬಂಧವನ್ನು ಉಲ್ಲಂಘಿಸಿ ಜಿಯಾಂಗ್‌ಕ್ಸಿ ಗಡಿ ಪ್ರವೇಶಕ್ಕೆ ಜನರು ಮುಗಿಬಿದ್ದಿದ್ದು, ಈ ವೇಳೆ ಪೊಲೀಸರು ಮತ್ತು ಜನರ ಮಧ್ಯೆ ಮಾರಾಮಾರಿ ಏರ್ಪಟ್ಟಿದೆ. ಈ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ.

ಒಟ್ಟಾರೆ 67ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿದ್ದ ಹುಬೇ ಪ್ರಾಂತ್ಯದಲ್ಲಿ ಕಳೆದ ಒಂದು ವಾರದಲ್ಲಿ ಒಂದೇ ಒಂದು ಕೋವಿಡ್‌-19 ಪ್ರಕರಣ ದಾಖಲಾಗಿದೆ.

ಹುಬೇ ಪ್ರಾಂತ್ಯದ ಮೇಲೆ ಹೇರಲಾಗಿರುವ ನಿಷೇಧಾಜ್ಞೆ ಏಪ್ರಿಲ್‌ 8ರಂದು ಸಂಪೂರ್ಣವಾಗಿ ತೆರವಾಗಲಿದೆ. ಆದರೆ, ಕೊರೋನಾಕ್ಕೆ ತುತ್ತಾಗದೆ ಇರುವವರು ಇತರೆ ಪ್ರದೇಶಗಳಿಗೆ ಹೋಗಬಹುದು ಎಂದು ಸರ್ಕಾರವೇ ಹೇಳಿತ್ತು. ಆದರೆ, ಈ ಜನರನ್ನು ತಮ್ಮ ಪ್ರದೇಶಗಳಿಗೆ ಬಿಟ್ಟುಕೊಂಡರೆ, ತಮ್ಮಲ್ಲೂ ಕೊರೋನಾ ವ್ಯಾಪಿಸುತ್ತದೆ ಎಂಬ ಭೀತಿ ಇತರೆ ಭಾಗದ ಜನರಿಗೆ ಕಾಡುತ್ತಿದೆ. ಹೀಗಾಗಿ, ಹುಬೇ ಪ್ರಾಂತ್ಯದ ಜನರನ್ನು ತಮ್ಮ ಭಾಗಗಳಿಗೆ ಬಿಟ್ಟುಕೊಳ್ಳಲು ಇತರ ಭಾಗದ ಜನ ವಿರೋಧಿಸುತ್ತಿದ್ದಾರೆ.

click me!