ಸಾಮಾಜಿಕ ಅಂತರ ಕೇಳಲೇಬೇಡಿ: ಮಾಂಸ ಖರೀದಿಗೆ ಮುಗಿಬಿದ್ದ ಜನತೆ!

By Kannadaprabha NewsFirst Published Apr 6, 2020, 7:17 AM IST
Highlights

ಮಾಸ್ಕ್‌ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಖರೀದಿ| ಕೊರೋನಾ ಭೀತಿ ನಿರ್ಲಕ್ಷ್ಯಿಸಿ ಮಾಂಸ ಖರೀದಿಸಲು ಮುಗಿಬಿದ್ದ ಜನತೆ| ತರಕಾರಿ ಮಾರಲು ಬಂದ ವಾಹನಗಳ ಬಳಿಯೂ ಜನರು ಗುಂಪು ಗುಂಪಾಗಿಯೇ ಸೇರಿದ್ದರು|

ಹುಬ್ಬಳ್ಳಿ(ಏ.06): ಲಾಕ್‌ಡೌನ್‌ ಘೋಷಣೆಯ 12ನೇ ದಿನವಾದ ಭಾನುವಾರ ಕೂಡ ಕೊರೋನಾ ಭೀತಿ ನಿರ್ಲಕ್ಷ್ಯಿಸಿ ಜನತೆ ಮಾಂಸ ಖರೀದಿಸಲು ಮುಗಿಬಿದ್ದ ಘಟನೆ ಇಲ್ಲಿನ ಗಣೇಶಪೇಟೆಯಲ್ಲಿ ಕಂಡುಬಂತು.

ಕೊರೋನಾ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸರ್ಕಾರ ಹಾಗೂ ಖಾಸಗಿ ಸಂಘ-ಸಂಸ್ಥೆಗಳು ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದರೂ ಯಾವುದಕ್ಕೂ ಬಗ್ಗದ ಜನರು ಎಂದಿನಂತೆ ಮಾಂಸ ಖರೀದಿಸಲು ಮುಂದಾದರು. ಭಾನುವಾರದ ಕಾರಣ ಬೆಳಗ್ಗೆ 7ರಿಂದಲೇ  ಮಟನ್‌ ಖರೀದಿಗೆ ಗುಂಪು ಗುಂಪಾಗಿ ಸೇರಿದ ಜನರು ಸ್ವತಃ ಅಂಗಡಿಕಾರರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳಿದರೂ ಮಾತು ಕೇಳಲಿಲ್ಲ.

ಊಟ ಸಿಗದೆ ಚಾಲಕ, ಕ್ಲೀನರ್‌ಗಳ ಪರದಾಟ: SP ಕಟಿಯಾರ್‌ರಿಂದ ಅನ್ನದಾನ!

ಮುಖಕ್ಕೆ ಮಾಸ್ಕ್‌ ಇಲ್ಲದೆ, ಸಾಮಾಜಿಕ ಅಂತರವಿಲ್ಲದೆ ಮಟನ್‌ ಖರೀದಿಸಿದರು. ಸ್ಥಳದಲ್ಲಿದ್ದ ಕೆಲವು ಪ್ರಜ್ಞಾವಂತರು ಕೊರೋನಾ ಬಗ್ಗೆ ತಿಳಿಹೇಳಿ ಗುಂಪು ಗೂಡುವುದನ್ನು ವಿರೋಧಿಸಿದರೂ ಅದನ್ನು ಕೇಳಲಿಲ್ಲ. ಬೆಳಗ್ಗೆ 11 ಗಂಟೆ ವರೆಗೆ ಇದೇ ಪರಿಸ್ಥಿತಿ ಮುಂದುವರಿಯಿತು. ಇನ್ನು, ಕೆಲವೆಡೆ ವಾರ್ಡ್‌ಗಳಲ್ಲಿ ತರಕಾರಿಗಳನ್ನು ಮಾರಲು ಬಂದ ವಾಹನಗಳ ಬಳಿಯೂ ಜನರು ಗುಂಪು ಗುಂಪಾಗಿಯೆ ಸೇರಿದ್ದು ಕಂಡುಬಂತು. ಜನ ಒಟ್ಟಿಗೆ ಸೇರಬಾರದು ಎಂಬ ಉದ್ದೇಶದಿಂದ ಮಾರುಕಟ್ಟೆಬಂದ್‌ ಮಾಡಿಸಲಾಗಿದ್ದರೂ ಇದರ ಅರಿವು ಇಲ್ಲದಂತೆ ಜನತೆ ವರ್ತಿಸಿದರು. ಹಲವೆಡೆ ಪೊಲೀಸರು ಇಲ್ಲದೆ, ಕಠಿಣ ಕ್ರಮ ಕೈಗೊಳ್ಳದೆ ಇರುವುದೆ ಇದಕ್ಕೆ ಕಾರಣವಾಗಿದೆ ಎಂದು ಜನತೆ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು, ಮಹಾನಗರದ ತುಂಬೆಲ್ಲ ವಾಹನಗಳ ಓಡಾಟ ಕೂಡ ನಿರಂತರವಾಗಿತ್ತು. ಕೆಲವೆಡೆ ಮಾತ್ರ ಮಾಸ್ಕ್‌ ಧರಿಸದವರನ್ನು ಪೊಲೀಸರು ತಡೆದು ವಾಪಸ್‌ ಕಳುಹಿಸಿದರು.

ಆಸ್ಪತ್ರೆ ಆರಂಭ

ಸಚಿವ ಜಗದೀಶ್‌ ಶೆಟ್ಟರ್‌ ಹೇಳಿಕೆಯಂತೆ ನಗರದ ಕೆಲವು ಖಾಸಗಿ ಆಸ್ಪತ್ರೆಗಳು ಆರಂಭವಾಗಿವೆ. ಆದರೆ ಭಾನುವಾರವಾದ ಕಾರಣ ಒಪಿಡಿ ಬಂದ್‌ ಆಗಿದ್ದವು. ಕೆಲವು ಆಸ್ಪತ್ರೆಗಳಲ್ಲಿ ಹೊರರೋಗಿಗಳನ್ನು ತಪಾಸಣೆ ಮಾಡಲಾಯಿತು. ಸೋಮವಾರ ನಗರದ ಬಹುತೇಕ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಇರಲಿದೆ. ಇದರಿಂದ ಜನತೆಗೆ ಅನುಕೂಲ ಆಗಲಿದೆ. ಆದರೆ ಆಸ್ಪತ್ರೆಗಳಲ್ಲಿ ಕೊರೋನಾ ಸಂಬಂಧಿಸಿದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಐಎಂಎ ಧಾರವಾಡದ ಉಪಾಧ್ಯಕ್ಷ ಡಾ. ಕ್ರಾಂತಿಕಿರಣ ತಿಳಿಸಿದರು.
 

click me!