ಕೊರೋನಾ ತಡೆಗಟ್ಟುವಲ್ಲಿ ಪ್ರಾಣವನ್ನೇ ಪಣಕ್ಕಿಟ್ಟವರಿಗೆ ಗ್ರಾಮಸ್ಥರಿಂದ ಪುಷ್ಪವೃಷ್ಟಿ| ಆಶಾ ಕಾರ್ಯಕರ್ತೆಯರಿಗೆ ಯಾದಗಿರಿ ಸಮೀಪದ ಬೆಳಗೇರಾ ಗ್ರಾಮಸ್ಥರ ಗೌರವ ಸಲ್ಲಿಕೆ| ಜನರಲ್ಲಿ ಅರಿವು ಮೂಡಿಸುತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ಕೊರೋನಾ ವಿರುದ್ಧದ ಹೋರಾಟದ ಸೇನಾನಿಗಳನ್ನು ಗೌರವಿಸಬೇಕು|
ಯಾದಗಿರಿ(ಏ.05): ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮನೆ ಮನೆ ಜಾಗೃತಿಗೆ ಮುಂದಾಗಿರುವ ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ ಪ್ರಕರಣಗಳು ಅವರನ್ನು ಮಾನಸಿಕವಾಗಿ ಜರ್ಝರಿತಗೊಳಿಸಿದ್ದರೆ, ಯಾದಗಿರಿಯ ಸಮೀಪದ ಬೆಳಗೇರಾ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಆಗಮಿಸಿದ್ದ ಆಶಾ ಕಾರ್ಯಕರ್ತೆಯರಿಗೆ ಹೂಮಳೆ ಸುರಿಸಿ ಗೌರವ ಸಲ್ಲಿಸಿದ ಘಟನೆ ಶನಿವಾರ ನಡೆದಿದೆ.
ಕೊರೋನಾ ಮುಂಜಾಗ್ರತಾ ಕ್ರಮವಾಗಿ ಅರಿವು ಮೂಡಿಸುವ ಕಾರ್ಯಕ್ಕೆಂದು ಎಂದಿನಂತೆ ಬೆಳಗೇರಾ ಗ್ರಾಮಕ್ಕೆ ತೆರಳಿದ್ದ ಆಶಾ ಕಾರ್ಯಕರ್ತೆಯರಿಗೆ ಅಚ್ಚರಿ ಕಾದಿತ್ತು. ಗ್ರಾಮದೊಳಗೆ ಪ್ರವೇಶಿಸುತ್ತಲೇ ಅಲ್ಲಿನ ಗ್ರಾಮಸ್ಥರು ಮನೆಯಿಂದ ಹೊರಬಂದು ಎಲ್ಲರ ಮೇಲೆ ಹೂಗಳ ಸುರಿಸಿ ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಅಭಿನಂದಿಸಿದರು. ಇಡೀ ಗ್ರಾಮದ ತುಂಬೆಲ್ಲ ಅವರನ್ನು ಆತ್ಮೀಯವಾಗಿ ಇದೇ ರೀತಿ ಬರಮಾಡಿಕೊಳ್ಳಲಾಯಿತು.
ವದಂತಿಗಳಿಗೆ ಕಿವಿಗೊಡಬೇಡಿ: ಕೊರೋನಾ ಆತಂಕದ ಮಧ್ಯೆ ಸುಳ್ಳು ಸುದ್ದಿಗಳದ್ದೇ ಕಾರುಬಾರು!
ಕೊರೋನಾ ಸೋಂಕು ತಡೆಗೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹಳ್ಳಿ ಹಳ್ಳಿಗಳಿಗೆ ತೆರಳಿ, ಜನರಲ್ಲಿ ಅರಿವು ಮೂಡಿಸುತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ಕೊರೋನಾ ವಿರುದ್ಧದ ಹೋರಾಟದ ಸೇನಾನಿಗಳನ್ನು ಗೌರವಿಸಬೇಕು. ಬೆಂಗಳೂರು ಹಾಗೂ ಮತ್ತಿತರೆ ಕಡೆಗಳಲ್ಲಿ ಆಶಾ ಕಾರ್ಯಕರ್ತೆಯರ ಹಾಗೂ ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳು ಇವರ ಆತ್ಮಸ್ಥೈರ್ಯ ಕುಗ್ಗಿಸಿದೆ. ಇಂತಹ ಸಂದರ್ಭಗಳಲ್ಲಿ ಅವರಿಗೆ ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಲಾಯಿತು ಎಂದು ಗ್ರಾಮದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಂಕರ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಗ್ರಾಮದೊಳಗೆ ಬಂದಾಗ ನಮ್ಮೆಲ್ಲರ ಮೇಲೆ ಹೂಗಳು ಬಿದ್ದಾಗ ಆಶ್ಚರ್ಯ ಎನಿಸಿತು. ಆದರೆ, ಇಡೀ ಹಳ್ಳಿಯಲ್ಲೆಲ್ಲ ನಮಗೆ ಸಿಕ್ಕ ಗೌರವ ಸಮಾಧಾನ ಮೂಡಿಸಿ, ನಮ್ಮ ಕೆಲಸದ ಮೇಲಿನ ಗೌರವ ಇಮ್ಮಡಿಯಾಯಿತು ಎಂದು ಗ್ರಾಮದ ಆಶಾ ಕಾರ್ಯಕರ್ತೆ ಭೀಮವ್ವ ಕನ್ನಡಪ್ರಭ’ದೆದುರು ಹರ್ಷ ವ್ಯಕ್ತಪಡಿಸಿದರು.
ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದಿರುವಂತಹ ಘಟನೆಗಳ ಈ ಸಂದರ್ಭದಲ್ಲಿ ಬೆಳಗೇರಾ ಗ್ರಾಮದಲ್ಲಿ ನಡೆದುರುವ ಹೂಮಳೆ ಸ್ವಾಗತ ನಿಜಕ್ಕೂ ಸಂತಸ ಮೂಡಿಸಿದೆ. ಇಂತಹ ಘಟನೆಗಳು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಿದೆ ಎಂದು ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಪ್ರಮುಖರಾದ ಡಿ. ಉಮಾದೇವಿ ಸಂತಸ ವ್ಯಕ್ತಪಡಿಸಿದರು.