ಭಾರತ್‌ ಲಾಕ್‌ಡೌನ್‌: 'ನಿರ್ಗತಿಕರಿಗೆ ಆಹಾರ ವಿತ​ರಿ​ಸುವುದಕ್ಕೆ ಅನು​ಮ​ತಿ ಕಡ್ಡಾಯ'

By Kannadaprabha NewsFirst Published Mar 30, 2020, 8:38 AM IST
Highlights

ಆಹಾರ ಪೋಲಾಗುವುದನ್ನು ತಡೆಯಲು ಕ್ರಮ| ಆಹಾರ ಬೇಡಿಕೆ ಇರುವ ಸ್ಥಳದ ಬಗ್ಗೆ ಸಂಘ ಸಂಸ್ಥೆಗಳಿಗೆ ಮಾಹಿತಿ: ಮೇಯರ್‌| ವಿವಿಧ ಸಂಘ ಸಂಸ್ಥೆಗಳು, ಯುವಕರ ಗುಂಪುಗಳು ನಗರದ ನಿರ್ಗತಿಕರು, ಕೊಳೆಗೇರಿ ನಿವಾಸಿಗಳಿಂದ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ಪೂರೈಕೆ| ಬಿಬಿಎಂಪಿ ಇಂದಿರಾ ಕ್ಯಾಂಟೀನ್‌ ಮೂಲಕ ಆಯ್ದ ಸ್ಥಳದಲ್ಲಿ ಆಹಾರ ಪ್ಯಾಕೇಟ್‌ ವಿತರಣೆ| 

ಬೆಂಗಳೂರು(ಮಾ.30): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದ ಭಿಕ್ಷುಕರಿಗೆ, ನಿರ್ಗತಿಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ವಿತರಿಸುವ ಸಂಘ-ಸಂಸ್ಥೆಗಳು ಕಡ್ಡಾಯವಾಗಿ ಬಿಬಿಎಂಪಿಯಿಂದ ಅನುಮತಿ ಪಡೆಯಬೇಕು ಎಂದು ಬಿಬಿಎಂಪಿ ಹಣಕಾಸು ವಿಭಾಗದ ಜಂಟಿ ಆಯುಕ್ತ ವೆಂಕಟೇಶ್‌ ತಿಳಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ವಿವಿಧ ಸಂಘ ಸಂಸ್ಥೆಗಳು, ಯುವಕರ ಗುಂಪುಗಳು ನಗರದ ನಿರ್ಗತಿಕರು, ಕೊಳೆಗೇರಿ ನಿವಾಸಿಗಳು, ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಇನ್ನು ಬಿಬಿಎಂಪಿ ಇಂದಿರಾ ಕ್ಯಾಂಟೀನ್‌ ಮೂಲಕ ಆಯ್ದ ಸ್ಥಳದಲ್ಲಿ ಆಹಾರ ಪ್ಯಾಕೇಟ್‌ ವಿತರಿಸಲಾಗುತ್ತಿದೆ. ಸಂಘ ಸಂಸ್ಥೆಗಳು ಬಿಬಿಎಂಪಿಗೆ ತಿಳಿಯದೇ ತಮ್ಮಗೆ ಇಚ್ಛೆ ಬಂದ ಕಡೆ ಆಹಾರ ವಿತರಿಸುವುದರಿಂದ ಆಹಾರ ಪೋಲು ಆಗುವ ಸಾಧ್ಯತೆ ಇರುವುದರಿಂದ ಆಹಾರ ವಿತರಿಸುವ ಎಲ್ಲರೂ ಬಿಬಿಎಂಪಿಯಿಂದ ಅನುಮತಿ ಪಡೆಯುವುದು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.

ದೇಶದ ಮೊದಲ ಕೊರೋನಾ ಟೆಸ್ಟಿಂಗ್ ಕಿಟ್ ಸಿದ್ಧಪಡಿಸಿದ ಗರ್ಭವತಿ!

ಅನುಮತಿ ಪಡೆದ ಸಂಘ ಸಂಸ್ಥೆಗಳಿಗೆ ಸಹಾಯವಾಣಿ ಮೂಲಕ ಆಹಾರದ ಬೇಡಿಕೆ ಬರುವ ಸ್ಥಳದ ಬಗ್ಗೆ ಮಾಹಿತಿ ನೀಡಲಾಗುವುದು. ಅಲ್ಲಿ ಹೋಗಿ ವಿತರಣೆ ಮಾಡುವುದರಿಂದ ಆಹಾರ ಸದ್ಬಳಕೆ ಆಗಲಿದೆ. ಎಲ್ಲ ಸಂಘ ಸಂಸ್ಥೆಗಳಿಗೆ ಆಹಾರ ಪೂರೈಸಲು ಅನುಮತಿ ನೀಡಲು ಸಾಧ್ಯವಿಲ್ಲ. ಆಹಾರ ತಯಾರಿಸುವ ಸ್ಥಳ, ತಯಾರಿಕೆ ಮತ್ತು ಪ್ಯಾಕಿಂಗ್‌ ವೇಳೆ ಅನುಸರಿಸುವ ಸ್ವಚ್ಛತೆ, ಆಹಾರದ ಗುಣಮಟ್ಟಹಾಗೂ ಪೂರೈಕೆ ಮಾಡಲು ಇರುವ ವ್ಯವಸ್ಥೆ ನೋಡಿಕೊಂಡು ಅನುಮತಿ ನೀಡಲಾಗುತ್ತಿದೆ ಎಂದರು.

ಇಂದಿರಾ ಕ್ಯಾಂಟೀನ್‌ ಊಟ ಹೆಚ್ಚಳ:

ಕಳೆದ 3 ದಿನಗಳಿಂದ ಹೆಚ್ಚು ನಿರ್ಗತಿಕರು ಮತ್ತು ಕಾರ್ಮಿಕರು ಇರುವ ಕಡೆಗಳಲ್ಲಿ ಮಾತ್ರ 87 ಇಂದಿರಾ ಕ್ಯಾಂಟೀನ್‌ ಬಳಿ ಊಟ ನೀಡಲಾಗುತ್ತಿತ್ತು. ಆದರೆ ಭಾನುವಾರದಿಂದ 160 ಇಂದಿರಾ ಕ್ಯಾಂಟೀನ್‌ ಬಳಿ ಮೂರೂ ಹೊತ್ತಿಗೆ ಸೇರಿ 1,75,700 ಉಪಹಾರ ಮತ್ತು ಊಟ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಹಾರ ಪೂರೈಸುತ್ತಿರುವ ಸಂಸ್ಥೆಗಳು:

ಇಂದಿರಾ ಕ್ಯಾಂಟೀನ್‌- 1,75,700
ಹಿರೇಮಠ ಟಿವಿಎಸ್‌- 2000
ಜೈನ ಸಂಸ್ಥೆ- 14,000
ಕೆವಿಎನ್‌ ಸಂಸ್ಥೆ- 5,740
ಸುರೇಶ ಎನ್‌ಜಿಒ- 500
ಹಿರೇಮಠ್‌ ಕೆಎಂವೈಎಫ್‌- 1,600
ವಿಮಲ್‌ ಭಂಡಾರಿ- 850
ದಿ ಲೈಫ್‌ಲೈನ್‌ ಸಂಸ್ಥೆ - 755
ಅಮಿಶ್‌ ಕೊಠಾರಿ - 150

ಮೇಯರ್‌ ಶ್ಲಾಘನೆ

ನಗರದ ನಿರ್ಗತಿಕರಿಗೆ, ಭಿಕ್ಷಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡುತ್ತಿರುವ ಸಂಘ ಸಂಸ್ಥೆಗಳ ಕಾರ್ಯದ ಬಗ್ಗೆ ಬಿಬಿಎಂಪಿ ಮೇಯರ್‌ ಗೌತಮ್‌ ಕುಮಾರ್‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಭಾನುವಾರ ನಗರದ ಅರಮನೆ ಮೈದಾನದ ಬಳಿ ಜೈನ್‌ ಇಂಟರ್‌ ನ್ಯಾಷನಲ್‌ ಟ್ರೇಡ್‌ ಆರ್ಗನೈಜೇಷನ್‌ (ಜಿತೋ) ಬಡವರು, ನಿರ್ಗತಿಕರು ಮತ್ತು ಕೂಲಿ ಕಾರ್ಮಿಕರಿಗೆ ನೆರವಾಗಿವಂತೆ ಪ್ರತಿನಿತ್ಯ 40 ಸಾವಿರ ಊಟಗಳನ್ನು ತಯಾರಿಸಿ ಸರಬರಾಜು ಮಾಡುತ್ತಿದೆ. ಇಲ್ಲಿಗೆ ಮೇಯರ್‌ ಗೌತಮ್‌ ಕುಮಾರ್‌ ಅವರೊಂದಿಗೆ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಈ ವೇಳೆ ಪಾಲಿಕೆ ಹಣಕಾಸು ವಿಭಾಗದ ಜಂಟಿ ಆಯುಕ್ತ ಎಸ್‌. ವೆಂಕಟೇಶ್‌ ಉಪಸ್ಥಿತರಿದ್ದರು.
 

click me!