ಇದು ವೈದ್ಯಕೀಯ ಸಿಬ್ಬಂದಿ, ಪೊಲೀಸರಿಗೆ ನೆರವಾಗಬಲ್ಲದು| ಮೇಕರ್ಸ್ ಹಬ್ಬ ವಿದ್ಯಾರ್ಥಿಗಳ ಸಾಧನೆ| ಫೇಸ್ ಶೀಲ್ಡ್‌ಗೆ ಕೋವಿಡ್ -19ರ ವೈದ್ಯಕೀಯ ನೋಡಲ್ ಅಧಿಕಾರಿ ಡಾ. ಶರದ್ ನಾಯಕ ಅನುಮತಿ|
ರಾಘವೇಂದ್ರ ಹೆಬ್ಬಾರ
ಭಟ್ಕಳ(ಏ.06): ಭಟ್ಕಳದಲ್ಲಿ 8 ಮಂದಿಗೆ ಕೋವಿಡ್-19 ಸೋಂಕು ಬಂದ ಬಳಿಕ ಜನತೆ ಹೆಚ್ಚು ಜಾಗ್ರತೆ ವಹಿಸುತ್ತಿದ್ದಾರೆ. ನಮ್ಮದೇ ತಾಲೂಕಿನ ಬೆಳಕೆಯ ಧೃತಿ ಸರ್ಜಿಕಲ್ ಫ್ಯಾಕ್ಟರಿಯಲ್ಲಿ ಪಿಪಿಇ ಕಿಟ್ ತಯಾರು ಮಾಡಿ ಎಲ್ಲೆಡೆ ಸರಬರಾಜು ಮಾಡುತ್ತಿದ್ದರೆ, ಪಟ್ಟಣದ ಮದೀನಾ ಕಾಲೋನಿಯ ಮೇಕರ್ಸ್ ಹಬ್ ವಿದ್ಯಾರ್ಥಿಗಳ ಸಂಘ ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರಿಗೆ ನೆರವಾಗಬಲ್ಲ ಫೇಸ್ ಶೀಲ್ಡ್ ತಯಾರಿಸಿ ಗಮನ ಸೆಳೆದಿದೆ.
undefined
ಕೊರೋನಾ ವೈರಸ್ ತಡೆಯಲು ಕೇವಲ ಮಾಸ್ಕವೊಂದೇ ಸಾಲದು. ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಹೋರಾಡಲು ಫೇಸ್ ಶೀಲ್ಡ್ (ಮುಖಕ್ಕೆ ಹಾಕಿಕೊಳ್ಳುವ ಗುರಾಣಿ) ಅಗತ್ಯ ಬೇಕು. ಇದು ಸರ್ಕಾರದ ಬಳಿ ಲಭ್ಯವಿಲ್ಲ, ಅಷ್ಟು ಸುಲಭದಲ್ಲಿ ಮಾರುಕಟ್ಟೆಯಲ್ಲಿ ಇದು ಸಿಗುವುದೂ ಇಲ್ಲ. ಇದರ ಅಗತ್ಯ ಮನಗಂಡ ಮೇಕರ್ಸ್ ಹಬ್ ವಿದ್ಯಾರ್ಥಿಗಳು ಅತಿ ಅಗತ್ಯವಾದ ಫೇಸ್ ಶೀಲ್ಡ್‌ನ್ನು ಸಿದ್ಧಪಡಿಸುತ್ತಿದ್ದಾರೆ. ಸದ್ಯ ಮೇಕರ್ಸ್ ಹಬ್‌ನವರು ಇದನ್ನು ಕೈಯಿಂದಲೇ ತಯಾರಿಸುತ್ತಿದ್ದು, ಆರಂಭದಲ್ಲಿ 100 ಫೇಸ್ ಶೀಲ್ಡ್ ಸಿದ್ಧಗೊಳಿಸಲಾಗಿದ್ದು, ಇದಕ್ಕೆ ಕೋವಿಡ್ -19ರ ವೈದ್ಯಕೀಯ ನೋಡಲ್ ಅಧಿಕಾರಿ ಡಾ. ಶರದ್ ನಾಯಕ ಅನುಮತಿ ಕೂಡ ನೀಡಿದ್ದಾರೆ.
10 ದಿನದಲ್ಲಿ ಹೆಚ್ಚು ಕೊರೋನಾ, ಮಾನಸಿಕವಾಗಿ ಸಿದ್ಧರಾಗಿ: ಡಾ. ದೇವಿ ಶೆಟ್ಟಿ
ಮುಂದೆ ಇದನ್ನು ಸಿದ್ಧಗೊಳಿಸುವ ಯಂತ್ರವನ್ನು ತಂದು ಅದರಲ್ಲಿ ದಿನಕ್ಕೆ 500 ಫೇಸ್ ಶೀಲ್ಡ್ ತಯಾರಿಸಿ ಕೊರೋನಾ ವಿರುದ್ಧದ ಹೋರಾಟಕ್ಕೆ ನೀಡಲು ಸಿದ್ಧತೆ ನಡೆಸಿದ್ದಾರೆ. ಎಂಜಿನಿಯರಿಂಗ್ ಕಲಿಯುತ್ತಿರುವ ಮತ್ತು ಇತರ ಆಸಕ್ತ ವಿದ್ಯಾರ್ಥಿಗಳು ಸೇರಿ 2017ರಲ್ಲಿ ಮದೀನಾ ಕಾಲೋನಿಯ ಕುತುಬ್ ಮಹಲ್‌ನಲ್ಲಿ ಮೇಕರ್ಸ್ ಹಬ್‌ನ್ನು ಹುಟ್ಟು ಹಾಕಿದ್ದು, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಯೋಜನೆಗಳನ್ನು ಸಿದ್ಧಗೊಳಿಸಿ ಅವರಿಗೆ ಮಾರ್ಗದರ್ಶನ ನೀಡುವುದು ಸೇರಿದಂತೆ ಯುವ ಪೀಳಿಗೆಗೆ ಆಸಕ್ತಿಯನ್ನು ಬೆಳೆಸಲು ಕಾರ್ಯಾಗಾರ ಆಯೋಜಿಸುವುದು, ಎಲ್ಲ ರೀತಿಯ ತಾಂತ್ರಿಕ ಪರಿಕರಗಳು, ಯಂತ್ರೋಪಕರಣಗಳು, ಸಾಫ್ಟ್‌ವೇರ್‌ಗಳು, ತಾಂತ್ರಿಕ ಬೆಂಬಲ ಮತ್ತು ಮಾರ್ಗದರ್ಶನ ಒಂದೇ ಸೂರಿನಡಿ ಒದಗಿಸುವುದು ಇದರ ಪ್ರಮುಖ ಕಾರ್ಯವಾಗಿದೆ.
ನಾವು ಸಿದ್ಧಗೊಳಿಸಿದ ಫೇಸ್ ಶೀಲ್ಡ್ ಬಾಯಿ, ಕಣ್ಣು, ಮೂಗುಗಳಿಗೆ ಸೂಕ್ತ ರಕ್ಷಣೆ ಒದಗಿಸುತ್ತದೆ. ಅಲ್ಲದೇ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೂ ಇದು ಅತ್ಯಂತ ಉಪಯುಕ್ತವಾಗಿದ್ದು, ನಮ್ಮಲ್ಲಿ ಯಂತ್ರ ಇದ್ದಿದ್ದರೆ ನಾವು ಸಾಕಷ್ಟು ಫೇಸ್ ಶೀಲ್ಡ್ ಪೂರೈಕೆ ಮಾಡುತ್ತಿದ್ದೆವು ಎಂದು ಮೇಕರ್ಸ್ ಹಬ್‌ನ ಸದಸ್ಯ ಸುಹೈಲ್ ದಾಮೋದಿ ಅವರು ಹೇಳಿದ್ದಾರೆ.