ಮನೆಗೆಲಸದವರ, ಸಹಾಯಕರ ಮತ್ತು ವಾಹನ ಚಾಲಕರು ಸೇರಿದಂತೆ ಇನ್ನಿತರ ಅಗತ್ಯ ಕೆಲಸದವರ ನೆರವಿಗೆ ನಿಲ್ಲಿ ಎಂದು ಸಿಎಂ ಯಡಿಯೂರಪ್ಪ ಉದ್ಯೋಗದಾತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರು, (ಏ.04): ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೆಲಸಕ್ಕೆ ಬಾರಲು ಸಾಧ್ಯವಾಗದ ಕಾರ್ಮಿಕರ ವೇತನವನ್ನು ಅವರ ಮಾಲೀಕರು ಸದ್ಯದ ಪರಿಸ್ಥಿತಿಯಲ್ಲಿ ಕಡಿತ ಮಾಡಬಾರದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಕೊರೋನಾ ಸೋಂಕು ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವುದರಿಂದ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದ ಮನೆಗೆಲಸದವರು, ಸಹಾಯಕರು ಮತ್ತು ವಾಹನ ಚಾಲಕರಿಗೆ ಮಾಲೀಕರು ವೇತನ ಕಡಿತ ಮಾಡಬೇಡಿ ಎಂದು ಬಿಎಸ್‌ವೈ ಟ್ವೀಟ್ ಮೂಲಕ ವಿನಂತಿ ಮಾಡಿಕೊಂಡಿದ್ದಾರೆ.
ಆರ್ಥಿಕ ಸಂಕಷ್ಟದ ಈ ಸಮಯದಲ್ಲಿ ಕಾರ್ಮಿಕರಿಗೆ, ಕೂಲಿ ಕೆಲಸದವರಿ, ಬಡವರಿಗೆ ಸಹಾನುಭೂತಿಯಿಂದ ನೆರವಾಗಿ ಎಂದು ಮಾಲೀಕರನ್ನು ಮುಖ್ಯಮಂತ್ರಿಗಳು ಕೋರಿಕೊಂಡಿದ್ದಾರೆ. ತಿಂಗಳ ಮೊದಲ ವಾರ ಬಂತೆಂದರೆ ಸಾಕು ಪ್ರತಿಯೊಬ್ಬರಿಗೂ ತಮ್ಮ ಸಂಬಳದ್ದೇ ಚಿಂತೆ. ಆದ್ರೆ, ಈ ಬಾರಿ ಕೊರೋನಾ ವೈರಸ್ ಎಫೆಕ್ಟ್‌ನಿಂದ ಇಡೀ ದೇಶವೇ ಲಾಕ್‌ಡೌನ್ ಇದ್ದು, ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಡ ಕಾರ್ಮಿಕ ಹೊಟ್ಟೆ ತುಂಬಿಸಲು ನಾನಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಇದೇ ಏಪ್ರಿಲ್ 14ರಂದು ಲಾಕ್‌ಡೌನ್ ಮುಗಿಯಲಿದ್ದು, ನಂತರ ಏನಾಗುತ್ತೋ ಎನ್ನುವುದನ್ನು ಕಾದುನೋಡಬೇಕಿದೆ.