ಕೃಷಿ ಚಟುವಟಿಕೆಗಳಿಗೆ ನಿರ್ಭಂದವಿಲ್ಲ: ಡಿಸಿ ವೈ. ಎಸ್ ಪಾಟೀಲ್ ಸ್ಪಷ್ಟಣೆ| ಗುಂಪು-ಗುಂಪಾಗಿ ಕೃಷಿ ಚಟುವಟಿಕೆ ನಡೆಸಲು ನಿರ್ಬಂಧ| ಕೃಷಿ ಉತ್ಪನ್ನ ಮಾರಾಟ ಕೇಂದ್ರಗಳಲ್ಲಿಯೂ ಸಾಮಾಜಿಕ ಅಂತರದೊಂದಿಗೆ ಚಟುವಟಿಕೆಗಳನ್ನು ನಿರ್ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ|
ವಿಜಯಪುರ(ಏ.01): ಜಿಲ್ಲಾದ್ಯಂತ ಯಾವುದೇ ರೀತಿಯ ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ಇರುವುದಿಲ್ಲ. ಕೃಷಿ ಬೆಳೆಗಳ ಹಾಗೂ ತೋಟಗಾರಿಕಾ ಹಣ್ಣು ಹಂಪಲುಗಳ ಮಾರಾಟ, ಖರೀದಿ ಮತ್ತು ವಹಿವಾಟಿಗೆ ಯಾವುದೇ ರೀತಿಯಲ್ಲಿ ನಿರ್ಬಂಧ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ವೈ. ಎಸ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆಯ ನಡೆಸಿದ ಅವರು, ಕೃಷಿ ಚಟುವಟಿಕೆಗೆ ಯಾವುದೇ ನಿರ್ಬಂಧ ಇಲ್ಲ. ಆದರೂ ಕೂಡಾ ಗುಂಪು-ಗುಂಪಾಗಿ ಕೃಷಿ ಚಟುವಟಿಕೆ ನಡೆಸಲು ನಿರ್ಬಂಧಿಸಲಾಗಿದೆ. ಕೃಷಿ ಉತ್ಪನ್ನ ಮಾರಾಟ ಕೇಂದ್ರಗಳಲ್ಲಿಯೂ ಸಾಮಾಜಿಕ ಅಂತರದೊಂದಿಗೆ ಚಟುವಟಿಕೆಗಳನ್ನು ನಿರ್ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಬಾಡಿಗೆ ವಸೂಲಿಗಾರರ ವಿರುದ್ಧ ಕ್ರಮ:
ಕೋವಿಡ್-19 ಪರಿಸ್ಥಿತಿಯ ದುರುಪಯೋಗ ಪಡೆಸಿಕೊಂಡು ಯಾರಾದರು ಒತ್ತಾಯಪೂರ್ವಕವಾಗಿ ಮನೆ ಬಾಡಿಗೆ ವಸೂಲಿ ಹಾಗೂ ಮನೆ ಖಾಲಿಗೆ ಸೂಚಿಸಿದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಅಂತಹವರ ಬಗ್ಗೆ ದೂರುಗಳಿದ್ದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರಬಹುದಾಗಿದೆ ಎಂದು ತಿಳಿಸಿದರು.
ಲಾಕ್‌ಡೌನ್: 2 ತಿಂಗಳ ರೇಷನ್ ವಿತರಣೆ, ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆವರೆಗೆ ಪಡೆಯಲು ಅವಕಾಶ'
ಲಾಕ್‌ಡೌನ್ ಪರಿಣಾಮಕಾರಿ ಅನುಷ್ಠಾನದ ಉದ್ದೇಶದಿಂದ ಸಾರ್ವಜನಿಕರು ಹೊರಬರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸಾರ್ವಜನಿಕರು ಕೂಡಾ ಅಗತ್ಯ ವಸ್ತುಗಳು ಹಾಗೂ ತರಕಾರಿ, ಹಣ್ಣು, ಹಾಲು ಖರೀದಿಸಲು ದ್ವಿಚಕ್ರವಾಹನ ಬಳಸಿ ಹೊರಗೆ ಬರಬಾರದು. ಮನೆ ಮನೆಗೆ ಬರುವಂತಹ ತಳ್ಳುವ ಗಾಡಿಗಳ ಮೂಲಕ ಖರೀದಿ ಮಾಡುವಂತೆ ಸೂಚಿಸಲಾಗಿದೆ. ಈಗಾಗಲೇ ನಗರದಾದ್ಯಂತ 550 ತಳ್ಳುವ ಗಾಡಿಗಳಿಗೆ ಹಾಗೂ ಹಾಪ್‌ಕಾಮ್ಸ್ ವಾಹನಗಳಿಗೆ ಅನುಮತಿ ನೀಡಲಾಗಿದೆ. ಪೊಲೀಸ್ ಇಲಾಖೆಯಿಂದ ದ್ವಿಚಕ್ರ ವಾಹನ ವಶಕ್ಕೆ ಸೂಚಿಸಲಾಗಿದೆ ಎಂದರು.