ವಿದೇಶಕ್ಕೆ ಹೋಗಿಲ್ಲ, ಸೋಂಕು ಯಾರಿಂದ ಬಂತು ಮಾಹಿತಿ ಇಲ್ಲ: ರಾಜ್ಯದಲ್ಲಿ 3ನೇ ಹಂತ 2ನೇ ಕೇಸ್!

By Kannadaprabha NewsFirst Published Mar 28, 2020, 7:06 AM IST
Highlights

3ನೇ ಹಂತದ ಸೋಂಕಿಗೆ ಶಿರಾ ವೃದ್ಧ ಬಲಿ!| ವಿದೇಶಕ್ಕೆ ಹೋಗಿಲ್ಲ, ಸೋಂಕು ಯಾರಿಂದ ಬಂತು ಎಂಬ ಬಗ್ಗೆ ಮಾಹಿತಿಯೇ ಇಲ್ಲ| ದಿಲ್ಲಿಗೆ ರೈಲಲ್ಲಿ ಹೋಗಿ ಬಂದು, ಬಸ್ಸಲ್ಲಿ ಪ್ರಯಾಣಿಸಿದ್ದ| 3ನೇ ಹಂತದ 2ನೇ ಕೇಸ್‌| ಸರ್ಕಾರಕ್ಕೆ ತಲೆನೋವು

ತುಮಕೂರು(ಮಾ.28): ವಿದೇಶಕ್ಕೆ ಹೋಗದಿದ್ದರೂ, ಅನಾಮಿಕ ಕೊರೋನಾ ಬಾಧಿತರಿಂದ ಸೋಂಕು ಹಬ್ಬಿದ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗಲು ಆರಂಭವಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಮೂರನೇ ಹಂತದ ಸೋಂಕು (ಸಮುದಾಯಕ್ಕೆ ಹರಡುವುದು) ಹರಡುತ್ತಿರುವ ಆತಂಕ ತೀವ್ರಗೊಂಡಿದೆ. ಗುರುವಾರವಷ್ಟೇ ನಂಜನಗೂಡಿನ ಔಷಧ ಕಂಪನಿ ಸಿಬ್ಬಂದಿಯೊಬ್ಬರಿಗೆ ಇದೇ ರೀತಿ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿತ್ತು, ಇದೀಗ ಮೂರನೇ ಹಂತದ ಸೋಂಕಿಗೆ ಶಿರಾ ಮೂಲದ 65 ವರ್ಷದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.

ಧರ್ಮ ಪ್ರಚಾರಕರಾಗಿದ್ದ ಇವರು ಇತ್ತೀಚೆಗಷ್ಟೇ ರೈಲಿನಲ್ಲಿ ದೆಹಲಿಗೆ ಹೋಗಿ ಬಂದಿದ್ದರು. ವಿಶೇಷವೆಂದರೆ ಇತ್ತೀಚೆಗೆ ವಿದೇಶ ಪ್ರಯಾಣಕ್ಕೆ ಹೋಗಿ ಬಂದ ಕುಟುಂಬ ಸದಸ್ಯರೊಂದಿಗಾಗಲೀ, ವಿದೇಶ ಪ್ರಯಾಣ ಮಾಡಿದ್ದ ಆತ್ಮೀಯರೊಂದಿಗಾಗಲಿ ಯಾವುದೇ ಸಂಪರ್ಕವನ್ನೇ ಹೊಂದಿರಲಿಲ್ಲ. ಆದರೂ ಈ ವ್ಯಕ್ತಿ ಸೋಂಕಿಗೆ ಬಲಿಯಾಗಿರುವುದು ತೀವ್ರ ಆತಂಕ ಸೃಷ್ಟಿಸಿದೆ. ಈ ವ್ಯಕ್ತಿಗೆ ಕೊರೋನಾ ತಗುಲಿದ್ದು ಹೇಗೆ ಎನ್ನುವುದನ್ನು ಪತ್ತೆಹಚ್ಚುವುದೇ ಆರೋಗ್ಯ ಇಲಾಖೆಗೆ ಈಗ ಸವಾಲಾಗಿ ಪರಿಣಮಿಸಿದೆ.

ರೈಲಲ್ಲಿ ತೆರಳಿದ್ದರು: ಮಾ.5ಕ್ಕೆ ಈ ವ್ಯಕ್ತಿ ದೆಹ​ಲಿಯ ಜಾಮಿಯಾ ಮಸೀದಿಯ ಧಾರ್ಮಿಕ ಸಭೆ​ಯಲ್ಲಿ ಪಾಲ್ಗೊಳ್ಳಲು 13 ಮಂದಿಯೊಂದಿಗೆ ರೈಲಲ್ಲಿ ಪ್ರಯಾಣಿಸಿದ್ದರು. ಮಾ.7ರಿಂದ 11ರವರೆಗೆ ಅಲ್ಲೇ ಇದ್ದು, ಮಾ.14ಕ್ಕೆ ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದರು. ಸರ್ಕಾರಿ ಬಸ್ಸಲ್ಲಿ ಶಿರಾಕ್ಕೆ ಹೋಗಿದ್ದರು. ಮಾ.18ಕ್ಕೆ ಕೆಮ್ಮು, ಜ್ವರ ಆರಂಭವಾಗಿ ಶಿರಾದಲ್ಲಿ 2-3 ದಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ರೋಗ ಉಲ್ಬಣವಾದ್ದರಿಂದ ಮಾ.23ಕ್ಕೆ ಜಿಲ್ಲಾಸ್ಪತ್ರೆಗೆ ಹೋಗಿದ್ದರು. ಮಾ.26ರ ರಾತ್ರಿ 10.30ಕ್ಕೆ ಈ ವ್ಯಕ್ತಿಗೆ ಕೋವಿಡ್‌-19 ಇರುವುದು ದೃಢಪಟ್ಟಿದೆ. ಮಾ.27ರಂದು ಬೆಳಗ್ಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡು 10.30ಕ್ಕೆ ಜಿಲ್ಲಾಸ್ಪತ್ರೆಯಲ್ಲೇ ಮೃತಪಟ್ಟರು.

ವೈಜ್ಞಾನಿಕವಾಗಿ ಅಂತ್ಯಸಂಸ್ಕಾರ: ಮೃತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ತುಮಕೂರಿನಲ್ಲಿ ಕೆಲವೇ ಕೆಲವರ ಸಮ್ಮುಖದಲ್ಲಿ ವೈಜ್ಞಾನಿಕವಾಗಿ ನೆರವೇರಿಸಲಾಯಿತು. 9 ಅಡಿ ಆಳ​ದಲ್ಲಿ ಶವ ಸಂಸ್ಕಾರ ನಡೆಯಿತು. ಕೇವಲ ಇಬ್ಬ​ರು ಸಂಬಂಧಿ​ಕ​ರಿಗೆ ಅಂತ್ಯ​ಕ್ರಿ​ಯೆ​ಯಲ್ಲಿ ಭಾಗ​ವ​ಹಿ​ಸಲು ಅವಕಾಶ ನೀಡ​ಲಾ​ಗಿ​ತ್ತು.

20 ಮಂದಿ ಮೇಲೆ ನಿಗಾ:

ಮೃತ ವ್ಯಕ್ತಿಗೆ ಕೊರೋನಾ ದೃಢಪಡುತ್ತಿದ್ದಂತೆ ಕುಟುಂಬದ 20 ಮಂದಿಯನ್ನು ಮನೆಯಲ್ಲೇ ಐಸೋಲೇಟ್‌ ಮಾಡಲಾಗಿದ್ದು, ಇವರಲ್ಲಿ ಪ್ರಾಥಮಿಕ ಹಂತದ ಸಂಪರ್ಕದಲ್ಲಿದ್ದ 8 ಮಂದಿ ಗಂಟಲದ್ರವ ಮಾದರಿಗಳನ್ನು ಪರೀಕ್ಷೆಗೊಳÜ​ಪ​ಡಿ​ಸ​ಲಾ​ಗಿದೆ. ಅವು ನೆಗೆಟಿವ್‌ ಬಂದಿದೆ. ಉಳಿದವರ ವರದಿ ಇನ್ನಷ್ಟೇ ಬರಬೇಕಿದೆ. ಮೃತ ವ್ಯಕ್ತಿಗೆ ಇಬ್ಬರು ಪತ್ನಿಯರಿದ್ದು ಇವರ ಪೈಕಿ ಒಬ್ಬರು ಮೃತಪಟ್ಟಿದ್ದರೆ, 9 ಮಕ್ಕಳು ಹಾಗೂ 7 ಮಂದಿ ಮೊಮ್ಮಕ್ಕಳಿದ್ದಾರೆ.

ಸರ್ಕಾರಕ್ಕೆ ತಲೆನೋವು

- ನಂಜನಗೂಡಿನಲ್ಲಿ ಇದೇ ರೀತಿ ವ್ಯಕ್ತಿಯೊಬ್ಬರಿಗೆ ಸೋಂಕು ದೃಢ, ಈಗ ಶಿರಾದ ವ್ಯಕ್ತಿ ಸಾವು

- 13 ಜನರ ಜತೆ ಧಾರ್ಮಿಕ ಸಭೆಗಾಗಿ ದೆಹಲಿಗೆ ಹೋಗಿದ್ದ ವೃದ್ಧ. ಮಸೀದಿಯಲ್ಲಿ 5 ದಿನ ವಾಸ

- ಬಳಿಕ ರೈಲಲ್ಲೇ ಬೆಂಗಳೂರಿಗೆ. ಸರ್ಕಾರಿ ಬಸ್ಸಲ್ಲಿ ಶಿರಾಕ್ಕೆ. 2-3 ದಿನದಲ್ಲಿ ತೀವ್ರ ಅನಾರೋಗ್ಯ

- ಖಾಸಗಿ ಆಸ್ಪತ್ರೆಗಳಲ್ಲಿ ಹಲವು ಬಾರಿ ಚಿಕಿತ್ಸೆ ಪಡೆದು, ಬಳಿಕ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು

- 3 ದಿನಗಳ ಚಿಕಿತ್ಸೆ ಹೊರತಾಗಿಯೂ ಉಸಿರಾಟದ ತೊಂದರೆ ಉಲ್ಬಣ. ನಿನ್ನೆ ಬೆಳಗ್ಗೆ ಸಾವು

- ಯಾರಿಂದ ಸೋಂಕು ಹಬ್ಬಿತು ಎಂಬುದೇ ನಿಗೂಢ. ಮೂಲ ಪತ್ತೆ ಸರ್ಕಾರಕ್ಕೆ ಹೊಸ ಸವಾಲು

click me!