ದೇಶದಲ್ಲಿ ಮೊದಲ ಕೊರೋನಾಗೆ ಸಾವಿಗೆ ಸಾಕ್ಷಿಯಾಗಿದ್ದ ಕಲಬುರಗಿ ಜಿಲ್ಲೆ| ಜಿಲ್ಲಾಡಳಿತ ಜಾರಿಗೆ ತಂದಿತ್ತು ಕಟ್ಟುನಿಟ್ಟಿನ ಲಾಕ್‌ಡೌನ್, ನಿರ್ಬಂಧ|ಸದ್ಯ ಜಿಲ್ಲೆಯಲ್ಲಿ ಇಬ್ಬರಲ್ಲಷ್ಟೇ ಸೋಂಕು ಪತ್ತೆಯಾಗಿದ್ದು, ಅವರ ಆರೋಗ್ಯವೂ ಸ್ಥಿರ|
ಕಲಬುರಗಿ(ಮಾ.30): ಕೊರೋನಾ ಸೋಂಕಿನಿಂದಾಗಿ ದೇಶದಲ್ಲಿ ಮೊದಲು ಸಾವು (ಮಾ.10) ಸಂಭವಿಸಿದ್ದ ಕಲಬುರಗಿಯಲ್ಲಿ ಕಳೆದ 11 ದಿನಗಳಿಂದ ಸೋಂಕಿನ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಜಿಲ್ಲೆಯಲ್ಲಿ ಮೊದಲ ಪ್ರಕರಣ ಪತ್ತೆಯಾಗುತ್ತಿದ್ದಂತೆ ಜಿಲ್ಲಾಡಳಿತ ಜಾರಿಗೆ ತಂದ ಕಟ್ಟುನಿಟ್ಟಿನ ನಿರ್ಬಂಧ, ಲಾಕ್‌ಡೌನ್ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಇಬ್ಬರಲ್ಲಷ್ಟೇ ಸೋಂಕು ಪತ್ತೆಯಾಗಿದ್ದು, ಅವರ ಆರೋಗ್ಯವೂ ಸ್ಥಿರವಾಗಿದೆ.
ಮೆಕ್ಕಾದಿಂದ ಬಂದಿದ್ದ ವ್ಯಕ್ತಿ ಮಾ.10 ರಂದು ಕೊರೋನಾಗೆ ತುತ್ತಾಗಿ ಸಾವಿಗೀಡಾಗುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತವಾದ ಜಿಲ್ಲಾಡಳಿತ ಮೃತ ವ್ಯಕ್ತಿ ಜತೆ ಸಂಪರ್ಕದಲ್ಲಿದ್ದವರನ್ನು ತಕ್ಷಣ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್ ಮಾಡಿತು. ಜತೆಗೆ, ಕಲಬುರಗಿಯಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೆ ತರಲಾಯಿತು. ಇದರಿಂದ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಪುತ್ರಿ, ಚಿಕಿತ್ಸೆ ನೀಡಿದ ಕುಟುಂಬ ವೈದ್ಯರನ್ನು ಹೊರತುಪಡಿಸಿ ಬೇರಿನ್ಯಾರಿಗೂ ಹರಡದಂತೆ ನೋಡಿಕೊಳ್ಳಲಾಯಿತು. ವಿದೇಶದಿಂದ ಆಗಮಿಸಿದ ಜತೆಗೆ, ಶಂಕಾಸ್ಪದ 900 ಕ್ಕೂ ಹೆಚ್ಚು ಮಂದಿಯನ್ನು ಹೋಂ ಕ್ವಾರೆಂಟೈನ್‌ನಲ್ಲಿಡಲಾಯಿತು.
ಲಾಕ್‌ಡೌನ್ ವಿಸ್ತರಣೆ ವದಂತಿ ಅಲ್ಲಗೆಳೆದ ಭಾರತ ಸರ್ಕಾರ!
ಇಡೀ ದೇಶ ಕಳೆದ ನಾಲ್ಕು ದಿನಗಳಿಂದ ಲಾಕ್‌ಡೌನ್ ಆಗಿದ್ದರೆ ಕಲಬುರಗಿ ಜಿಲ್ಲೆ ಮಾ. 12 ರಿಂದಲೇ ಜಿಲ್ಲಾಡಳಿತ ವಿಧಿಸಿದ ಹಲವು ದಿಗ್ಭಂದನಗಳಿಂದಾಗಿ ಲಾಕ್ ಆಗಿಬಿಟ್ಟಿದೆ. ಬಾರ್ ರೆಸ್ಟೋರೆಂಟ್ ಬಂದ್, ಹೋಟೆಲ್ ಉದ್ಯಮ ಬಂದ್, ಅಂತರ್ ಜಿಲ್ಲಾ ಪ್ರವಾಸ ಬಂದ್, 144 ಕಲಂ ಅಡಿ ನಿಷೇಧಾಜ್ಞೆ, ಕಲಬುರಗಿಯಿಂದ ಯಾರೂ ಹೊರ ಹೋಗುವಂತಿಲ್ಲ, ಕಲಬುರಗಿಗೆ ಯಾರೂ ಬರುವಂತಿಲ್ಲ ಎಂಬ ಅನೇಕ ಷರತ್ತುಗಳ ಹಿನ್ನೆಲೆಯಲ್ಲಿ ಸೋಂಕು ಹರಡಲು ಕಾರಣವಾಗಬಹುದಾದ ಜನಸಂಚಾರ ಕಟ್ಟುನಿಟ್ಟಾಗಿ ನಿಯಂತ್ರಣಗೊಂಡಿದ್ದರಿಂದ ಕಲಬುರಗಿಯಲ್ಲಿ ಕೊರೋನಾ ಹೆಮ್ಮಾರಿ ಇನ್ನಷ್ಟುಮಂದಿಗೆ ವಿಸ್ತರಿಸುವುದು ತಪ್ಪಿದಂತಾಗಿದೆ.