ಲಾಕ್‌ಡೌನ್‌ ಎಫೆಕ್ಟ್‌: ಹಸಿದ ಪ್ರಾಣಿಗಳಿಗೆ ಯುವಕರಿಂದ ಆಹಾರ

By Kannadaprabha News  |  First Published Apr 9, 2020, 7:24 AM IST

ಮನೆ ಮನೆಯಿಂದ ಆಹಾರ ಸಂಗ್ರಹ| ಮೂರು ಹೊತ್ತು ಹಸಿವು ನೀಗುವ ಕಾರ್ಯ| ಹುಬ್ಬಳ್ಳಿಯ ಹೊಸೂರು, ಚನ್ನಮ್ಮ ವೃತ್ತ, ಗೋಕುಲ ರಸ್ತೆ, ವಿದ್ಯಾನಗರ, ತಾಜ್‌ನಗರ, ಹಳೆಹುಬ್ಬಳ್ಳಿ ಪ್ರದೇಶಕ್ಕೆ ತೆರಳಿ ನಾಯಿ, ದನಗಳಿಗೆ ಆಹಾರ ನೀಡುತ್ತಿರುವ ಯುವಕರು|
 


ಮಯೂರ ಹೆಗಡೆ

ಹುಬ್ಬಳ್ಳಿ(ಏ.09): ಕಳೆದ ವಾರ ಲಾಕ್‌ಡೌನ್‌ ಪರಿಸ್ಥಿತಿ ಅರಿಯಲು ಹೊರಟಾಗ ಚನ್ನಮ್ಮ ವೃತ್ತದಲ್ಲಿ ಕೆಲ ಬೀದಿ ನಾಯಿಗಳಿದ್ದವು. ನಮ್ಮ ಬಳಿ ಇದ್ದ ರೊಟ್ಟಿಯನ್ನು ಸುಮ್ಮನೆ ಅವುಗಳತ್ತ ಎಸೆದವು. ರೊಟ್ಟಿ ಕಂಡ ಅವುಗಳ ವರ್ತನೆ ನಿಜವಾಗಿಯೂ ವಿಚಿತ್ರವಾಗಿತ್ತು. ಆ ಗುಂಪಿನಲ್ಲಿ ಒಂದು ರೊಟ್ಟಿಗಾಗಿ ರಾದ್ಧಾಂತವೆ ನಡೆಯಿತು. ಆಗಲೆ ಪ್ರಾಣಿಗಳಿಗೆ ಆಹಾರ ವಿತರಣೆ ಮಾಡುವ ನಿರ್ಧಾರಕ್ಕೆ ಬಂದೆವು.

Tap to resize

Latest Videos

undefined

ನಾಲ್ಕು ದಿನಗಳಿಂದ ಸದ್ದಿಲ್ಲದೆ ನೂರಾರು ಬೀದಿ ಬದಿಯ ಪ್ರಾಣಿಗಳ ಹಸಿವು ನೀಗಿಸುವ ಕಾರ್ಯ ಮಾಡುತ್ತಿರುವ ಯುವ ಪಡೆಯ ಸೌಮ್ಯಾ ಕುಂಬಾರ ತಾವೇಕೆ ಪ್ರಾಣಿಗಳ ನೆರವಿಗೆ ಬಂದಿದ್ದೇವೆ ಎಂಬುದಕ್ಕೆ ನೀಡಿದ ಕಾರಣವಿದು.

 ಕೊರೋನಾ: ಕಿಮ್ಸ್‌ನಲ್ಲಿ ಕೋವಿಡ್‌-19 ಪರೀಕ್ಷಾ ಕೇಂದ್ರ ಆರಂಭ

ಹೌದು, ಇಲ್ಲೊಂದಿಷ್ಟು ಯುವಕರು ಕೊರೋನಾ ಲಾಕ್‌ಡೌನ್‌ ಸಂದಿಗ್ಧ ಸಮಯದಲ್ಲಿ ಸದ್ದಿಲ್ಲದೆ ಪ್ರಾಣಿಗಳ ಸೇವೆಯಲ್ಲಿ ತೊಡಗಿದ್ದಾರೆ. 15-20 ಯುವಕರು ಸೇರಿ ನೂರಾರು ಬೀದಿ ನಾಯಿ, ಹತ್ತಾರು ಬಿಡಾಡಿ ದನಗಳಿಗೆ ಮೂರು ಹೊತ್ತು ಊಟ ನೀಡುತ್ತಿದ್ದಾರೆ. ಶ್ರೀಕಾಂತ ರೆಡ್ಡಿ, ಸೌಮ್ಯಾ ಕುಂಬಾರ, ಇಮ್ಯಾನ್ಯುಯಲ್‌ ಪಠಾರೆ ಹಾಗೂ ಸುಶಾಂತ ಕುಲಕರ್ಣಿ ಎಂಬುವವರು ಈ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಇವರು ತಮ್ಮ ಕೈಲಾದಷ್ಟು ಆಹಾರ ಪದಾರ್ಥಗಳನ್ನು ಸಿದ್ಧಪಡಿಸುತ್ತಿದ್ದಾರೆ. ಅಲ್ಲದೆ, ಇದಕ್ಕಾಗಿ ಅಕ್ಕಪಕ್ಕದ ಸುಮಾರು 20 ಮನೆಗಳವರಿಗೆ ಪ್ರತಿದಿನ ನಿಗದಿಗಿಂತ ಹೆಚ್ಚು ಅಡುಗೆ ಮಾಡಲು ವಿನಂತಿಸಿದ ಈ ತಂಡ ಅವರೆಲ್ಲರಿಂದ ಅಡುಗೆ ಸಂಗ್ರಹ ಮಾಡುತ್ತಿದೆ. ಸುಶಾಂತ ಡ್ಯಾನ್ಸ್‌ ಅಕಾಡೆಮಿ ವಿದ್ಯಾರ್ಥಿಗಳು ತಮ್ಮ ಮನೆಯಿಂದ ಅಡುಗೆಯನ್ನು ತಂದು ಕೊಡುತ್ತಿದ್ದಾರೆ. ಈ ಕಾರ್ಯ ಗಮನಿಸಿದ ಹಲವರು ತಂಡಕ್ಕೆ 50 ರಿಂದ 100 ನೀಡುತ್ತಿದ್ದು, ಅದರಿಂದಲೂ ಆಹಾರವನ್ನು ತಯಾರಿಸುತ್ತಿದ್ದಾರೆ.

ಇವೆಲ್ಲವನ್ನೂ ಸೇರಿಸಿ ದಿನದ ಮೂರು ಹೊತ್ತು ಮೂರ್ನಾಲ್ಕು ವಾಹನಗಳಲ್ಲಿ ಹೊಸೂರು, ಚನ್ನಮ್ಮ ವೃತ್ತ, ಗೋಕುಲ ರಸ್ತೆ, ವಿದ್ಯಾನಗರ, ತಾಜ್‌ನಗರ, ಹಳೆಹುಬ್ಬಳ್ಳಿ ಪ್ರದೇಶಕ್ಕೆ ತೆರಳಿ ನಾಯಿ, ದನಗಳಿಗೆ ಆಹಾರ ನೀಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಇಮ್ಯಾನ್ಯುಯಲ್‌ ಪಠಾರೆ, ಜನತೆ ತಮ್ಮ ಹಸಿವನ್ನು ಹೇಳಿಕೊಳ್ಳಬಹುದು. ಆದರೆ, ಪ್ರಾಣಿಗಳಿಗೆ ಇದು ಸಾಧ್ಯವಿಲ್ಲ. ಚೆನ್ನಮ್ಮ ವೃತ್ತದಲ್ಲಿ ಪ್ರಾಣಿಗಳ ಅವಸ್ಥೆ ಕಂಡ ಬಳಿಕ ಮನುಷ್ಯರಿಗಿಂತ ಇವುಗಳ ಕಷ್ಟ ದೊಡ್ಡದಿದೆ ಎನ್ನಿಸಿತು. ಮರುದಿನವೇ ಎಲ್ಲರೂ ಸೇರಿ ಆಹಾರ ಸಂಗ್ರಹದ ಯೋಜನೆ ಸಿದ್ಧಪಡಿಸಿ ಅದರಂತೆ ಕಾರ್ಯ ಮಾಡುತ್ತಿದ್ದೇವೆ. ಯಾರಾದರೂ ಕೇವಲ ಒಂದು ಬೌಲ್‌ ಅನ್ನ ನೀಡಿದರೂ ಅದನ್ನೂ ಸ್ವೀಕರಿಸುತ್ತಿದ್ದೇವೆ. ಪ್ರಾಣಿಗಳಿಗೆ ಮಾತ್ರವಲ್ಲದೆ ಕೆಲವಡೆ ಜನರಿಗೂ ಊಟ ನೀಡುತ್ತಿದ್ದೇವೆ ಎಂದರು.

ಸಾಕಷ್ಟು ಬಾರಿ ಹಸಿವಿಂದ ಬಳಲುವ ಪ್ರಾಣಿಗಳನ್ನು ಕಂಡಿದ್ದೇವೆ. ಆದರೆ ಈ ಬಾರಿ ಇವುಗಳ ಸ್ಥಿತಿ ಕೊಂಚ ಭಿನ್ನವಾಗಿದೆ. ಮನುಷ್ಯರಿಗೆ ಆಹಾರ ಪೂರೈಸುವುದು ಎಷ್ಟು ಮುಖ್ಯವೊ ಅದೇ ರೀತಿ ಪ್ರಾಣಿಗಳಿಗೂ ಊಟ ನೀಡಬೇಕಿದೆ ಎಂದು ಸೋಶಿಯಲ್‌ ಎಂಟರ್‌ಪ್ರೆನರ್‌ ಸೌಮ್ಯಾ ಕುಂಬಾರ ಅವರು ಹೇಳಿದ್ದಾರೆ.
 

click me!