ಕೊರೋನಾಗೆ ಬಲಿಯಾದವರಿಗೆ ಸಂತಾಪ, ಸಂಪೂರ್ಣ ಚೀನಾ ಸ್ತಬ್ಧ!

By Suvarna NewsFirst Published Apr 4, 2020, 6:01 PM IST
Highlights

ಚೀನಾದಲ್ಲಿ ಆರಂಭವಾದ ಕೊರೋನಾ ವೈರಸ್ ಇದೀಗ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಹರಡಿ ಆತಂಕ ಸೃಷ್ಟಿಸಿದೆ. ಚೀನಾದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದರೂ ಪ್ರಕರಣಗಳು ವರದಿಯಾಗುತ್ತಿದೆ. ಕೊರೋನಾ ವೈರಸ್‌ಗೆ ಚೀನಾದಲ್ಲಿ 3,300ಕ್ಕಿಂತಲೂ ಹೆಚ್ಚಿನ ಮಂದಿ ಸಾವನ್ನಪ್ಪಿದ್ದಾರೆ. ವೈರಸ್ ಬಲಿಯಾದವರಿಗೆ ಸಂತಾಪ ಸೂಚಿಸಲು ಶನಿವಾರ(ಏ.04)ಸಂಪೂರ್ಣ ಚೀನಾ 3 ನಿಮಿಷ ಸ್ತಬ್ಧವಾಗಿತ್ತು. ವಿಶೇಷ ಸಂತಾಪ ಸೂಚಕದ ವಿವರ ಇಲ್ಲಿದೆ.

ಚೀನಾ(ಏ.04): ಕೊರೋನಾ ವೈರಸ್ ಗಂಭೀರತೆ ಇದೀಗ ವಿಶ್ವದ ಎಲ್ಲಾ ದೇಶಗಳಿಗೆ ಅರಿವಾಗಿದೆ. ವರ್ಷದ ಆರಂಭದಲ್ಲಿ ಚೀನಾದಲ್ಲಿ ಕೊರೋನಾ ವೈರಸ್ ತಾಂಡವ ಆರಂಭಗೊಂಡಿತ್ತು. ವುಹಾನ್‌ನಿಂದ ಆರಂಭಗೊಂಡ ವೈರಸ್ ಮರಣಮೃದಂಗ ಭಾರಿಸಿತು. ಚೀನಾದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 3,300ಕ್ಕಿಂತಲೂ ಅಧಿಕ. ಸದ್ಯ ಚೀನಾ ಚೇತರಿಸಿಕೊಳ್ಳುತ್ತಿದೆ. ಕೊರೋನಾ ವೈರಸ್ ಹತೋಟಿಗೆ ಬಂದಿದೆ. ಈ ವೇಳೆ ಚೀನಾ ಶನಿವಾರ(ಏ.04) ಬೆಳಗ್ಗೆ 10 ಗಂಟೆಗೆ ಕೊರೋನಾಗೆ ಬಲಿಯಾದವರಿಗೆ ವಿಶೇಷವಾಗಿ ಸಂತಾಪ ಸೂಚಿಸಿತು.

ಕೊರೋನಾ ತಾಂಡವ: ಚೀನಾದ ಒಂದು ನಿರ್ಧಾರ, ಉಳಿಯಿತು 7 ಲಕ್ಷ ಜನರ ಪ್ರಾಣ!.

ಶನಿವಾರ ಬೆಳಗ್ಗೆ 10 ಗಂಟೆಗೆ ಸಂಪೂರ್ಣ ಚೀನಾ ಸ್ತಬ್ಧವಾಗಿತ್ತು ಚೀನಾ ಧ್ವಜವನ್ನು ಅರ್ಧ ಏರಿಸಲಾಗಿತ್ತು. 3 ನಿಮಿಷಗಳ ಕಾಲ ಚೀನಾದಲ್ಲಿ ಎಲ್ಲರೂ ತಲೆ ಬಾಗಿ ಮೌನವಾಗಿ ಸಂತಾಪ ಸೂಚಿಸಿದರು. ಈ ವೇಳೆ ಚೀನಾದ ಎಲ್ಲಾ ಸಿಗ್ನಲ್‌ಗಳನ್ನು ರೆಡ್ ಮಾಡಲಾಗಿತ್ತು. ಇನ್ನು ವಾಹನಗಳು ಕೂಡ ಸಂಚಾರ ನಿಲ್ಲಿಸಿತ್ತು. ಇಷ್ಟೇ ಅಲ್ಲ ವಾಹನ ಸತತ 3 ನಿಮಿಷ ಹಾರ್ನ್ ಮೂಲಕ ಸಂತಾಪ ಸೂಚಿಸಿತ್ತು. ಟ್ರೈನ್, ಹಡಗು, ವಿಮಾನ ನಿಲ್ದಾಣದಲ್ಲಿ ಸೈರನ್ ಮೂಲಕ ಸಂತಾಪ ಸೂಚಿಸಲಾಗಿದೆ.

ಸೋಂಕಿತರ ಸಂಖ್ಯೆ 9 ಲಕ್ಷಕ್ಕೆ, ವಿಶ್ವಾದ್ಯಂತ 43000 ಮಂದಿ ಬಲಿ!

ಬೀಜಿಂಗ್‌ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸೇರಿದಂತೆ ಇತರ ನಾಯಕರು 3 ನಿಮಿಷ ಮೌನವಾಗಿ ಚೀನಾ ಧ್ವಜದ ಮುಂದೆ ಸಂತಾಪ ಸೂಚಿಸಿದರು. ಇನ್ನು ಶೋಕದ ಸೂಚಕವಾಗಿ ಎಲ್ಲಾ ನಾಯಕರು ಬಿಳಿ ಹೂವನ್ನು ತಮ್ಮ ವಸ್ತದ ಬಲಭಾಗಕ್ಕೆ ಅಂಟಿಸಿದ್ದರು. 

ಒತ್ತಡಕ್ಕೆ ಮಣಿದ ಚೀನಾ, ಬಾಯ್ಬಿಟ್ಟ ಸತ್ಯ ಕೇಳಿ ಹೌಹಾರಿತು ಇಡೀ ವಿಶ್ವ!

ಶುಕ್ರವಾರ(ಏ.03) ಚೀನಾದಲ್ಲಿ 19 ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿದೆ. ಇನ್ನು 1030 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಚೀನಾದಲ್ಲಿ ಕೊರೋನಾ ವೈರಸ್ ಹತೋಟಿಗೆ ಬಂದಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ನಿಯಮವನ್ನು ಸಡಿಲಗೊಳಿಸಿಲ್ಲ. 

ಇದೀಗ ಭಾರತದಲ್ಲಿ ಸೋಂಕಿತರ ಸಂಖ್ಯೆ 2000 ಗಡಿ ಸಮೀಪಿಸಿದೆ. ಇತ್ತ ಕರ್ನಾಟಕದಲ್ಲಿ 125ರ ಗಡಿ ದಾಟಿದೆ. ಭಾರತವನ್ನು 21 ದಿನಗಳ ವರೆಗೆ ಲಾಕ್‌ಡೌನ್ ಮಾಡಲಾಗಿದೆ. ಆದರೆ ಆದೇಶ ದಿಕ್ಕರಿಸಿ ದೆಹಲಿಯ ಮಸೀದಿಯಲ್ಲಿ ಧಾರ್ಮಿಕ ಸಭೆ ಆಯೋಜಿಸಲಾಗಿತ್ತು. ಇದೀಗ ಇಲ್ಲಿ ಭಾಗವಹಿಸಿದ್ದ 600 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 

click me!