ಕೊರೋನಾ ಶಂಕೆಯ ಬೆನ್ನಲ್ಲೇ ತನ್ನ ಮಾವನ ಊರಿಗೆ ಬಂದಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಗ್ರಾಮದಿಂದ ಹೊರ ಹೋಗುವಂತೆ ಆತನ ಮೇಲೆ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಒಂಬತ್ತುಗುಳಿ ಗ್ರಾಮದಲ್ಲಿ ನಡೆದಿದೆ.
ಕೋಲಾರ(ಮಾ.28): ವಿಶ್ವದೆಲ್ಲೆಡೆ ಕೊರೋನಾ ವೈರಸ್ ಸದ್ದು ಮಾಡಿ ಎಲ್ಲರನ್ನೂ ತಲ್ಲಣಗೊಳಿಸಿರುವಾಗ ಬೆಂಗಳೂರಿನಿಂದ ಅಫ್ಜಲ್ ಪಾಷ ಎಂಬಾತ ತನ್ನ ಮಾವನ ಊರಿಗೆ ಬಂದಿದ್ದಕ್ಕೆ ಗ್ರಾಮಸ್ಥರು ವಿರೋಧವ್ಯಕ್ತಪಡಿಸಿ ಗ್ರಾಮದಿಂದ ಹೊರ ಹೋಗುವಂತೆ ಆತನ ಮೇಲೆ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಒಂಬತ್ತುಗುಳಿ ಗ್ರಾಮದಲ್ಲಿ ನಡೆದಿದೆ.
ಕಳೆದ 10 ದಿನಗಳ ಹಿಂದೆ ಬೆಂಗಳೂರಿನ ಪಿಲ್ಲಣ್ಣ ಗಾರ್ಡನ್ ಬಡಾವಣೆಯಿಂದ ಅಫ್ಜಲ್ ಪಾಷ ಒಂಬತ್ತುಗುಳಿ ಗ್ರಾಮದಲ್ಲಿರುವ ತನ್ನ ಮಾವನ ಮನೆಗೆ ಬಂದಿದ್ದು, ದೇಶದಲ್ಲಿ ಸೇರಿದಂತೆ ರಾಜ್ಯದಲ್ಲಿಯೂ ಕೊರೋನಾ ವೈರಸ್ ವ್ಯಾಪಕವಾಗಿ ಹರಡಿರುವುದರಿಂದ ಅಫ್ಜಲ್ ಪಾಷರಿಗೆ ಕೊರೋನಾ ಸೋಂಕಿಗೆ ಎಂದು ಗ್ರಾಮದ ವೆಂಕಟೇಶ್ ಮತ್ತು ವಿಶ್ವನಾಥ್ ಆರೋಪಿಸಿ ಪ್ರಚಾರ ಮಾಡುತ್ತಿದ್ದರು ಎನ್ನಲಾಗಿದೆ.
undefined
ಗುಡ್ ನ್ಯೂಸ್: ಬೆಂಗಳೂರು ವಿಜ್ಞಾನಿಗಳಿಂದ ಕೊರೋನಾ ನಿಷ್ಕ್ರಿಯ ಯಂತ್ರ!
ನಿನ್ನೆ ಅಫ್ಜಲ್ ಪಾಷಾ ಗ್ರಾಮದ ಅಂಗಡಿಯೊಂದರ ಬಳಿ ಇದ್ದಾಗ ಮತ್ತೆ ಆರೋಪಿಗಳು ತಕರಾರು ತೆಗೆದು ಗಲಾಟೆ ಮಾಡಿ ಕೊರೋನಾ ಸೋಂಕಿತ ವ್ಯಕ್ತಿ ನೀನು ಗ್ರಾಮ ಬಿಟ್ಟು ಹೋಗು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ನನಗೆ ಯಾವುದೇ ಕೊರೋನಾ ಸೋಂಕಿಲ್ಲ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಂಡಿರುವೆ ಎಂದು ಹೇಳಿದರೂ ಕೇಳದೆ ನಿನ್ನಿಂದ ಇಡೀ ಗ್ರಾಮವೇ ಸೋಂಕಿನಿಂದ ಬಳಲುವಂತಾಗಲಿದೆ ಎಂದು ಹೇಳಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಆರೋಪಿಗಳ ಜೊತೆ ವೇಣು, ಮುರಳಿ, ಮಂಜುನಾಥ್, ರಾಜೇಶ್ ಮತ್ತು ಶ್ಯಾಮ್ ಸೇರಿಕೊಂಡು ಅಫ್ಜಲ್ ಪಾಷಾರ ಮೇಲೆ ಹಲ್ಲೆ ನಡೆಸಿ ಗ್ರಾಮದಿಂದ ಹೊರ ಹೋಗುವಂತೆ ತಾಕೀತು ಮಾಡಿದ್ದಾರೆ. ಇದರಿಂದ ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದ್ದು, ಸಕಾಲಕ್ಕೆ ಪೊಲೀಸರು ಗ್ರಾಮಕ್ಕೆ ಬಂದು ಯಾವುದೇ ಗಲಭೆಯಾಗದಂತೆ ತಡೆದು ಗ್ರಾಮದಲ್ಲಿ ಬಿಗಿ ಬಂದೋಬಸ್‌್ತ ಮಾಡಿದ್ದಾರೆ.