ಭಾರತ್‌ ಲಾಕ್‌ಡೌನ್‌: 'ಬೇರೆ ರಾಜ್ಯದಲ್ಲಿರುವ ಕನ್ನಡಿಗರ ನೆರವಿಗೆ ಮನವಿ'

By Kannadaprabha News  |  First Published Apr 1, 2020, 12:00 PM IST

ಸೂಕ್ತ ವಸತಿ, ಆಹಾರ, ನೀರಿನ ಸೌಲಭ್ಯ ಕಲ್ಪಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಕೋರಿಕೆ: ಡಿಸಿ ವೈ.ಎಸ್‌. ಪಾಟೀಲ| ಕರ್ನಾಟಕ ರಾಜ್ಯ ಸರ್ಕಾರಕ್ಕೂ ಈ ಕುರಿತು ಪತ್ರ ಬರೆಯಲಾಗಿದೆ|


ವಿಜಯಪುರ(ಏ.01): ಗೋವಾ ಹಾಗೂ ಮಹಾರಾಷ್ಟ್ರಗಳಿಗೆ ಜಿಲ್ಲೆಯಿಂದ ವಲಸೆ ಹೋಗಿರುವ ಜನರಿಗೆ ಸೂಕ್ತ ವಸತಿ, ಆಹಾರ, ನೀರಿನ ಸೌಲಭ್ಯ ಕಲ್ಪಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಹೇಳಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೋವಿಡ್‌-19 ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶ್ಯಾದ್ಯಂತ ಸರ್ಕಾರ ಲಾಕ್‌ಡೌನ್‌ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಜಿಲ್ಲೆಯಿಂದ ವಲಸೆ ಹೋಗಿರುವ ಜನರ ಬಗ್ಗೆ ಗಮನಕ್ಕೆ ಬಂದಿದ್ದು, ಅಂತಹವರಿಗೆ ವಸತಿ ಮತ್ತು ಆಹಾರದ ಸೌಲಭ್ಯ ಕಲ್ಪಿಸಲು ಇಗಾಗಲೇ ಆಯಾ ಜಿಲ್ಲಾಧಿಕಾರಿಗಳಿಗೆ ಕೋರಲಾಗಿದ್ದು, ಕರ್ನಾಟಕ ರಾಜ್ಯ ಸರ್ಕಾರಕ್ಕೂ ಈ ಕುರಿತು ಪತ್ರ ಬರೆಯಲಾಗಿದೆ ಎಂದರು.

Tap to resize

Latest Videos

ಕೊರೋನಾ ಆತಂಕ: 'ಒತ್ತಾಯಪೂರ್ವಕವಾಗಿ ಮನೆ ಬಾಡಿಗೆ ಕೇಳಿದ್ರೆ ನಿರ್ದಾಕ್ಷಿಣ್ಯ ಕ್ರಮ'

ಈಗಾಗಲೆ ಈ ಕುರಿತು ಸೂಕ್ತ ನಿರ್ವಹಣೆಗೆ ರಾಜ್ಯ ನೋಡೆಲ್‌ ಅಧಿಕಾರಿಗಳನ್ನು ನಿಯೋಜಿಸಿದ ಬಗ್ಗೆ ಗಮನಕ್ಕೆ ಬಂದಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಲ್ಲ ಗಡಿಗಳಲ್ಲಿ ಪ್ರಯಾಣಿಕರಿಗೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಆಯಾ ಸ್ಥಳೀಯ ಪ್ರಾಧಿಕಾರಿಗಳೇ ಇಂತಹವರ ಬಗ್ಗೆ ಸೂಕ್ತ ನಿಗಾ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ನಿಷೇಧಾಜ್ಞೆಯಿಂದ ಆಹಾರ, ನೀರಿಗಾಗಿ ತೊಂದರೆ ಪಡುವುದನ್ನು ಮನಗಾಣಿಸಿ ಜಿಲ್ಲೆಯಲ್ಲಿರುವ ಅಲೆಮಾರಿ ಜನಾಂಗದವರು ಸೂಕ್ತ ಮಾಹಿತಿ ಸಂಗ್ರಹಿಸಿ ಮಹಾನಗರ ಪಾಲಿಕೆ ಆಯುಕ್ತರು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಹಸೀಲ್ದಾರ್‌ರು ಆಹಾರ, ಕುಡಿಯುವ ನೀರು, ದವಸ ಧಾನ್ಯಗಳನ್ನು ಏ.14ರ ವರೆಗೆ ಪೂರೈಸಲು ಸೂಚಿಸಲಾಗಿದ್ದು, ಯಾವುದೇ ರೀತಿಯಲ್ಲಿ ದೂರು ಬರದಂತೆ ಎಚ್ಚರಿಕೆ ವಹಿಸಲು ಸಹ ಸೂಚಿಸಲಾಗಿದೆ ಎಂದರು.

ಅರ್ಹ ಬಿಪಿಎಲ್‌ ಕುಟುಂಬಗಳಿಗೆ ಏ.4 ಅಥವಾ 5 ರಿಂದ ಬೇಳೆಕಾಳು ಹಾಗೂ ಧವಸಧಾನ್ಯಗಳ ವಿತರಣೆಗೆ ಸೂಚಿಸಲಾಗಿದೆ. ಗ್ರಾಮಗಳ ವ್ಯಾಪ್ತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ನಿರ್ವಹಿಸಲು ಗ್ರಾಮಮಟ್ಟದ ಸಮಿತಿಗಳಿಗೆ ಜವಾಬ್ದಾರಿ ನೀಡಲಾಗಿದ್ದು, ಸಾರ್ವಜನಿಕರು ಕೂಡಾ ಗುಂಪು-ಗುಂಪಾಗಿ, ಜನಸಂದಣಿಯಿಂದ ಪಡೆಯದೆ ಅಂತರ ಕಾಯ್ದುಕೊಂಡು ಸಹಕರಿಸಬೇಕು ಎಂದು ತಿಳಿಸಿದರು.

ನಿಜಾಮುದ್ದೀನ್‌ಗೆ ತೆರಳಿದ್ದವರು ಕೂಡಲೇ ತಿಳಿಸಿ, ಇಲ್ಲಿದೆ ಸಹಾಯವಾಣಿ ಸಂಖ್ಯೆ

ಪಲ್ಸ್‌ ಪೋಲಿಯೋ ಮಾದರಿಯಲ್ಲಿ ನಗರ ಪಟ್ಟಣಗಳ ಅತಿ ಹೆಚ್ಚು ಅಪಾಯಕಾರಿ ವಲಯಗಳನ್ನು ಗುರುತಿಸಿ ಕೋವಿಡ್‌-19 ಪ್ರಭಾವಿತ ಜಿಲ್ಲೆ ಹಾಗೂ ರಾಜ್ಯಗಳಿಂದ ಆಗಮಿಸಿರುವವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಅದರಂತೆ ಗ್ರಾಮಗಳಲ್ಲಿ ಮಾಹಿತಿ ಸಂಗ್ರಹಣೆಗೆ ಕ್ರಮಕೈಗೊಳ್ಳಲಾಗಿದೆ ಎಂದರು.

ಜಿಪಂ ಸಿಇಒ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಮುಕುಂದ ಗಲಗಲಿ, ಜಿಲ್ಲಾ ಆಸ್ಪತ್ರೆ ಸರ್ಜನ್‌ ಶರಣಪ್ಪ ಕಟ್ಟಿ, ಆಹಾರ ಇಲಾಖೆ ಜಂಟಿ ನಿರ್ದೇಶಕಿ ಕುಮಾರಿ ಸುರೇಖಾ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಮಲ್ಲನಗೌಡ ಬಿರಾದಾರ, ಕುಷ್ಟರೋಗ ನಿಯಂತ್ರಾಧಿಕಾರಿ ಸಂಪತಕುಮಾರ ಗುಣಾರೆ, ಡಾ.ಧಾರವಾಡಕರ, ಲಕ್ಕಣ್ಣವರ್‌, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಪ್ರಾಣೇಶ ಜಾಹಗೀರದಾರ ಸೇರಿದಂತೆ ಮುಂತಾದವರು ಇದ್ದರು.
 

click me!