ವಿಶ್ವದ ದೊಡ್ಡಣ್ಣ ಈಗ ಕೊರೋನಾ ಕೇಸಲ್ಲೂ ವಿಶ್ವ ನಂ.1: ಅಮೆರಿಕದಲ್ಲಿ 1 ಲಕ್ಷ ಸೋಕಿತರು!

By Kannadaprabha News  |  First Published Mar 29, 2020, 7:54 AM IST

ಅಮೆರಿಕದಲ್ಲಿ 1 ಲಕ್ಷ ದಾಟಿತು ಸೋಂಕಿತರ ಸಂಖ್ಯೆ| ವಿಶ್ವದ ದೊಡ್ಡಣ್ಣ ಈಗ ಕೊರೋನಾ ಕೇಸಲ್ಲೂ ವಿಶ್ವ ನಂ.1| ಕೊರೋನಾ ಕೇಸು 1 ಲಕ್ಷ ದಾಟಿದ ಮೇಲೆ ಎಚ್ಚೆತ್ತ ಟ್ರಂಪ್‌| ಅಮೆರಿಕದಾದ್ಯಂತ ಆಸ್ಪತ್ರೆಗಳ ನಿರ್ಮಾಣ| ಎಲ್ಲ ತುರ್ತು ವ್ಯವಸ್ಥೆಗಳಿಗೆ ಚಾಲನೆ| 1 ಲಕ್ಷ ವೆಂಟಿಲೇಟರ್‌ ಖರೀದಿಸಲು ನಿರ್ಧಾರ


ವಾಷಿಂಗ್ಟನ್‌(ಮಾ.29): ಅಮೆರಿಕದಲ್ಲಿ ಕೊರೋನಾವೈರಸ್‌ ಸೋಂಕಿತರ ಸಂಖ್ಯೆ 1 ಲಕ್ಷ ದಾಟಿದ್ದು, ಸಾವಿನ ಸಂಖ್ಯೆ 1500ನ್ನು ಮೀರಿದೆ. ವೈರಸ್‌ ಸೋಂಕನ್ನು ಆರಂಭದಲ್ಲಿ ಗಂಭೀರವಾಗಿ ಪರಿಗಣಿಸದಿದ್ದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ದಿಢೀರ್‌ ಎಚ್ಚೆತ್ತುಕೊಂಡಿದ್ದು, ಸೇನೆಯ ಸಹಾಯದಿಂದ ದೇಶಾದ್ಯಂತ ಕೊರೋನಾ ರೋಗಿಗಳಿಗಾಗಿ ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಲು ಆದೇಶಿಸಿದ್ದಾರೆ.

ದೇಶದೆಲ್ಲೆಡೆ ಆಸ್ಪತ್ರೆಗಳನ್ನು ನಿರ್ಮಿಸುವ ಹೊಣೆಯನ್ನು ಟ್ರಂಪ್‌ ಅವರು ಆರ್ಮಿ ಕೋರ್‌ ಆಫ್‌ ಎಂಜಿನಿಯರ್‌ಗೆ ವಹಿಸಿದ್ದಾರೆ. ಅದರ ಜೊತೆಗೆ ಸಶಸ್ತ್ರ ಪಡೆಗಳೂ ಸೇರಿದಂತೆ ದೇಶದ ಎಲ್ಲ ತುರ್ತು ಸೇವೆಗಳಿಗೂ ಚಾಲನೆ ನೀಡಿದ್ದು, 1 ಲಕ್ಷ ವೆಂಟಿಲೇಟರ್‌ಗಳನ್ನು ಉತ್ಪಾದಿಸಲು ಅಥವಾ ಖರೀದಿಸಲು ನಿರ್ಧರಿಸಿದ್ದಾರೆ.

Latest Videos

undefined

ಅಮೆರಿಕದ ಪ್ರತಿ ಕುಟುಂಬಕ್ಕೆ .2.5 ಲಕ್ಷ!

ಕೊರೋನಾವೈರಸ್‌ ಸೋಂಕಿನ ವಿರುದ್ಧ ಹೋರಾಡಲು ಹಾಗೂ ಸಮಸ್ಯೆಯಲ್ಲಿರುವ ಅಮೆರಿಕದ ಆರ್ಥಿಕತೆಯನ್ನು ಮೇಲೆತ್ತಲು ಐತಿಹಾಸಿಕ 2 ಲಕ್ಷ ಕೋಟಿ ಡಾಲರ್‌ (150 ಲಕ್ಷ ಕೋಟಿ ರು.) ಆರ್ಥಿಕ ಪ್ಯಾಕೇಜ್‌ಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿದ್ದಾರೆ.

ಇದಕ್ಕೆ ಸಂಬಂಧಿಸಿದ ಕಾಯ್ದೆ ಅಮೆರಿಕದ ಸಂಸತ್ತಿನಲ್ಲಿ ಅಂಗೀಕಾರವಾಗಿದ್ದು, ಈ ಕಾಯ್ದೆಯಡಿ ದೇಶದಲ್ಲಿರುವ ಬಹುತೇಕ ಎಲ್ಲ ಕುಟುಂಬಕ್ಕೆ (4 ಜನ) ತಲಾ 3400 ಡಾಲರ್‌ (ಸುಮಾರು 2.5 ಲಕ್ಷ ರು.) ಹಣ ಲಭಿಸಲಿದೆ. ಜೊತೆಗೆ ಸಣ್ಣ, ಮಧ್ಯಮ ಹಾಗೂ ಬೃಹತ್‌ ಉದ್ದಿಮೆಗಳಿಗೆ ಲಕ್ಷಾಂತರ ಡಾಲರ್‌ ಮೌಲ್ಯದ ನೆರವು ಲಭಿಸಲಿದೆ.

click me!