ಧಾರವಾಡದಲ್ಲಿ ನಿಷೇಧಾಜ್ಞೆ ಸಡಿಲಿಕೆ ಆಯ್ತಾ? ಜನರ ನಿರಾತಂಕ ಓಡಾಟ

By Kannadaprabha News  |  First Published Apr 5, 2020, 7:50 AM IST

ಆರಂಭದಲ್ಲಿದ್ದ ಪೊಲೀಸ್‌ ಕಟ್ಟೆಚ್ಚರ ಈಗೇಕಿಲ್ಲ| ಎರಡು ದಿನಗಳಿಂದ ಹು-ಧಾ ನಗರದಲ್ಲಿ ಹೆಚ್ಚಿದ ಜನರ ಸಂಚಾರ| ಪ್ರಮುಖ ವೃತ್ತ-ರಸ್ತೆಗಳಲ್ಲಿ ಪೋಲಿಸರ ಕೊರತೆ| ಅಂಗಡಿ-ಮುಂಗಟ್ಟು ಸೇರಿದಂತೆ ಎಲ್ಲೆಡೆ ಕಡಿಮೆ ಆಗಿದೆ ಸಾಮಾಜಿಕ ಅಂತರ|


ಧಾರವಾಡ(ಏ.05): ಕಳೆದ ಹತ್ತು ದಿನಗಳ ಹಿಂದೆ ಇಲ್ಲಿನ ಹೊಸಯಲ್ಲಾಪುರ ವ್ಯಕ್ತಿಗೆ ಕೋವಿಡ್‌-19 ಕೊರೋನಾ ಪಾಸಿಟಿವ್‌ ಎಂಬ ಸುದ್ದಿ ಕೇಳಿ ಸಂಪೂರ್ಣ ಸ್ತಬ್ಧವಾಗಿದ್ದ ಧಾರವಾಡ ಜಿಲ್ಲೆಯು ಇದೀಗ ನಿರಾತಂಕವಾಗಿದೆ.

ಯಾರಿಗೂ ಕೊರೋನಾ ವೈರಸ್‌ನ ಭಯವಿಲ್ಲದೇ ಕಳೆದ ಎರಡು ದಿನಗಳಿಂದ ಜನ ಮನೆ ಬಿಟ್ಟು ಹೊರ ಬರುತ್ತಿದ್ದಾರೆ. ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ ಎಂಬಂತೆ ಜನ ಸಂಚಾರ ಸಾಮಾನ್ಯವಾಗಿದ್ದು, ಜಿಲ್ಲಾಡಳಿತ ಮೊದಲಿದ್ದ ಕಟ್ಟೆಚ್ಚರವನ್ನು ಸಡಿಲಿಕೆ ಮಾಡಲಾಗಿದೆಯೇ ಎಂಬ ಸಂಶಯ ವ್ಯಕ್ತವಾಗಿದೆ.

Tap to resize

Latest Videos

ಕಿಮ್ಸ್‌ನಲ್ಲಿ ಐಸೋಲೇಶನ್‌ದಲ್ಲಿರುವ ಕೊರೋನಾ ಸೋಂಕಿತ ವ್ಯಕ್ತಿ ಆರೋಗ್ಯ ಸ್ಥಿರವಾಗಿದ್ದು, ಆತನ ಗಂಟಲು ದ್ರವ ಪರೀಕ್ಷೆ ನೆಗೆಟಿವ್‌ ಬಂದಿದೆ. ಧಾರವಾಡದಲ್ಲಿ ಮತ್ತೆಲ್ಲೂ ಕೊರೋನಾ ವೈರಸ್‌ ಸೋಂಕಿತರು ಕಂಡು ಬರದ ಹಿನ್ನೆಲೆಯಲ್ಲಿ ಜನರು ಆತಂಕವಿಲ್ಲದೇ ಹೊರಬರುತ್ತಿದ್ದಾರೆ. ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಪೊಲೀಸ್‌ ವಿಚಾರಣೆ ಸಹ ಇಲ್ಲದಾಗಿದ್ದು, ಎಲ್ಲಿ ನೋಡಿದರು ಅಲ್ಲಿ ಬೈಕ್‌ ಹಾಗೂ ಕಾರು ಸವಾರರು, ಪಾದಚಾರಿಗಳು ಅಡ್ಡಾಡುತ್ತಿದ್ದಾರೆ. ಚೆಕ್‌ಪೋಸ್ಟ್‌ಗಳಲ್ಲಿ ಮೊದಲಿನಂತೆ ಪೊಲೀಸರು ಎಚ್ಚರ ವಹಿಸದೆ ಇರುವ ದೃಶ್ಯ ಸಾಮಾನ್ಯವಾಗಿದೆ.

ಪೊಲೀಸರ ಮೇಲೆ ಕಲ್ಲು ತೂರಾಟ: ಮತ್ತೆ ಹತ್ತು ಜನರ ಬಂಧನ

ಇನ್ನು, ಪೊಲೀಸರ ಭಯವಿಲ್ಲದ ಕಾರಣ ಅಂಗಡಿ-ಮುಂಗಟ್ಟುಗಳಲ್ಲಿ ಸಾಮಾಜಿಕ ಅಂತರ ಕಡಿಮೆಯಾಗಿದೆ. ಬಡ ಮಹಿಳೆಯರಿಗೆ ಜನ್‌ ಧನ್‌ ಯೋಜನೆ ಅಡಿ . 500 ಹಾಕಿದ್ದು ಅದನ್ನು ಪಡೆಯಲು ಮಹಿಳೆಯರು ಅಂತರ ಕಾಪಾಡಿಕೊಳ್ಳದೆ ನಿಲ್ಲುತ್ತಿದ್ದಾರೆ. ಸುಖಾಸುಮ್ಮನೆ ಅಡ್ಡಾಡುತ್ತಿರುವ 400ಕ್ಕೂ ಹೆಚ್ಚು ಬೈಕ್‌ಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದರೂ ಜನ ಮಾತ್ರ ಹೊರಗೆ ಬರುವುದನ್ನು ನಿಲ್ಲಿಸುತ್ತಿಲ್ಲ. ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಸಂಪೂರ್ಣ ಸಡಿಲಿಕೆ ಆಗಿದೆ. ಹುಬ್ಬಳ್ಳಿಯ ಚೆನ್ನಮ್ಮ ವೃತ್ತ, ಧಾರವಾಡದ ಕಲಾಭವನ ವೃತ್ತ, ಶಿವಾಜಿ ವೃತ್ತ ಸೇರಿದಂತೆ ಪ್ರಮುಖ ವೃತ್ತ ಹಾಗೂ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಾಣುತ್ತಿದೆ.

ಸದ್ಯದ ಪರಿಸ್ಥಿತಿ ಗಮನಿಸಿದರೆ ನಗರದ ಜನರಿಗೆ ಕಿಂಚಿತ್ತೂ ಕೊರೋನಾ ಎಫೆಕ್ಟ್ ಆಗಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ಲಾಠಿ ಏಟು ಬೇಡ ಎಂಬ ಪೊಲೀಸ್‌ ಇಲಾಖೆ ಸೂಚನೆ ನಂತರ ಹಿರಿಯ ಅಧಿಕಾರಿಗಳು ಸಣ್ಣ ಅಧಿಕಾರಿಗಳನ್ನು ಕಟ್ಟಿಹಾಕಿದ್ದಾರೆ ಎನ್ನಲಾಗುತ್ತಿದೆ. ಪ್ರಧಾನ ಮಂತ್ರಿಗಳು 21 ದಿನಗಳ ಕಾಲ ಲಾಕ್‌ಡೌನ್‌ ಹೇರಿದ್ದಾರೆ. ಈ ಮೂಲಕ ಕೊರೋನಾ ವೈರಸ್‌ ಹಿಮ್ಮೆಟ್ಟಿಸಲು ಎಲ್ಲೆಡೆ ಪ್ರಯತ್ನ ನಡೆಯುತ್ತಿದೆ. ಲಾಕ್‌ಡೌನ್‌ ಪೂರ್ಣಗೊಳ್ಳಲು ಇನ್ನೂ ಹತ್ತು ದಿನಗಳ ಕಾಲ ಬಾಕಿ ಇದ್ದು ಕಟ್ಟುನಿಟ್ಟಿನ ನಿಷೇಧಾಜ್ಞೆ ಮತ್ತೆ ಜಾರಿ ಮಾಡಬೇಕಿದೆ.
 

click me!