ನಾನು ಯಾವ ವಿದೇಶಿಗರನ್ನೂ ಭೇಟಿಯಾಗಿಲ್ಲ, ನನ್ನ ಗೆಳೆಯರು, ಕುಟುಂಬದವರು ಎಲ್ಲರೂ ಆರೋಗ್ಯವಾಗಿದ್ದಾರೆ, ನನ್ನ ಸ್ವಂತ ವಾಹನದಲ್ಲೇ ಓಡಾಡಿದ್ದೇನೆ. ನನಗೆಲ್ಲಿಂದ ಕೊರೋನಾ ವೈರಸ್ ಹರಡುತ್ತೆ ಎಂದುಕೊಂಡು ಲಾಕ್‌ಡೌನ್ ಬಳಿಕವೂ ತಿರುಗಾಡುತ್ತಿರುವವರು ಈ ಆಘಾತಕಾರಿ ಸುದ್ದಿ ಓದಲೇಬೇಕು. ಕಾರಣ ಇದೀಗ ಕೊರೋನಾ ಬಲಿ ಪಡೆದದ್ದು ಆರೋಗ್ಯವಾಗಿದ್ದ 21 ವರ್ಷದ ಯುವತಿ.
ಬಕಿಂಗ್‌ಹ್ಯಾಮ್‌ಶೈರ್(ಮಾ.25): ಆಕೆಯ ವಯಸ್ಸು 21, ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ. ಆಸ್ಪತ್ರೆ ದಾಖಲಾಗುವ ಪರಿಸ್ಥಿತಿಯೂ ಎದುರಾಗಿರಲಿಲ್ಲ. ಮನೆಯಲ್ಲಿ ಆರಾಮವಾಗಿ ಇದ್ದ 21 ವರ್ಷದ ಯುವತಿ ಇದೀಗ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾಳೆ. ಇದು ಎಲ್ಲರಿಗೂ ಎಚ್ಚರಿಕೆಯ ಕರೆ ಗಂಟೆ. ನಮ್ಮ ಊರಿಗೆ ಇದುವರೆಗೂ ಯಾವುದೇ ವೈರಸ್ ದಾಳಿ ಮಾಡಿಲ್ಲ, ವಿದೇಶಿಗರೂ ಬಂದಿಲ್ಲ, ನಮ್ಮ ವಾಹನದಲ್ಲೇ ಓಡಾಡುತ್ತಿದ್ದೇವೆ ಎಂದು ಬೀಗುತ್ತಿದ್ದವರೂ ಇನ್ನಾದರೂ ಎಚ್ಚರಿಕೆ ವಹಿಸಬೇಕಾಗಿದೆ.
ಕೊರೋನಾ ನಿಯಂತ್ರಣಕ್ಕೆ ಚೀನಾ ಹೊಸ ಪ್ಲ್ಯಾನ್; ಜನ ಮಾತು ಕೇಳದಿದ್ರೆ ಭಾರತಕ್ಕೂ ಬರುತ್ತೆ!.
ಈ ಘಟನೆ ನಡೆದಿರುವುದು ಇಂಗ್ಲೆಂಡ್‌ನ್ ಬಕಿಂಗ್‌ಹ್ಯಾಮ್‌ಶೈರ್‌ನಲ್ಲಿ. ಕೊರೋನಾ ವೈರಸ್‌ಗೆ ಬಲಿಯಾದ ಯುವತಿ ಹೆಸರು ಕ್ಲೊಯಿ ಮಿಡ್ಲಟನ್. ಕ್ಲೊಯಿ ತಾಯಿ ಡ್ಯಾನಿ ಮಿಡ್ಲಟನ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ದುಃಖವನ್ನು ಹಂಚಿಕೊಂಡಿದ್ದಾರೆ. ಕ್ಲೊಯಿ ತಾಯಿ ಫೇಸ್‌ಬುಕ್‌ನಲ್ಲಿ ಬರೆದಿರುವ ಮೊದಲ ವಾಖ್ಯದಲ್ಲೇ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಕೇವಲ ವೈರಸ್ ಅನ್ನೋ ಆಲೋಚನೆ ನಿಮ್ಮದಾಗಿದ್ದರೆ ತೆಗೆದುಹಾಕಿ. ಕಾರಣ ಇದೇ ಕೊರೋನಾ ವೈರಸ್ ನನ್ನ 21 ವರ್ಷದ ಮಗಳನ್ನು ಬಲಿ ಪಡೆದುಕೊಂಡಿದೆ ಎಂದಿದ್ದಾರೆ.
ನನ್ನ ಪ್ರೀತಿಯ ಹಾಗೂ ಸುಂದರ ಕ್ಲೊಯಿ ಎಲ್ಲರನನ್ನು ನಗು ಮುಖದಿಂದಲೇ ಮಾತನಾಡಿಸುತ್ತಿದ್ದಳು. ನಮ್ಮ ಕುಟುಂಬದ ಅಕ್ಕರೆ ಮಗಳಾಗಿದ್ದ ಕ್ಲೊಯಿ ಕೋವಿಡ್19 ವೈರಸ್‌ಗೆ ಬಲಿಯಾಗಿದ್ದಾಳೆ. ಆಕೆಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಆದರೂ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾಳೆ ಎಂದು ಕ್ಲೊಯಿ ಚಿಕ್ಕಮ್ಮ ಎಮಿಲಿ ಮಿಸ್ಟ್ರಿ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ.
ಈ ನೋವನ್ನು ನಮಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಇನ್ನೂ ನಮಗೆ ನಂಬಲು ಸಾಧ್ಯವಾಗುತ್ತಿಲ್ಲ. ನಾವು ಬೆಚ್ಚಿ ಬಿದ್ದಿದ್ದೇವೆ, ದುಃಖ ತಡೆಯಲು ಸಾಧ್ಯವಾಗುತ್ತಿಲ್ಲ. ವೈರಸ್ ಹರಡುತ್ತಿಲ್ಲ. ಜನರೇ ವೈರಸ್ ಹರಡುತ್ತಿದ್ದಾರೆ. ದಯವಿಟ್ಟು ಸರ್ಕಾರ ಹೇಳುವ ಸೂಚನೆ ಪಾಲಿಸಿ. ದಯವಿಟ್ಟು ಯಾರೂ ಕೂಡ ಮನೆಯಿಂದ ಹೊರಬರಬೇಡಿ. ಕ್ಲೊಯಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಮಿಲಿ ಮಿಸ್ಚ್ರಿ ಹೇಳಿದ್ದಾರೆ.
ಯುಕೆ ಭಾಗದಲ್ಲಿ ಕೊರೋನಾ ವೈರಸ್‌ಗೆ ಬಲಿಯಾದವರ ಸಂಖ್ಯೆ 422ಕ್ಕೇರಿದೆ. ಈಗಾಗಲೇ 8000ಕ್ಕೂ ಅಧಿಕ ಮಂದಿಗೆ ಕೊರೋನಾ ವೈರಸ್ ತಗುಲಿದೆ. ಈಗಾಗಲೇ ಇಂಗ್ಲೆಂಡ್ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್ 3 ವಾರಗಳ ಕಾಲ ಇಂಗ್ಲೆಂಡ್ ಸಂಪೂರ್ಣ ಲಾಕ್‌ಡೌನ್ ಮಾಡಿದ್ದಾರೆ. ಇದು ದೂರದ ಇಂಗ್ಲೆಂಡ್‌ನಲ್ಲಿನ ಘಟನೆ ಎಂದು ಸುಮ್ಮನಾಗಬೇಡಿ. ಹೆಜ್ಜೆ ಹೆಜ್ಜೆಗೂ ಎಚ್ಚರವಿರಲಿ. ದಯವಿಟ್ಟು ಮನೆಯಿಂದ ಹೊರಬರಬೇಡಿ.