ಸಿಎಂ ಪರಿಹಾರ ನಿಧಿಗೆ ತಿಂಗಳ ವೇತನ ದೇಣಿಗೆ: ಪೊಲೀಸ್‌ ಅಧಿಕಾರಿಗಳ ಹೃದಯವಂತಿಕೆ

By Kannadaprabha NewsFirst Published Apr 6, 2020, 1:16 PM IST
Highlights

ಯಾದಗಿರಿ ಜಿಲ್ಲೆಯ ಸುರಪುರದ ಡಿವೈಎಸ್ಪಿ ಸೇರಿದಂತೆ ಅಧಿಕಾರಿಗಳ ಹೃದಯವಂತಿಕೆ| ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ ಪೊಲೀಸ್‌ ಅಧಿಕಾರಿಗಳು| ಜನರಿಗೆ ನೆರವಾಗಲೆಂದು ಖಾಕಿ ಪಡೆಯ ಈ ಅಧಿಕಾರಿಗಳು ಮಾಡಿದ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ|

ನಾಗರಾಜ ನ್ಯಾಮತಿ/ಮಲ್ಲಯ್ಯ ಪೋಲಂಪಲ್ಲಿ

ಸುರಪುರ/ಶಹಾಪುರ(ಏ.06): ಪೊಲೀಸರು ಅಂದ್ರೆ ಲಾಠಿ ತೊಗೊಂಡು ಹಿಗ್ಗಾಮುಗ್ಗಾ ಬಡೀತಾರೆ. ಪೊಲೀಸರು ಅಂದ್ರೆ ಬರೀ ಅವಾಚ್ಯ ಶಬ್ದಗಳಿಂದ ನಿಂದಿಸ್ತಾರೆ ಅನ್ನೋ ಸಾರ್ವಜನಿಕರ ಆರೋಪಗಳ ಮಧ್ಯೆ, ಯಾದಗಿರಿ ಜಿಲ್ಲೆಯ ನಾಲ್ವರು ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿ, ಖಾಕಿಯಲ್ಲಿಯೂ ಮಾನವೀಯತೆ ಅಡಗಿದೆ ಅನ್ನೋದನ್ನ ತೋರಿಸಿದಂತಾಗಿದೆ.

ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಹಗಲಿರುಳೂ ದುಡಿಯುತ್ತಿರುವ ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕರ್ತವ್ಯಪ್ರಜ್ಞೆಯಿಂದಾಗಿ ಜನಸಾಮಾನ್ಯರಲ್ಲಿ ಕೊರೋನಾ ದುಗುಡ ಭಾಗಶ: ಕಡಿಮೆಯಾದಂತಾಗಿದೆ.

ಕಲಬುರಗಿಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್‌ ಪ್ರಕರಣ ಪತ್ತೆ

ಇಂತಹ ಸಂದರ್ಭದಲ್ಲಿ, ಕಷ್ಟದಲ್ಲಿರುವ ಜನರ ಸಹಾಯಕ್ಕಾಗಿ ಸಿಎಂ ಪರಿಹಾರ ನಿಧಿಗೆ ಜಿಲ್ಲೆಯ ಸುರಪುರದ ಡಿವೈಎಸ್ಪಿ ವೆಂಕಟೇಶ್, ವೃತ್ತ ಆರಕ್ಷಕ ನಿರೀಕ್ಷಕ ಸಾಹೇಬಗೌಡ, ಶಹಾಪುರದ ಗ್ರಾಮೀಣ ಸಿಪಿಐ ಶ್ರೀನಿವಾಸ ಹಾಗೂ ಭೀಮರಾಯನಗುಡಿಯ ಪಿಎಸೈ ರಾಜಕುಮಾರ್ ಜಾಮಗೊಂಡ ತಮ್ಮ ಒಂದು ತಿಂಗಳ (ಮಾರ್ಚ್) ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ.

ಕೊರೋನಾ ವೈರಸ್ ದೇಶ ಹಾಗೂ ರಾಜ್ಯದ ಜನತೆಯನ್ನು ತೀವ್ರ ಸಂಕಷ್ಟಕ್ಕೀಡು ಮಾಡಿದೆ. ಇದರಿಂದಾಗಿ ದುಡಿಯುವ ವರ್ಗಕ್ಕೆ ಉದ್ಯೋಗ ಗಳಿಲ್ಲದೆ, ಆಹಾರ ನೀರು ಔಷಧ ಗಳಿಗೆ ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಮೊದಲೇ ಪ್ರವಾಹದಿಂದ ನನಗಿದ್ದ ನಾಡಿನ ರೈತರು, ಕೂಲಿ ಕಾರ್ಮಿಕರನ್ನು ಸಹ ಈ ವೈರಸ್ ಕಂಗೆಡುವಂತೆ ಮಾಡಿದೆ. ಈ ಕಷ್ಟದ ಸಮಯದಲ್ಲಿ ಜನರಿಗೆ ನೆರವಾಗಲೆಂದು ಖಾಕಿ ಪಡೆಯ ಈ ಅಧಿಕಾರಿಗಳು ಮಾಡಿದ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ.

ರಾಜ್ಯ ಸರ್ಕಾರಿ ನೌಕರರ ಮಾರ್ಚ್‌ ತಿಂಗಳ ವೇತನದಲ್ಲಿ ಒಂದು ದಿನದ ವೇತನವನ್ನು ಕಟಾವು ಮಾಡಿ ಮಾನ್ಯ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಜಮಾ ಮಾಡುವ ಬಗ್ಗೆ ಅಭಿಪ್ರಾಯವನ್ನು ತಿಳಿಸಲು ಸೂಚಿಸಿದ್ದರ ಪ್ರಯುಕ್ತ, 2020ರ ಮಾರ್ಚ್ ಮಾಹೆಯ ವೇತನವನ್ನು ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಮಾ ಮಾಡಿಕೊಳ್ಳುವಂತೆ ಈ ಅಽಕಾರಿಗಳು ತಮ್ಮ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸರ್ಕಾರದ ಜೊತೆಗೆ ಅಽಕಾರಿಗಳೂ ಸಹ ಕೈಜೋಡಿಸಬೇಕು. ಹನಿ ಹನಿಗೂಡಿದರೆ ಹಳ್ಳ ಎಂಬ ಮಾತಿನ ಹಾಗೆ, ಪ್ರತಿಯೊಬ್ಬರು ನೆರವಾದರೆ ಕೊರೋನಾ ರೋಗ ತಡೆಗಟ್ಟಲು ಸಾಧ್ಯ. ನಾವು ಮಾಡುವ ಕಾರ್ಯ ಮತ್ತೊಬ್ಬರಿಗೆ ಪ್ರೇರಿತವಾದರೆ ಸಂತೋಷವೆನಿಸುತ್ತದೆ.
 

click me!